ಕೊರೋನಾ ಪಿಡುಗು ಜನ ಸಾಮಾನ್ಯರ ,
ಉಳ್ಳವರ , ಮಕ್ಕಳ ವಯಸ್ಸಾದವರ ಜೀವನದಲ್ಲಿ
ಒಂದೊಂದು ರೀತಿ ತನ್ನ ಆಟ ತೋರಿಸಿದೆ.
ಮುಂದಿನ ಹೊಸ ವರ್ಷ ಒಳ್ಳೆ ದಿನಗಳು ಬರಲಿ
ಎಂಬ ಹಾರೈಕೆಯ ಕವನ ಡಾII ರಜನಿ ಅವರಿಂದ.
ಒಂದು ವರುಷವ
ಹಿಂದಕ್ಕೆ ತಳ್ಳುವುದೆಂದರೆ
ಸುಮ್ಮನಲ್ಲ….
ಹಣ ,ಅಂತಸ್ತು
ಮೀರಿ
ಎದೆಗೂಡು ಹೊಕ್ಕ
ವೈರಿ ವೈರಸ್ಸು…
ಬಂದ ನೆಗಡಿಯೆಲ್ಲಾ
ಕೊರೋನಾ ಆಗದಿರಲಿ
ಎಂಬ ಪ್ರಾರ್ಥನೆಗಳು…
ಕಣ್ಣೆದುರು ವಯಸ್ಸಲ್ಲದ
ವಯಸ್ಸಲ್ಲಿ ಸತ್ತದ್ದನ್ನು ನೋಡಿ
ಎದೆ ಭಾರವಾದ ದಿನಗಳು…
ಬೆಳಗ್ಗೆ
ಬಾಯಿ ತುಂಬ ನಗು ಉಕ್ಕಿ
ರಾತ್ರಿ ದಿಂಬು
ನೆನೆದ ರಾತ್ರಿಗಳು…
ಮಗು ಮಾಸ್ಕ್
ಧರಿಸಿ ..
ಮುದ್ದಿಸಲೂ
ಹೆದರಿ …
ಶತ್ರು, ಮಿತ್ರ
ಪ್ರೇಮ ಪ್ರೀತಿ
ಪಿಡುಗು ಎದುರು
ಮಂಡಿಯೂರಿ ..
ಶತಮಾನದ
ದುಃಖ ದುಮ್ಮಾನ
ನೋವಿಗೆ
ಸಾಕ್ಷಿಯಾಗಿ ನಿಂತು …
ಹಗೆ, ದ್ವೇಷ
ಮಳೆಯಲ್ಲಿ
ಕೊಚ್ಚಿ
ಹೋಗಿ…
ಕಾಸು ಕೊಳ್ಳಲಾಗದ
ವಸ್ತು
ಮನುಜನ ಹತೋಟಿ
ಮೀರಿದ ವಸ್ತು…
ಯಾವುದೆಂದು
ತಿಳಿದು …
ಹೂ ಮುತ್ತು
ಎಳೆ ಬಿಸಿಲು
ಶುದ್ಧ ನಗೆ
ಅಂಗೈ ಕಾವು…
ತುಟಿ ತೇವಕ್ಕೆ
ಕಾದು
ಬಾ ವರುಷವೇ …
ತಂಗಾಳಿಯಾಗಿ
ತಂಪಾಗಿ
ನನ್ನೆಲ್ಲಾ
ತಪ್ಪುಗಳ…
ಸಮಾಧಿ ಮೇಲೆ
ನೆಟ್ಟಿರುವೆ
ಕೆಂಪು ಗುಲಾಬಿ.
ಡಾ|| ರಜನಿ