ತುಮಕೂರು: ಮಳೆಗಾಲ ಬಿತ್ತನೆಗೆ ಒಳ್ಳೆಕಾಲವೆಂಬಂತೆ ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಇನ್ನೊಂದು ವರ್ಷ ಬಾಕಿ ಇರುವಾಗಲೇ ಆಮ್ ಆದ್ಮಿ ಪಾರ್ಟಿ ಜಿಲ್ಲೆಯ ಗ್ರಾಮ ಮಟ್ಟದಲ್ಲಿ ತನ್ನ ಪಕ್ಷದ ‘ಬಿತ್ತನೆ’ ಕಾರ್ಯ ಚುರುಕುಗೊಳಿಸಿದೆ.
ತಳಮಟ್ಟದಲ್ಲಿ ಪಕ್ಷ ಸಂಘಟಿಸುವ ಕಾರ್ಯಕರ್ತರನ್ನು ರೂಪಿಸುವ ಸಲುವಾಗಿ ‘ಗ್ರಾಮ ಸಂಪರ್ಕ ಅಭಿಯಾನ’ ನಡೆಯುತಿದ್ದು, ಇದರ ಭಾಗವಾಗಿ ಜಿಲ್ಲಾ ಸಮಾವೇಶ ಈಚೆಗೆ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಯಶಸ್ವಿಯಾಗಿ ನಡೆದಿತ್ತು.
ಇದೀಗ ಮುಂದುವರೆದ ಭಾಗವಾಗಿ ಜಿಲ್ಲೆಯ 11ವಿಧಾನಸಭಾ ಕ್ಷೇತ್ರಗಳ ಬೂತ್ ಮಟ್ಟದ ಕಾರ್ಯಕರ್ತರನ್ನು ಒಳಗೊಂಡ ತಾಲ್ಲೂಕು ಸಮಾವೇಶಗಳಿಗೆ ಸಿದ್ದತೆ ನಡೆದಿದೆ.
ಜುಲೈ1ಕ್ಕೆ ಚಿಕ್ಕನಾಯಕನಹಳ್ಳಿ, 6ರಂದು ಕುಣಿಗಲ್, 7ಕ್ಕೆ ತಿಪಟೂರು ಸೇರಿದಂತೆ ಜುಲೈ 30 ಅಥವಾ ಆಗಸ್ಟ್ ಮೊದಲ ವಾರದಲ್ಲಿ ಜಿಲ್ಲೆಯ ಎಲ್ಲಾ 11ವಿಧಾನಸಭಾ ಕ್ಷೇತ್ರಗಳ ಸಮಾವೇಶಗಳು ಮುಗಿಯಲಿವೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಡಾ. ವಿಶ್ವನಾಥ್ ಹೇಳುತ್ತಾರೆ.
ಬೆದೆ ಮಳೆಯಲ್ಲಿ ಬಿತ್ತನೆ ಬೀಜ ಬೇಲಿಗೆ ಹೊಯ್ದರೂ ಹುಟ್ಟುತ್ತವೆ ಎಂಬ ನಾಣ್ಣುಡಿಯಂತೆ ಆಮ್ ಆದ್ಮಿ ಪಕ್ಷ ಈಗಾಗಲೇ ವಿಧಾನಸಭಾವಾರು ಸಂಭವನೀಯ ಅಭ್ಯರ್ಥಿಗಳನ್ನು ಪಟ್ಟಿ ಮಾಡಿ ಅವರನ್ನು ಸುಲಭವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿದೆ.
ಪಕ್ಷ ಸಂಘಟನೆಯಲ್ಲಿ ಪರಸ್ಪರ ಪೈಪೋಟಿ ಮೂಡಲೆಂದು ಒಂದೊಂದು ವಿಧಾನಸಭಾ ಕ್ಷೇತ್ರಕ್ಕೆ ಎರಡ್ಮೂರು ಸಂಭವನೀಯ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಒಂದು ವಿಧಾನಸಭಾ ಕ್ಷೇತ್ರಕ್ಕೆ ಕನಿಷ್ಠ ಒಬ್ಬರು, ಗರಿಷ್ಠ ಐವರು ಸಂಭವನೀಯ ಅಭ್ಯರ್ಥಿಗಳನ್ನು ಘೋಷಿಸುವ ಸಾಧ್ಯತೆಗಳಿವೆ ಎಂದು ಪಕ್ಷದ ಮೂಲಗಳು ಹೇಳುತ್ತವೆ.
ಕುಣಿಗಲ್ ಕ್ಷೇತ್ರದಲ್ಲಿರುವ ಇಬ್ಬರು ಸಂಭವನೀಯ ಅಭ್ಯರ್ಥಿಗಳ ಪೈಕಿ ಜಯರಾಮಯ್ಯ ಜುಲೈ 6ರಂದು ತಾಲ್ಲೂಕು ಸಮಾವೇಶ ಹಮ್ಮಿಕೊಂಡಿದ್ದಾರೆ. ಕ್ಷೇತ್ರದ ಎಲ್ಲಾ ಬೂತ್ ಮಟ್ಟದಿಂದ ಸುಮಾರು 2ಸಾವಿರ ಕಾರ್ಯಕರ್ತರನ್ನು ಸಂಘಟಿಸಿ ಸಮಾವೇಶ ನಡೆಸುವುದಾಗಿ ಜಯರಾಮಯ್ಯ ಹೇಳುತ್ತಾರೆ.
ಪಾವಗಡ, ಶಿರಾ, ಕುಣಿಗಲ್, ತಿಪಟೂರು, ತುರುವೇಕೆರೆ, ತುಮಕೂರು ನಗರ, ಚಿಕ್ಕನಾಯಕನಹಳ್ಳಿ, ಗುಬ್ಬಿ ಕ್ಷೇತ್ರದಲ್ಲಿ ಪಕ್ಷದ ಮುಖಂಡರು ಸಮರ್ಥರಿದ್ದು, ತುಮಕೂರು ಗ್ರಾಮಾಂತರ ಸೇರಿ ಎರಡ್ಮೂರು ಕ್ಷೇತ್ರದಲ್ಲಿ ಮುಖಂಡರ ಕೊರತೆ ಇದೆ ಎಂಬುದನ್ನು ಜಿಲ್ಲಾಧ್ಯಕ್ಷ ಡಾ. ವಿಶ್ವನಾಥ್ ಒಪ್ಪುತ್ತಾರೆ.
ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಇಬ್ಬರು ಸಂಭವನೀಯ ಅಭ್ಯರ್ಥಿಗಳಿದ್ದು, ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಸಲುವಾಗಿ ಒಂದು ವಾರ ಕಾಲ ‘ಶ್ರೀಸಾಮಾನ್ಯ’ ಯಾತ್ರೆ ನಡೆಸಿದ ನಂತರ ಆಗಸ್ಟ್ ಮೊದಲ ವಾರದಲ್ಲಿ ತಾಲ್ಲೂಕು ಸಮಾವೇಶ ನಡೆಸುವುದಾಗಿ ಸಂಭವನೀಯ ಅಭ್ಯರ್ಥಿ ಪ್ರೇಮಕುಮಾರ್ ಅಂಕಸಂದ್ರ ಹೇಳುತ್ತಾರೆ.
ಗ್ರಾಮ ಮಟ್ಟದಲ್ಲಿ ಮಾತ್ರವಲ್ಲದೆ ತುಮಕೂರು ನಗರದಲ್ಲಿ ವಾರ್ಡ್ ವಾರು ಪಕ್ಷ ಸಂಘಟನೆ ಮಾಡಲು ಪದಾಧಿಕಾರಿಗಳು ಪ್ರತಿದಿನ ಮುಂಜಾನೆ ಒಂದು ಗಂಟೆ ಕಾಲ ಉದ್ಯಾನ ವನಗಳಲ್ಲಿ ಪಕ್ಷದ ಪರವಾಗಿ ಅಭಿಯಾನ ನಡೆಸವುದು. ನಾಗರಿಕರಿಂದ ಆಯಾ ವಾರ್ಡ್ ಸಮಸ್ಯೆಗಳನ್ನು ಕೇಳಿ ತಿಳಿದುಕೊಂಡು ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಭಿತ್ತರಿಸುವುದು. ಮುಂಜಾನೆ ಕಾರ್ಮಿಕರು, ಸಣ್ಣಪುಟ್ಟ ವ್ಯಾಪಾರಿಗಳು ಸೇರುವ ಕಡೆ ಚಹಾ ಡಬ್ಬಿಯೊಂದಿಗೆ ಹೋಗಿ ಅವರಿಗೆ ಚಹಾ ವಿತರಿಸಿ ಜನಸಾಮಾನ್ಯರಿಗೆ ಆಮ್ ಆದ್ಮಿ ಪಾರ್ಟಿಯ ಅಗತ್ಯವನ್ನು ಮನಗಾಣಿಸುವ ಬಗ್ಗೆ ಸಲಹೆ ನೀಡಿರುವುದಾಗಿ ಜಿಲ್ಲಾಧ್ಯಕ್ಷ ಡಾ ವಿಶ್ವನಾಥ್ ತಿಳಿಸಿದ್ದಾರೆ.