Publicstort
ತುಮಕೂರು: ಗ್ರಾಮೀಣ ಮತ್ತು ನಗರ ಪ್ರದೇಶಗಳ ಅಂಗನವಾಡಿ ಕೇಂದ್ರಗಳಿಗೆ ನಿವೇಶನ ಒದಗಿಸಬೇಕಾಗಿದ್ದು, ಕನಿಷ್ಠ ೨೦x೩೦ ಅಳತೆಯ ನಿವೇಶನಗಳನ್ನು ಪಾಲಿಕೆ, ಸ್ಥಳೀಯ ಸಂಸ್ಥೆಗಳ ಆಯುಕ್ತರು, ಪೌರಾಯುಕ್ತರು, ಮುಖ್ಯಾಧಿಕಾರಿಗಳು ಮತ್ತು ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಪಿಡಿಓಗಳು ನಿವೇಶನ ಒದಗಿಸುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಸೂಚಿಸಿದರು.
ಡಿಸಿ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಸೋಮವಾರ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಚರ್ಚಿಸಿದರು.
೧೫ನೇ ಹಣಕಾಸು ಪ್ರಗತಿ ಪರಿಶೀಲನೆ ನಡೆಸಿದ ಅವರು, ಕುಡಿಯುವ ನೀರು, ಅಮೃತ್ ನಿರ್ಮಲ ನಗರ ಯೋಜನೆ, ಅಂಬೇಡ್ಕರ್, ವಾಜಪೇಯಿ ವಸತಿ ಯೋಜನೆಗಳಡಿ ನಿರೀಕ್ಷಿತ ಪ್ರಗತಿ ಸಾಧಿಸುವಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು, ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.
ನೋಟಿಸ್ ಅವಧಿಯ ಭೂಮಿ ಅರ್ಜಿಗಳನ್ನು ೩೩ ದಿನಗಳೊಗಾಗಿ ವಿಲೇವಾರಿ ಮಾಡದ ತಹಶೀಲ್ದಾರ್, ಕಂದಾಯ ನಿರೀಕ್ಷಕ, ಸರ್ವೇ ಸೂಪರ್‌ವೈಸರ್‌ಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ೬೮೫೦ ಪಹಣಿ ಕಾಲಂ ೩/೯ ಮಿಸ್ ಮ್ಯಾಚ್ ಪ್ರಕರಣಗಳಿದ್ದು, ಶೀಘ್ರ ವಿಲೇವಾರಿ ಮಾಡುವಂತೆ ತಿಳಿಸಿದರು.
ಕಂದಾಯ ಇಲಾಖೆಯ ಸರ್ಕಾರಿ ಭೂಮಿಯಲ್ಲಿರುವ ಶಾಲೆಗಳನ್ನು ಶಿಕ್ಷಣ ಇಲಾಖೆಯ ಹೆಸರಿಗೆ ಕಾಯ್ದಿರಿಸಿ ಖಾತೆ ಮಾಡಿಸುವ ಕೆಲಸ ಪ್ರಗತಿಯಲ್ಲಿದೆ. ತುಮಕೂರು, ಮಧುಗಿರಿ ಶೈಕ್ಷಣಿಕ ಜಿಲ್ಲೆಗಳ ವ್ಯಾಪ್ತಿಯಲ್ಲಿ ಇರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ನಿಗಧಿತ ನಮೂನೆಯಲ್ಲಿ ಹಾಗೂ ಅಗತ್ಯ ದಾಖಲಾತಿಗಳೊಂದಿಗೆ ತಾಲೂಕು ಕಚೇರಿ ಹಾಗೂ ಸಂಬಂಧಿಸಿದ ಗ್ರಾಮ ಪಂಚಾಯ್ತಿಗಳಿಗೆ ಶಿಕ್ಷಣ ಇಲಾಖೆ ಬಿ.ಇ.ಓ, ಬಿ.ಆರ್.ಪಿ, ಮತ್ತು ಸಿ.ಆರ್.ಪಿ ಮೂಲಕ ಅರ್ಜಿ ಸಲ್ಲಿಸಬೇಕು. ತಾಲೂಕುವಾರು ಪ್ರತಿ ವಾರಕ್ಕೆ ಕನಿಷ್ಠ ೫ ಪ್ರಕರಣಗಳನ್ನು ಇತ್ಯರ್ಥಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕೋವಿಡ್ ಲಸಿಕಾಕರಣಕ್ಕೆ ಸಂಬAಧಿಸಿದAತೆ ೧೨-೧೪ ವಯೋಮಾನದವರ ಮೊದಲೆರಡು ಡೋಸ್ ಕ್ರಮವಾಗಿ ಶೇ ೧೧೪.೮%, ಶೇ.೯೧.೭ ಮತ್ತು ೧೫-೧೭ ವಯಸ್ಸಿನವರ ಲಸಿಕಾಕರಣ ಮೊದಲ ಡೋಸ್ ಶೇ.೮೦.೮% ಎರಡನೇ ಡೋಸ್ ಶೇ ೭೫.೫ ಇದ್ದು ಶೀಘ್ರ ಶೇ.೧೦೦ರಷ್ಟು ಲಸಿಕಾಕರಣ ಪೂರೈಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಜುಲೈ ೧೫ ರಿಂದ ಹತ್ತಿರದ ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ೧೮ ರಿಂದ ೫೯ರ ವಯೋಮಾನದವರಿಗೆ ಮುಂಜಾಗ್ರತಾ ಡೋಸ್ ನೀಡುತ್ತಿದ್ದು ಲಸಿಕಾಕರಣಕ್ಕೆ ಆದ್ಯತೆ ನೀಡುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಉಪವಿಭಾಗಾಧಿಕಾರಿ ವಿ.ಅಜಯ್, ತಹಶೀಲ್ದಾರ್ ಮೋಹನ್ ಕುಮಾರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀಧರ್ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.