Publicstory/prajayoga
ತುಮಕೂರು: ಜಿಲ್ಲೆಯಲ್ಲಿ ಮಳೆಯ ತೀವ್ರತೆ ಮುಂದುವರೆದಿದ್ದು, ಜಿಲ್ಲಾಡಳಿತ ಮಳೆಯ ಅವಘಡಗಳನ್ನು ಎದುರಿಸಲು ಸನ್ನದ್ಧರಾಗಿರಬೇಕು ಮತ್ತು ಚರಂಡಿ ಮತ್ತು ರಾಜಕಾಲುವೆಗಳಲ್ಲಿನ ತ್ಯಾಜ್ಯವನ್ನು ತಕ್ಷಣ ತೆರವುಗೊಳಿಸಬೇಕು ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ವಿವಿಧೆಡೆ ಮಳೆಯಿಂದ ಹಾನಿಗೊಳಗಾದ ಅಮಾನಿಕೆರೆ ಕೋಡಿ, ವಿದ್ಯುತ್ ಅವಗಢದಿಂದ ಮೃತಪಟ್ಟ ವ್ಯಕ್ತಿಯ ಮನೆ, ರಾಜಕಾಲುವೆ ಪ್ರದೇಶಗಳನ್ನು ವೀಕ್ಷಿಸಿ ಸಂತ್ರಸ್ತರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಸಚಿವರು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.
ಜಿಲ್ಲೆಯಲ್ಲಿ ಮಳೆಯಿಂದಾಗಿ ಜೀವಹಾನಿ/ ಜಾನುವಾರು ಸಾವು/ ಮನೆಹಾನಿ ಪ್ರಕರಣಗಳು ವರದಿಯಾಗಿದ್ದು ಅಧಿಕಾರಿಗಳು ವಿಪತ್ತನ್ನು ಎದುರಿಸಲು ಸರ್ವ ಸನ್ನದ್ದರಾಗಿರಬೇಕು ಎಂದರಲ್ಲದೇ ಜಿಲ್ಲಾ ಕೇಂದ್ರದಲ್ಲಿ ಕಮಾಂಡ್ ಸೆಂಟರ್ ತೆರೆದು, ದೂರವಾಣಿ ಕರೆ ಮೂಲಕ ಸಂತ್ರಸ್ತರಿಗೆ ಎಲ್ಲ ರೀತಿಯ ಅಗತ್ಯ ನೆರವು ನೀಡಬೇಕು.ದಿನದ 24×7 ಸಹಾಯವಾಣಿ ಕೇಂದ್ರ ಕೆಲಸ ನಿರ್ವಹಿಸಬೇಕು.ಆ್ಯಂಬುಲೆನ್ಸ್ ಸೇವೆ ಸದಾ ಸಿದ್ದವಿರಬೇಕೆಂದು ಡಿಎಚ್ಓ ಅವರಿಗೆ ಸೂಚಿಸಿದರು.
ಪಾಲಿಕೆ ವತಿಯಿಂದ ಹಿಟಾಚಿಯ ಮೂಲಕ ಚರಂಡಿಗಳಲ್ಲಿ, ರಾಜಕಾಲುವೆಗಳಲ್ಲಿ ಕಟ್ಟಿಕೊಂಡಿರುವ ತ್ಯಾಜ್ಯಗಳನ್ನು ವಿಲೇವಾರಿ ಮಾಡುವ ಮೂಲಕ ನೀರು ಸರಾಗವಾಗಿ ಹರಿಯಲು ಅನುವು ಮಾಡಿಕೊಡಬೇಕು, ಮಾನ್ಸೂನ್ ಮುನ್ನೆಚ್ಚರಿಕೆ ಚಟುವಟಿಕೆಗಳು ತ್ವರಿತ ಗತಿಯಲ್ಲಿ ನಡೆಯಬೇಕು ಎಂದ ಸಚಿವರು ಬೆಸ್ಕಾಂ ವತಿಯಿಂದ ನೆಲದ ಭಾಗದಲ್ಲಿರುವ ಟಿಸಿಗಳನ್ನು ಮೇಲೆತ್ತುವ ಕೆಲಸ ಆಗಬೇಕು, ಪ್ಯೂಸ್ಗಳನ್ನು ಪರೀಶೀಲಿಸಬೇಕು ಎಂದರು.
ಆಂಬುಲೆನ್ಸ್ ವಾಹನಗಳು ದಿನದ ಇಪ್ಪತ್ತು ನಾಲ್ಕು ಗಂಟೆಗಳ ಕಾಲ ಎಚ್ಚರಿಕೆಯಿಂದಿರಬೇಕು,ಸಾರ್ವಜನಿಕರು ಕರೆ ಮಾಡಿದ ತಕ್ಷಣ ಸ್ಪಂದಿಸಬೇಕು ಎಂದರು.
ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಮತ್ತು ಇಂಜಿನಿಯರ್‌ಗಳು ಪ್ರತಿದಿನ ಕೆರೆಗಳನ್ನು ಪರಿಶೀಲಿಸಬೇಕು ಮತ್ತು ಕೆರೆಗಳ ರಕ್ಷಣೆ ಬಗ್ಗೆ ಚಿಂತಿಸಬೇಕು,ಕೆರೆಗಳು ಬಿರುಕು ಬಿಡದಂತೆ ಎಚ್ಚರವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.