Publicstory/prajayoga
ತುಮಕೂರು: ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಜಿ. ಪರಮೇಶ್ವರ್ ಅವರ 71ನೇ ಹುಟ್ಟುಹಬ್ಬವನ್ನು ನಗರದ ಹೆಗ್ಗೆರೆಯಲ್ಲಿ ಸರಳವಾಗಿ ಆಚರಿಸಲಾಯಿತು.
ಹೆಗ್ಗೆರೆಯ ತಮ್ಮ ನಿವಾಸದಲ್ಲಿ ಅಭಿಮಾನಿಗಳು ಏರ್ಪಡಿಸಿದ್ದ ಸರಳ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಸಿದ್ದರಾಮೋತ್ಸವದ ಮೂಲಕ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಅನುಕೂಲವಾಗಿದೆ. ಸುಮಾರು 10 ಲಕ್ಷಕ್ಕೂ ಹೆಚ್ಚು ಜನ ದಾವಣಗೆರೆಯಲ್ಲಿ ಸೇರಿದ್ದರು. ಹಾಗಾಗಿ ನಮಗೂ ಒಂದು ರೀತಿಯ ಬಲ ಬಂದಿದೆ ಎಂದು ಹೇಳಿದರು.
ನನಗೆ ಇಂದಿಗೆ 71 ವರ್ಷ ತುಂಬಿದೆ. ಅತ್ಯಂತ ಸರಳವಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದೇನೆ. ಅಭಿಮಾನಿಗಳು, ಕಾರ್ಯಕರ್ತರು ಮನೆಗೆ ಬಂದು ಶುಭಾಶಯ ಕೋರಿದ್ದಾರೆ ಎಂದರು.
ಇಂದು ಯಾರ ಕೈಗೂ ಸಿಗದೆ ತಪ್ಪಿಸಿಕೊಂಡು ಹೋಗಲು ಪ್ಲಾನ್ ಮಾಡಿದ್ದೆ. ಆದರೆ ಅಭಿಮಾನಿಗಳಿಗೆ ನಿರಾಸೆಯಾಗಬಾರದು ಎಂಬ ಉದ್ದೇಶದಿಂದ ಇಲ್ಲಿಯೇ ಉಳಿದುಕೊಂಡಿದ್ದೇನೆ ಎಂದರು.
ನನಗೆ ಸಿದ್ದರಾಮೋತ್ಸವ ಮಾದರಿಯಲ್ಲಿ ಅಷ್ಟೊಂದು ಅದ್ದೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳಲು ಆಸಕ್ತಿ ಇಲ್ಲ. ಹಾಗೆಯೇ ಸಿದ್ದರಾಮಯ್ಯನವರಿಗೂ ಆಸಕ್ತಿ ಇರಲಿಲ್ಲ. ಅವರ ಅಭಿಮಾನಿಗಳು ಸೇರಿ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ ಎಂದರು.
ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷ ಕೂಡಾ ಸಮಾವೇಶ ಮಾಡಬಹುದು. ರಾಜಕೀಯವಾಗಿ ಅದು ಸಹಜ ಬೆಳವಣಿಗೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಅದು ಸ್ವಾಭಾವಿಕ ಬೆಳವಣಿಗೆ ಎಂದ ಅವರು, ನಾನು ರಾಜಕೀಯವಾಗಿ ಇನ್ನೂ ಎತ್ತರಕ್ಕೆ ತಲುಪುವ ಕಾಲನ್ನು ಈಗಲೇ ಹೇಳಲು ಆಗುವುದಿಲ್ಲ. ಯಾವುದನ್ನೂ ಕೂಡ ಊಹೆ ಮಾಡುವುದಕ್ಕಾಗಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅಭಿನಂದನೆ ಸಲ್ಲಿಸಿ ಮಾತನಾಡಿದ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಜೆ. ಕುಮಾರ್, ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರ ಪಾತ್ರ ಬಹಳ ದೊಡ್ಡದಿದೆ. ಹಾಗೆಯೇ ರಾಜ್ಯ ಮತ್ತು ಜಿಲ್ಲೆಗೆ ರಾಜಕೀಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅವರ ಕೊಡುಗೆ ಅಪಾರ ಎಂದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೊರಟಗೆರೆಯಿಂದ ಮತ್ತೆ ಪರಮೇಶ್ವರ್ ಅವರು ಜಯಭೇರಿ ಭಾರಿಸಿ ಕಳೆದ ಬಾರಿಗಿಂತ ಈ ಬಾರಿ ಇನ್ನು ಉನ್ನತ ಸ್ಥಾನವನ್ನು ಅಲಂಕರಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಚಂದ್ರಶೇಖರಗೌಡ, ಜಾಕೀರ್ ಪಾಷ, ಪರ್ವೀಜ್, ಉಮೇಶ್, ದರ್ಶನ್, ಸೋವುದ್, ಜಯಂತ್ ಗೌಡ ಮತ್ತಿತರರು ಉಪಸ್ಥಿತರಿದ್ದರು.