Publicstory/prajayoga
ತುರುವೇಕೆರೆ : ರಾಜಕೀಯವಾಗಿ ನನ್ನ ಏಳಿಗೆ ಸಹಿಸದ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿಪಡಿಸುವ ಮೂಲಕ ಕುತಂತ್ರ ಮಾಡುತ್ತಿದ್ದಾರೆ ಎಂದು ಶಾಸಕ ಮಸಾಲಜಯರಾಮ್ ದೂರಿದರು.
ಪಟ್ಟಣದ ತಮ್ಮ ಸ್ವಗೃಹದಲ್ಲಿ ಕರೆದಿದ್ದ ಬಿಜೆಪಿ ಮುಖಂಡರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ತಾಲೂಕಿನ ದಬ್ಬೇಘಟ್ಟ ರಸ್ತೆ , ದಿಡಗ –ಆಲ್ಬೂರು ರಸ್ತೆ ಕಾಮಗಾರಿ ನಡೆಯದಂತೆ ಸರಕಾರಕ್ಕೆ ಕೃಷ್ಣಪ್ಪ ಪತ್ರ ಬರೆದಿದ್ದರು, ಇದೀಗ ಕ್ಷೇತ್ರ ವ್ಯಾಪ್ತಿಯಲ್ಲಿ ೨೧ ಕೋಟಿ ವೆಚ್ಚದ ಸಿ.ಸಿ.ರಸ್ತೆ ಕಾಮಗಾರಿ ನಡೆಯದಂತೆ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ ನಮ್ಮದೇ ಸರಕಾರವಿದ್ದು ಕೃಷ್ಣಪ್ಪನವರು ಬರೆದಿರುವ ಅಭಿವೃದ್ಧಿಗೆ ಅಡ್ಡಿಪಡಿಸುವ ಅರ್ಜಿಗಳು ಕಸದ ಬುಟ್ಟಿ ಸೇರುತ್ತವೆ. ಎಂ.ಟಿ.ಕೃಷ್ಣಪ್ಪ ಸರಕಾರಕ್ಕೆ ನೂರು ಅರ್ಜಿ ಬರೆದರೂ ಐ ಡೋಂಟ್ ಕೇರ್ ಎಂದು ಸವಾಲು ಹಾಕಿದರು.
ಕ್ಷೇತ್ರದ ಅಭಿವೃದ್ಧಿಗೆ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಅಡ್ಡಿಪಡಿಸುತ್ತಿರುವುದನ್ನು ಎಲ್ಲರಿಗೂ ತಿಳಿಸುವ ಕೆಲಸವನ್ನು ಕಾರ್ಯಕರ್ತರು ಮಾಡಿ, ಎಂ.ಟಿ.ಕೃಷ್ಣಪ್ಪ ಅಭಿವೃದ್ಧಿಗೆ ಅಡ್ಡಿಪಡಿಸಿ ಸರಕಾರಕ್ಕೆ ಬರೆದಿರುವ ಎಲ್ಲ ಮಾಹಿತಿಯನ್ನು ನೀಡುತ್ತೇನೆ. ವಾಟ್ಸಾಪ್, ಪೇಸ್‌ಬುಕ್ ಗಳಿಗೆ ಅಪ್ ಲೋಡ್ ಮಾಡಿ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನವರ ಅಸಲಿ ಮುಖವನ್ನು ಕ್ಷೇತ್ರದ ಜನತೆಗೆ ತಿಳಿಸಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು..
ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನವರು ಗುತ್ತಿಗೆದಾರರಿಗೆ ಕೆಲಸ ಮಾಡಿಬೇಡಿ, ಬೇಕಿದ್ರೆ ಎಲೆಕ್ಷನ್ ತನಕ ನಿಲ್ಲಿಸಿಬಿಡಿ. ನಾನು ಬಂದು ಅಡ್ಡ ಹಾಕ್ತೀನಿ ಎಂದು ಹೇಳಿ ಬೆದರಿಸುತ್ತಿದ್ದಾರೆ. ಕಪ್ಪ ಕಾಣಿಕೆ ವಿಚಾರಕ್ಕೆ ನನ್ನ ಹತ್ತಿರಕ್ಕೆ ಬರುತ್ತಿಲ್ಲವಲ್ಲ ಅನ್ನೋ ಚಿಂತೆಗೆ ಕೃಷ್ಣಪ್ಪನವರನ್ನು ಕಾಡುತ್ತಿದೆ ಎಂದು ಲೇವಡಿ ಮಾಡಿದರು.
ಜಿಲ್ಲಾ ಉಪಾದ್ಯಕ್ಷ ವೈ.ಎಚ್. ಹುಚ್ಚಯ್ಯ, ತಾಲೂಕು ಉಪಾದ್ಯಕ್ಷ ನಾಗೇಶ್, ಮುಖಂಡರಾದ ಕೊಂಡಜ್ಜಿವಿಶ್ವನಾಥ್, ವಿ.ಟಿ.ವೆಂಕಟರಾಮ್, ಕಾಳಂಜೀಹಳ್ಳಿ ಸೋಮಣ್ಣ , ವಿ.ಬಿಸುರೇಶ್,ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.