Publicstory/prajayoga
ಗುಬ್ಬಿ: ಮೂರು ದಿನಗಳ ಹರ್ ಘರ್ ತಿರಂಗಾ ಕಾರ್ಯಕ್ರಮದಲ್ಲಿ ನಾಗರಿಕರು ಪ್ರತಿ ಮನೆ ಮೇಲೆ ರಾಷ್ಟ್ರ ಧ್ವಜ ಹಾರಿಸಿ ದೇಶ ಭಕ್ತಿ ಪ್ರದರ್ಶಿಸಿ ಸ್ವಾತಂತ್ರ‍್ಯ ಅಮೃತ ಮಹೋತ್ಸವದ ಯಶಸ್ಸಿಗೆ ಸಹಕರಿಸುವಂತೆ ಪ.ಪಂ ಅಧ್ಯಕ್ಷ ಜಿ.ಎನ್. ಅಣ್ಣಪ್ಪಸ್ವಾಮಿ ಕರೆ ನೀಡಿದರು.
ಪಟ್ಟಣದ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ರಾಷ್ಟ್ರ ಧ್ವಜ ವಿತರಿಸಿ ಮಾತನಾಡಿದ ಅವರು, ಆಗಸ್ಟ್ 13 ರಿಂದ 15 ರವರೆಗೆ ನಡೆಯುವ 75 ನೇ ವರ್ಷದ ಸ್ವಾತಂತ್ರ‍್ಯ ದಿನಾಚರಣೆಯ ಸವಿ ನೆನಪಿನ ಅಮೃತ ಮಹೋತ್ಸವ ಅದ್ದೂರಿಯಾಗಿ ಆಚರಿಸಲು ಸರ್ಕಾರ ಕರೆ ನೀಡಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಪಟ್ಟಣ ಪಂಚಾಯಿತಿ ಕೂಡಾ ಈ ಕಾರ್ಯಕ್ರಮವನ್ನು ವಿಶೇಷಗೊಳಿಸಲು ಎಲ್ಲಾ ಸಿದ್ಧತೆ ಮಾಡಿಕೊಂಡಿದೆ ಎಂದರು.
ಪಟ್ಟಣ ಪಂಚಾಯಿತಿ ವತಿಯಿಂದ 2500 ರಾಷ್ಟ್ರ ಧ್ವಜ ಖರೀದಿಸಿ ನಾಗರಿಕರಿಗೆ ಹಂಚಲಾಗುತ್ತಿದೆ. ಈಗಾಗಲೇ ಸರ್ಕಾರಿ ಕಚೇರಿಗಳಿಗೆ ಧ್ವಜ ಹಂಚಿಕೆ ಮಾಡಿದ್ದು, ಅದರ ಸಂಹಿತೆಯ ಬಗ್ಗೆ ಕೂಡಾ ತಿಳಿ ಹೇಳಲಾಗುತ್ತಿದೆ. ಧ್ವಜಕ್ಕೆ ಯಾವುದೇ ರೀತಿ ಅಗೌರವ ಸೂಚಿಸಿದಂತೆ ಮೂರು ದಿನ ಹಾರಾಡಿಸಲು ವಿಶೇಷ ಸೂಚನೆ ನೀಡಲಾಗುತ್ತಿದೆ. ಈ ಜೊತೆಗೆ ಆಗಸ್ಟ್ 13 ರಂದು ಭಾರತ ಮಾತಾ ಭಾವಚಿತ್ರ ಭವ್ಯ ಮೆರವಣಿಗೆ ಸಾವಿರಾರು ಮಂದಿ ಮಕ್ಕಳು, ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆಯಲಿದೆ. ನಂತರ 14 ರ ಸಂಜೆ ಪಪಂ ವತಿಯಿಂದ ಪಂಜಿನ ಮೆರವಣಿಗೆ ನಡೆಯಲಿದೆ. ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯದಿಂದ ಗುಬ್ಬಿಯ ರೈಲ್ವೆ ಸ್ಟೇಷನ್ ವರೆಗೆ ನಡೆಯುವ ಈ ಮೆರವಣಿಗೆಗೆ ನಾಗರೀಕರು ಭಾಗಹಿಸುವಂತೆ ಮನವಿ ಮಾಡಿದರು.
ಪಪಂ ಸದಸ್ಯ ಜಿ.ಆರ್.ಶಿವಕುಮಾರ್ ಮಾತನಾಡಿ, ಕಳೆದ ಮೂರು ದಿನದಿಂದ ರಾಷ್ಟ್ರ ಧ್ವಜ ಹಂಚಿಕೆ ನಡೆದಿದ್ದು, ಎಲ್ಲಾ ಪ್ರಮುಖ ಸಾರ್ವಜನಿಕ ವಲಯಗಳಿಗೆ ಮೊದಲು ಹಂಚಲಾಗಿದೆ. ನಂತರ ಸಾರ್ವಜನಿಕರಿಗೂ ನೀಡಲಾಗುತ್ತಿದೆ. ಈ ಕಾರ್ಯಕ್ಕೆ ಎಲ್ಲಾ ಪಪಂ ಸದಸ್ಯರ ಸಹಕಾರ ಸಿಕ್ಕಿದೆ. ಜೊತೆಯಲ್ಲಿ ಸಾಮಾಜಿಕ ಸಂಘ ಸಂಸ್ಥೆಗಳು ಸಹ ಸಾಥ್ ನೀಡಿದೆ ಎಂದರು.
ಸಿಪಿಐ ನದಾಫ್, ಪಿಎಸೈ ಮುತ್ತುರಾಜ್, ಮುಖಂಡರಾದ ನಾಗಸಂದ್ರ ವಿಜಯಕುಮಾರ್, ಜುಂಜೇಗೌಡ, ಪಪಂ ಆರೋಗ್ಯ ನಿರೀಕ್ಷಕಿ ವಿದ್ಯಾಶ್ರೀ ಇತರರು ಇದ್ದರು.