Publicstory/prajayoga
ತುಮಕೂರು: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ನ್ಯೂ ತುಮಕೂರು ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಹಾಗೂ ಕ್ರೀಡಾ ಭಾರತಿ ವತಿಯಿಂದ ಭಾನುವಾರ ಸ್ಕೇಟಿಂಗ್ ರ್ಯಾಲಿ ನಡೆಯಿತು.
ನಗರದ ಎಸ್‌ಐಟಿ ಕಾಲೇಜಿನ ಮುಂಭಾಗದ ಗೇಟ್‌ನಲ್ಲಿ ಸ್ಕೇಟಿಂಗ್ ರ್ಯಾಲಿಗೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಟಿ.ಆರ್. ರೇವಣ್ಣ ಅವರು ಚಾಲನೆ ನೀಡಿ ಮಾತನಾಡಿದ ಅವರು, ಸ್ಕೇಟಿಂಗ್ ಮಾಡುವುದು ಸುಲಭದ ಮಾತಲ್ಲ. ಇದು ಬಹಳ ಕಷ್ಟದ ಜಾಗಿಂಗ್. ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ನಡೆಸಿರುವ ಈ ಸ್ಕೇಟಿಂಗ್ ರ್ಯಾಲಿ ಯಶಸ್ವಿಯಾಗಲಿ ಎಂದು ಆಶಿಸಿದರು.
ನ್ಯೂ ತುಮಕೂರು ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಅಧ್ಯಕ್ಷ ಮಧುಕುಮಾರ್ ಮಾತನಾಡಿ, ದೈಹಿಕ ಮತ್ತು ಮಾನಸಿಕವಾಗಿ ಸ್ಕೇಟಿಂಗ್ ಮಕ್ಕಳನ್ನು ಸದೃಢರನ್ನಾಗಿ ಮಾಡುತ್ತದೆ. ಈ ರ್ಯಾಲಿಯಲ್ಲಿ ಸುಮಾರು 350 ಮಕ್ಕಳು ಪಾಲ್ಗೊಂಡಿದ್ದಾರೆ ಎಂದರು.
ಸ್ಕೇಟಿಂಗ್ ಕ್ರೀಡೆ ರೋಮಾಂಚನಕಾರಿಯಾಗಿದ್ದು, ರಸ್ತೆ ಮೇಲೆ ಮಕ್ಕಳು ಸ್ಕೇಟಿಂಗ್‌ನಲ್ಲಿ ಹೋಗಲು ಬಹಳ ಆಸಕ್ತರಾಗಿರುತ್ತಾರೆ ಎಂದ ಅವರು ಮುಂಬರುವ ದಿನಗಳಲ್ಲಿ ಸ್ಕೇಟಿಂಗ್ ಪಠ್ಯವಾಗಿಯೂ ಬರುತ್ತಿದೆ. ಹಾಗಾಗಿ ಪೋಷಕರು ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಹೇಳಿದರು.
ಎಸ್‌ಐಟಿ ಕಾಲೇಜಿನ ಮುಂಭಾಗದ ಗೇಟ್‌ನಿಂದ ಆರಂಭವಾದ ಸ್ಕೇಟಿಂಗ್ ರ್ಯಾಲಿ ಬಿ.ಹೆಚ್. ರಸ್ತೆಯ ಮುಖೇನ ಬಿಜಿಎಸ್ ವೃತ್ತದವರೆಗೆ ಸುಮಾರು 2 ಕಿ.ಮೀ.ಗೂ ಅಧಿಕ ದೂರ ಕ್ರಮಿಸಿ ಮುಕ್ತಾಯಗೊಂಡಿತು.
ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ರ್ಯಾಲಿಯುದ್ದಕ್ಕೂ ಭಾರತ ಮಾತೆಗೆ ಜೈ ಎನ್ನುವ ಜೈಕಾರ ಎಲ್ಲರ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯೆ ರೂಪಾ ಶೆಟ್ಟಾಳಯ್ಯ, ನಗರಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಮುನಿರಾಜು, ಅಸೋಸಿಯೇಷನ್ ಕಾರ್ಯದರ್ಶಿ ಲೋಕೇಶ್ವರಯ್ಯ, ನಾಗಕುಮಾರ್, ನಾಗಭೂಷಣ್, ಶ್ರೀನಿವಾಸ್ ಮತ್ತಿತರರು ಪಾಲ್ಗೊಂಡಿದ್ದರು.