ತುಮಕೂರು: ಜನಪ್ರತಿನಿಧಿಗಳು ಚುನಾವಣೆಯ ಲೆಕ್ಕ ಕೊಡಬೇಕೆಂಬ ಕಾನೂನು ಬಂದಿದ್ದು ಒಬ್ಬ ನಿವೃತ್ತ ಶಿಕ್ಷಕ ಹಾಗೂ ಕಾನೂನು ವಿದ್ಯಾರ್ಥಿಗಳ ಪ್ರಯತ್ನದಿಂದ ಎಂದು ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಬಿ.ಟಿ.ಮುದ್ದೇಶ್ ತಿಳಿಸಿದರು.
ಸುಫಿಯಾ ಕಾನೂನು ಕಾಲೇಜಿನಲ್ಲಿ ನಡೆದ ಮಾನವ ಹಕ್ಕುಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ನಾವುಗಳು ಪತ್ರಿಕೆಯಲ್ಲಿ ಪಿಎಎಲ್, ಸಾಮಾಜಿಕ ವಿಷಯಗಳನ್ನು ಎತ್ತಿಕೊಂಡು ಬರೆಯಲು ಆರಂಭಿಸಿದವು.
ಪಿಎಎಲ್ ಹಾಕುವ ಅನೇಕ ವಕೀಲರು ಇದ್ದಾರೆ. ಮಾಧ್ಯಮಗಳನ್ನು ಬಳಸಿಕೊಂಡು ಸಾಮಾಜಿಕ ನ್ಯಾಯ ಕೊಡಿಸಬಹುದಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್ ರಮೇಶ್ ಮಾತನಾಡಿ, ಸ್ವಾತಂತ್ರ್ಯ, ಘನತೆ, ನ್ಯಾಯ ಈ ಮೂರು ಪದಗಳು ಈ ಸಂದರ್ಭದಲ್ಲಿ ಮುಖ್ಯವಾಗಿವೆ ಎಂದರು.
ವ್ಯಕ್ತಿ ಸ್ವಾತಂತ್ರ್ಯ ವನ್ನು ಕಾಪಾಡಲು, ಗೌರವಿಸಲು ಇಡೀ ಪ್ರಪಂಚದಲ್ಲಿ ಆತಂಕವೇ ಕಾಡುತ್ತಿದೆ ಎಂದರು.
ನ್ಯಾಯಾಂಗ ವ್ಯವಸ್ಥೆ ಮೇಲೆ ಅಪಾರವಾದ ನಂಬಿಕೆ ಇದೆ. ನ್ಯಾಯಾಂಗದ ಸ್ವಾತಂತ್ರ್ಯ ಇದ್ದಾಗ ಮಾತ್ರ ವ್ಯಕ್ತಿ ಸ್ವಾತಂತ್ರ್ಯ ಕಾಪಾಡುತ್ತದೆ. ಫೇಸ್ ಬುಕ್ ಪ್ರಕರಣದಲ್ಲಿ ಜಸ್ಟೀಸ್ ಚಂದ್ರಚೂಡ್ ಅವರ ತೀರ್ಪು, ಜಸ್ಟೀಸ್ ಪುಟ್ಟಸ್ವಾಮಿ ಅವರ ಪ್ರಕರಣ ದೇಶದ ವ್ಯಕ್ತಿ ಸ್ವಾತಂತ್ರ್ಯ ಉಳಿಯಲು ಸುಪ್ರೀಂಕೋರ್ಟ್ ನೀಡಿದ ಮಹತ್ವದ ಕೊಡುಗೆಯಾಗಿದೆ ಎಂದರು.
ಇವೊತ್ತು ಎಲ್ಲರಿಗೂ ಅನ್ನ ಸಿಗಲು ಕಾರಣ ಪಿಯುಸಿಎಲ್ ಸಂಸ್ಥೆ ಹಾಕಿದ ಒಂದು ಪಿಐಎಲ್. ಇವೊತ್ತು ಎಲ್ಲರಿಗೂ ಪುಕ್ಕಟ್ಟೆ ಅಕ್ಕಿ ಸಿಗಲು ಕಾರಣವಾಯಿತು. ಆದರೆ ಇಂದು ರಾಜಕೀಯ ಪಕ್ಷಗಳು ತಮ್ಮದೇ ಅಜೆಂಡ ಎಂದು ಬಿಂಬಿಸಿಕೊಳ್ಳುತ್ತಿವೆ ಎಂದರು.
ಎಲ್ಲರಿಗೂ ಸೂರು ಯೋಜನೆ ಕೂಡ ಸುಪ್ರೀಂಕೋರ್ಟ್ ಆದೇಶವೇ ಕಾರಣವಾಗಿದೆ. ಇಂದು ನ್ಯಾಯಾಂಗದ ಸ್ವಾತಂತ್ರ್ಯ ಕಾಪಾಡಿಕೊಳ್ಳುವ ಸವಾಲು ಎದುರಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಶ್ರೇಣಿ ನ್ಯಾಯಾದೀಶೆ ನೂರುನ್ನೀಸಾ, ಹಿರಿಯ ಪತ್ರಕರ್ತರಾದ ಸಾ.ಚಿ. ರಾಜಕುಮಾರ್, ಕಾಲೇಜಿನ ಉಪ ಪ್ರಾಂಶುಪಾಲ ಓಬಯ್ಯ, ಸಹ ಪ್ರಾಧ್ಯಾಪಕ ಸಿ.ಕೆ.ಮಹೇಂದ್ರ, ಅಧೀಕ್ಷರಾದ ಜಗದೀಶ್ ಇತರರು ಇದ್ದರು.