ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕಿ ಪ್ರೊ.ಎಸ್.ಡಿ.ಶಶಿಕಲಾ ವಿಭಿನ್ನ ನೆಲೆಯಲ್ಲಿ ನಿಲ್ಲುವವರು.
ಅವರ ವಿದ್ಯಾರ್ಥಿಗಳೆಲ್ಲ ಸೇರಿಕೊಂಡು ಬೌದ್ಧಿಕ ಯಾತ್ರೆ ಹೆಸರಿನಲ್ಲಿ ಅವರ ಅಭಿನಂದನಾ ಗ್ರಂಥ ಹೊರ ತಂದಿರುವುದು ಸಂತಸದ ವಿಷಯ.
ಸ್ವಲ್ಪ ಕಠಿಣ ಎನ್ನಬಹುದಾದ ಶಶಿಕಲಾ ಅವರು ಎಂದಿಗೂ ರಾಜೀ ಸೂತ್ರಕ್ಕೆ ಬಗ್ಗದವರು. ತಮ್ಮ ವಿದ್ಯಾರ್ಥಿಗಳೇ ಇರಲಿ, ಯಾರೇ ಆಗಿರಲಿ, ಓದು, ಪಾಠ, ಬರಹ, ಸಂಶೋಧನೆಯ ಸಂದರ್ಭಗಳಲ್ಲಿ ಅವರು ತೋರುವ ಕಾಠಿಣ್ಯತೆ ಅವರನ್ನು ಎತ್ತರಕ್ಕೆ ಕೊಂಡೂಯ್ದಿದಿದೆ.
ಶಶಿಕಲಾ ಅವರನ್ನು ಡಾ.ಸಿ.ಪಿ.ಸಿದ್ದಾಶ್ರಮ ಅವರ ಬರಹದಲ್ಲಿ ಕಾಣಬಹುದು. ಅದನ್ನು ಕೆಳಗೆ ನೀಡಲಾಗಿದೆ.
ಡಾ.ಎಸ್.ಡಿ.ಶಶಿಕಲಾ ಅವರು ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕ್ರಿಯಾಶೀಲ ಮಹಿಳೆ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಅಧ್ಯಾಪಕಿಯಾಗಿರುವ ಇವರು ತಮ್ಮ ಕರ್ತವ್ಯವನ್ನು ಶ್ರದ್ಧೆ, ನಿಷ್ಠೆಯಿಂದ ನಿರ್ವಹಿಸಿಕೊಂಡು ಹೋಗುತ್ತಿರುವ ಶಿಸ್ತಿನ ಅಧ್ಯಾಪಕಿಯೆಂದು ಹೆಸರು ಮಾಡಿದ್ದಾರೆ.
ತಿಂಗಳಿಗೊಮ್ಮೆಯೇ ಇಲ್ಲವೆ ಚತುರ್ಮಾಸಕ್ಕೊಮ್ಮೆಯೆ ವಿದ್ಯಾರ್ಥಿಗಳಿಗೆ ಮುಖ ತೋರಿಸಿ ಹೋಗುವ ಜಾಯಮಾನದ ಅಧ್ಯಾಪಕಿ ಇವರಲ್ಲ. ಅರೆಬರೆ ಪಾಠ ಮಾಡುವುದು, ಕೆಲಸ ಕದಿಯುವುದು ಶಶಿಕಲಾ ಪ್ರವೃತ್ತಿಯಲ್ಲ. ಶಿಸ್ತಿನ ಅಧ್ಯಾಪಕಿಯಾಗಿರುವ ಇವರು ತಮ್ಮ ಪಾಲಿನ ಪಾಠ ಪ್ರವಚನಗಳನ್ನು ಆದಿಯಿಂದ ಅಂತ್ಯದವರೆಗೆ ವಿವರಣಾತ್ಮಕವಾಗಿ ವಿಮರ್ಶಾತ್ಮಕವಾಗಿ ವಿದ್ಯಾರ್ಥಿಗಳ ಮನದಾಳದಲ್ಲಿ ನಾಟುವಂತೆ ಬೋಧಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಹಾಗಾಗಿಯೇ ಇವರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಅಧ್ಯಾಪಕಿಯೆಂದು ಮನ್ನಣೆ ಗಳಿಸಿದ್ದಾರೆ.
ಜಾತ್ಯಾತೀತ ಮನೋಭಾವದ ಶಶಿಕಲಾ ಅವರು ತಮ್ಮ ಬದುಕನ್ನು ಜಾತ್ಯಾತೀತ ನಲೆಯಲ್ಲೇ ರೂಪಿಸಿಕೊಂಡಿರುವುದು ಹೆಮ್ಮೆಯ ಸ೦ಗತಿ. ವಿಶ್ವವಿದ್ಯಾನಿಲಯಗಳೆಂದರೆ ಅವು ವಿಶ್ವದ ಎಲ್ಲ ಜ್ಞಾನ, ಶಿಸ್ತುಗಳನ್ನು ತಾರತಮ್ಯ ಭಾವವಿಲ್ಲದೆ ವಿದ್ಯಾರ್ಥಿಗಳಿಗೆ ತಲುಪಿಸುವ ಜ್ಞಾನ ದೇಗುಲಗಳೆಂಬ ಅನಿಸಿಕೆ ಸಾಮಾನ್ಯ. ಅಲ್ಲಿ ಈ ಅರಿವಿನ ಹಣತೆಯನ್ನು ಹಚ್ಚಬೇಕಾದವರು ಅಲ್ಲಿನ ಅಧ್ಯಾಪಕ ವೃಂದ. ಹಾಗಾಗಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವ ನೈತಿಕ ಹೊಣೆಗಾರಿಕೆಯನ್ನು ಸಮಾಜ ಅಧ್ಯಾಪಕರಿಂದ ನಿರೀಕ್ಷಿಸುವುದು ಸಾಮಾನ್ಯ ಮತ್ತು ಸಹಜ.
– ಹೀಗೆ ಒಟ್ಟು 56 ಲೇಖನಮಾಲೆಗಳ ಈ ಅಭಿನಂದನಾ ಗ್ರಂಥ ಸಮಗ್ರವಾಗಿದೆ. ಅಧ್ಯಾಪಕರು ಹೇಗಿರಬೇಕು ಎನ್ನುವವರೆಲ್ಲರಿಗೂ ಕೃತಿ ಮಾರ್ಗದರ್ಶಕವಾಗಿದೆಯಷ್ಟೇ ಅಲ್ಲ ನಿಜ ರೂಪದ ಅಭಿನಂದನಾ ಗ್ರಂಥವಾಗಿಯೂ ಮೂಡಿಬಂದಿದೆ. ಇಂಥ ಕೃತಿಯ ಸಂಪಾದಕರಾದ ಡಾ. ವಾಸಯ್ಯ ಎನ್. ಸಹ ಅಭಿನಂದಾರ್ಹರು.
ಪುಸ್ತಕ ಪರಿಚಯ: ನಂದನವನ