ತುಮಕೂರು: ವಿಧಾನ ಸಭಾ ಚುನಾವಣೆಯ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದ್ದು, ಅಭ್ಯರ್ಥಿಗಳು ಹಾಗೂ ಅವರ ಕಾರ್ಯಕರ್ತರನ್ನು ತುದಿಗಾಲಲ್ಲಿ ನಿಲ್ಲಿಸಿದೆ.
ಬೆಳಿಗ್ಗೆ 8ಕ್ಕೆ ಸರಿಯಾಗಿ ಮತ ಎಣಿಕೆ ನಡೆಯಲಿದ್ದು, ಮೊದಲಿಗೆ ಅಂಚೆ ಮತ ಎಣಿಕೆ ನಡೆಯಲಿದೆ.
8.30ಕ್ಕೆ ಇವಿಎಂ ಮತ ಎಣಿಕೆ ನಡೆಯಲಿದೆ. ಬೆಳಿಗ್ಗೆ 11.30ರ ಒಳಗೆ ಫಲಿತಾಂಶ ಬರಲಿದೆ.
ತುಮಕೂರಿನಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ( B C NAGESH) ಸ್ಪರ್ಧಿಸಿರುವ ತಿಪಟೂರು ಕ್ಷೇತ್ರ ಕುತೂಹಲ ಮೂಡಿಸಿದೆ. ಪಠ್ಯ ಪರಿಷ್ಕರಣೆಯ ವಿಷಯದಲ್ಲಿ ವಿವಾದಕ್ಕೆ ಒಳಗಾಗಿದ್ದರು. ಅವರ ಗೆಲುವು ಸೋಲಿನ ಬಗ್ಗೆ ಇಡೀ ರಾಜ್ಯ, ಶೈಕ್ಷಣಿಕ ವಲಯ ಕುತೂಹಲದಿಂದ ಕಾದಿದೆ. ಇಲ್ಲಿ ಕಾಂಗ್ರೆಸ್ ನ ಷಡಕ್ಷರಿ ನೇರ ಸ್ಪರ್ಧಿ.
ತಮ್ಮ ಮಾತುಗಳಿಂದಲೇ ರೈತರು, ಸ್ವಾಮೀಜಿಗಳು, ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದ್ದ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಸಚಿವ ಜೆ.ಸಿ.ಮಾಧುಸ್ವಾಮಿ (J C Madhuswamy)ಸಹ ಕುತೂಹಲದ ಕ್ಷೇತ್ರವಾಗಿದೆ. ಇಲ್ಲಿ ತ್ರಿಕೋನ ಸ್ಪರ್ಧೆ ಇದೆ.
ಮುಖ್ಯಮಂತ್ರಿ ಗಾದಿಗೆ ಹತ್ತಿರದಲ್ಲಿರುವ ಕೊರಟಗೆರೆ ಕ್ಷೇತ್ರದ ಡಾ.ಜಿ.ಪರಮೇಶ್ವರ್ (Dr G.Parmeshwer) ಅವರ ಫಲಿತಾಂಶವನ್ನು ಸಹ ಇಡೀ ರಾಜ್ಯ ಕುತೂಹಲದಿಂದ ಗಮನಿಸುತ್ತಿದೆ. ಇಲ್ಲಿ ಜೆಡಿಎಸ್ ನೇರ ಸ್ಪರ್ಧೆ ಒಡ್ಡಿದೆ.
ಕಳೆದ ಚುನಾವಣೆಯ ನೋಟ
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 104 ಸೀಟುಗಳನ್ನು ಗೆದ್ದಿತ್ತು. ಆರಂಭದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಇತ್ತು. ನಂತರ ಆಪರೇಷನ್ ಕಮಲದ ಮೂಲಕ ಅಧಿಕಾರದ ಗದ್ದುಗೆಗೆ ಏರಿತ್ತು. ಕಾಂಗ್ರೆಸ್ 78 ಮತ್ತು ಜೆಡಿಎಸ್ 37 ಸೀಟುಗಳನ್ನು ಗೆದಿತ್ತು.
ಈ ಬಾರಿ 224 ಕ್ಷೇತ್ರಗಳಲ್ಲಿ 2,615 ಅಭ್ಯರ್ಥಿಗಳು ಕಣದಲ್ಲಿದ್ದಾರೆ.