ತುಮಕೂರು: ವಿಕೋಪದ ಸಂದರ್ಭದಲ್ಲಿ ನೆರವಾಗುವ ಉದ್ದೇಶದಿಂದ ಸಿಡಿಲು ಆ್ಯಪ್‍ಪರಿಚಯಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದರು.
ಮುಂಗಾರು ಮಳೆ ಎದುರಿಸಲು ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಈ ಆ್ಯಪ್ ಬಳಕೆದಾರ ಇರುವ ಜಾಗದಿಂದ ಎಷ್ಟು ಕಿ.ಮೀ. ಅಥವಾ ಮೀಟರ್ ದೂರದಲ್ಲಿ ಸಿಡಿಲು, ಗುಡುಗು ಕಂಡು ಬರುತ್ತಿದೆ ಎಂಬ ಅಪಾಯಗಳನ್ನು ಹಲವು ಬಣ್ಣಗಳಲ್ಲಿ ತಿಳಿಸುತ್ತದೆ. ಈ ಮೂನ್ಸೂಚನೆ ಅರಿತು ಪ್ರಕೃತಿ ವಿಕೋಪಗಳಿಂದ ಆಗುವ ನಷ್ಟವನ್ನು ತಡೆಯಲು ಕ್ರಮಗಳನ್ನು ಕೈಗೊಳ್ಳಲು ಅನುಕೂಲವಾಗಿದೆ. ಸಿಡಿಲು ಬಡಿಯುವ ಸಾಧ್ಯತೆಯನ್ನು ಶೇ. 95ರಷ್ಟು ನಿಖರವಾಗಿ ಈ ಆ್ಯಪ್ ತಿಳಿಸುತ್ತದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಪಿಆರ್‍ಇಡಿ ಸೇರಿದಂತೆ ಬಹಳಷ್ಟು ಕೆರೆಗಳಲ್ಲಿ ಸದ್ಯ ನೀರಿದೆ. ಮುಂದೆ ಮಳೆ ಬಂದಲ್ಲಿ ಶೀಘ್ರ ಭರ್ತಿಯಾಗುತ್ತವೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಸಹಾಯಕ ಕಾರ್ಯಪಾಲಕ ಅಭಿಯಂತರು, ತಮ್ಮ ವ್ಯಾಪ್ತಿಗೆ ಬರುವ ಜಿಲ್ಲೆಯ ಕೆರೆಗಳ ಸಾಮಥ್ರ್ಯ ಪರಿಶೀಲನೆಗೆ ಸಮೀಕ್ಷೆ ಕೈಗೊಳ್ಳಬೇಕು. ಕೆರೆಗಳು ಒಡೆಯದಂತೆ, ಕೆರೆಗಳ ಬಂಡ್‍ಗಳನ್ನು ಬಲಪಡಿಸುವುದು ಸೇರಿದಂತೆ ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು. ಕೆರೆಗಳ ಕೋಡಿ ಹಾಗೂ ನೀರು ಹರಿವ ಮಾರ್ಗಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು, ತಗ್ಗು ಪ್ರದೇಶದ ಮನೆಗಳಿಗೆ ಎಚ್ಚರಿಕೆ ನೀಡಬೇಕು, ಯಾವುದೇ ದುರಸ್ಥಿಯಿದ್ದಲ್ಲಿ ಪರಿಶೀಲಿಸಿ ದುರಸ್ತಿಗೆ ಅಗತ್ಯ ಕ್ರಮವಹಿಸಬೇಕು ಎಂದು ತಿಳಿಸಿದರು.
ಡಿ.ಡಿ.ಎಲ್.ಆರ್ ಸುಜಯ್ ಕುಮಾರ್, ಕೃಷಿ ಇಲಾಖೆಯ ಜಂಟಿ ನಿದೇಶಕರಾದ ರವಿ ಕೆ.ಹೆಚ್, ತುಮಕೂರು ತಾಲೂಕು ತಹಸೀಲ್ದಾರ್ ಸಿದ್ದೇಶ್, ಚಿಕ್ಕನಾಯಕನಹಳ್ಳಿ ತಾಲೂಕು ತಹಸೀಲ್ದಾರ್ ಅರ್ಚನಾ ತಹಸೀಲ್ದಾರ್ ಮೋಹನ್, ಸೇರಿದಂತೆ ಜಿಲ್ಲೆಯ ಉಪವಿಭಾಗಾಧಿಕಾರಿಗಳು, ತಹಸೀಲ್ದಾರ್‍ಗಳು, ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.