ತುರುವೇಕೆರೆ: ತಾಲ್ಲೂಕಿನ ಬಾಣಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎ.ಹೊಸಹಳ್ಳಿ ಗ್ರಾಮದ ವೆಂಕಟಯ್ಯ ಮತ್ತು ಹನುಮಮ್ಮ ದಂಪತಿ ಮಗನಾದ ಡಾ.ಪಾಂಡುರಂಗಯ್ಯ ಎಚ್.ವಿ ಅವರಿಗೆ ತುಮಕೂರು ವಿಶ್ವ ವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಪಾಂಡುರಂಗಯ್ಯ ಅವರು ಪ್ರಜಾವಾಣಿ ತುರುವೇಕೆರೆ ತಾಲ್ಲೂಕು ವರದಿಗಾರರಾಗಿಯೂ ಪ್ರಸಿದ್ಧರು. ಅನೇಕ ಮಾನವೀಯ ವರದಿಗಳ ಮೂಲಕ ಗಮನ ಸೆಳೆದಿದ್ದಾರೆ. ಕತೆಗಾರರು ಸಹ.
ಶ್ರೀಯುತರು ವಿಶ್ವವಿದ್ಯಾನಿಲಯದ ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರಾದ ಡಾ.ನಾಗಭೂಷಣ ಬಗ್ಗನಡು ಅವರ ಮಾರ್ಗದರ್ಶನದಲ್ಲಿ ಮಂಡಿಸಿರುವ “ದಲಿತ ಭೂ ಹೋರಾಟಗಳು ಮತ್ತು ಪ್ರತಿಭಟನಾ ಸಾಹಿತ್ಯ(ತುಮಕೂರು ಜಿಲ್ಲೆಯನ್ನು ಅನುಲಕ್ಷಿಸಿದಂತೆ)” ಎಂಬ ಮಹಾ ಪ್ರಬಂಧಕ್ಕೆ ತುಮಕೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿದೆ.
ಪ್ರಸ್ತುತ ಡಾ.ಪಾಂಡುರಂಗಯ್ಯ ಎಚ್.ವಿ ರವರು ಹುಲ್ಲೇಕೆರೆಯ ಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಅಂಗ ಶಾಲೆಯಾದ ದೊಂಬರನಹಳ್ಳಿಯ ಶ್ರೀಸೋಮೇಶ್ವರ ಪ್ರೌಢ ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ತೂತಿಟ್ಟ ಮಡಕೆಯಲಿ ನೀರಿಟ್ಟು ತೂಗಿ(2012) ಎಂಬ ಕವನ ಸಂಕಲನ ಸಹ ಹೊರತಂದಿದ್ದಾರೆ.