ತುರುವೇಕೆರೆ: ತಾಲ್ಲೂಕಿಗೆ ಮಂಜೂರಾಗಿದ್ದ ಮನೆಗಳನ್ನು ಬೇರೆ ಕ್ಷೇತ್ರಕ್ಕೆ ವರ್ಗಾವಣೆ ಮಾಡಲಾಗಿದ್ದನ್ನು ಖಂಡಿಸಿ ಸೆ.1ರಂದು ವಸತಿ ಸಚಿವರ ಮನೆಯ ಎದುರು ಪ್ರತಿಭಟನೆ ನಡೆಸುವುದಾಗಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಸರ್ಕಾರವು ಇಂದೇ 1505 ಮನೆಗಳನ್ನು ಮಂಜೂರು ಮಾಡಿರುವ ಕಾರಣ ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಮುಂದೂಡಿದ್ದೇನೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.
ಪಟ್ಟಣದಲ್ಲಿ ಗುರುವಾರ ಸಂಜೆ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಬಸವ ವಸತಿ ಯೋಜನೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆಯಡಿ ಸರ್ಕಾರ 3375 ಹೆಚ್ಚುವರಿ ಮನೆಗಳನ್ನು 2022-23 ಸಾಲಿನಲ್ಲಿ ಮಂಜೂರು ಮಾಡಿತ್ತು.
ಆದರೆ ಸ್ಥಳೀಯ ಮಾಜಿ ಶಾಸಕ ಜಯರಾಮ್ ಎ.ಎಸ್ ಚಿತಾವಣೆಯಿಂದ ತಾಲ್ಲೂಕಿಗೆ ಮಂಜೂರಾಗಿದ್ದ ಅಷ್ಟೂ ಮನೆಗಳು ಕೈತಪ್ಪಿ ಕ್ಷೇತ್ರದ ಜನತೆಯನ್ನು ವಂಚಿಸುವ ಕೆಲಸ ಮಾಡಿದ್ದರು. ಕುಣಿಗಲ್ ಗೆ ಸದರಿ ಗುರಿಯ ಮನೆಗಳನ್ನು ಮರು ಹಂಚಿಕೆ ಮಾಡಲಾಗಿತ್ತು. ಇದರ ವಿರುದ್ಧ ವಸತಿ ಸಚಿವರ ಮನೆ ಎದುರು ಧರಣಿ ನಡೆಸುವುದಾಗಿ ಹೇಳಿದ್ದೆ. ಸರ್ಕಾರ ಇದಕ್ಕೆ ಹೆದರಿ ಮನೆಗಳನ್ನು ಮತ್ತೇ ಕ್ಷೇತ್ರಕ್ಕೆ ನೀಡಿದೆ ಎಂದು ಸಂತಸ ಹಂಚಿಕೊಂಡರು.
ಕ್ಷೇತ್ರದ ಸಾವಿರಾರು ಜನರ ಜತೆ ವಸತಿ ಸಚಿವರ ಮನೆ ಎದುರು ಸೆ.1ರಂದು ಪ್ರತಿಭಟನೆ ಮಾಡಲು ತೀರ್ಮಾನಿಸಿದ್ದೆವು. ಅಷ್ಟರಲ್ಲಿ ವಸತಿ ಸಚಿವರು 31.8.2023ದಂದು ನಮ್ಮನ್ನು ಕರೆಯಿಸಿಕೊಂಡು 3375 ಮನೆಗಳ ಪೈಕಿ ತುರುವೇಕೆರೆ ವಿಧಾನಸಭಾ ಕ್ಷೇತ್ರಕ್ಕೆ 1505 ಹಾಗು 1870 ಮನೆಗಳನ್ನು ಕುಣಿಗಲ್ ತಾಲ್ಲೂಕಿಗೆ ನೀಡಿದೆ. ಇದು ನಮ್ಮ ಹೋರಾಟದ ಫಲವಾಗಿ ಕ್ಷೇತ್ರಕ್ಕೆ ದಕ್ಕಿದ್ದು ಅರ್ಹ ಫಲಾನುಭವಿಗಳಿಗೆ ಇದರ ಪ್ರಯೋಜನ ಆಗಲಿ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ರಾಘು, ಯೋಗೀಶ್, ಬಸವಣ್ಣ ಮತ್ತು ಕಾರ್ಯಕರ್ತರು ಇದ್ದರು.