Tuesday, December 3, 2024
Google search engine
Homeಜಿಲ್ಲೆಹೆರಿಗೆ ಮುಟ್ಟು: ಗಂಡ, ಅತ್ತೆ ಮಾವಗೆ ಜೈಲೇ ಗತಿ

ಹೆರಿಗೆ ಮುಟ್ಟು: ಗಂಡ, ಅತ್ತೆ ಮಾವಗೆ ಜೈಲೇ ಗತಿ

ಚಿಕ್ಕನಾಯಕನಹಳ್ಳಿ : ಗೊಲ್ಲರಹಟ್ಟಿಗಳಲ್ಲಿ ಹೆರಿಗೆ-ಮುಟ್ಟು ಅನಿಷ್ಟ ಪದ್ಧತಿ ಆಚರಿಸುವವರ ವಿರುದ್ಧ ‘ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ’ ಹಾಗೂ ‘ಬಾಲನ್ಯಾಯ ಕಾಯ್ದೆ’ ಸೆಕ್ಷನ್ 75 ಅಡಿಯಲ್ಲಿ 7 ರಿಂದ 8 ವರ್ಷಗಳ ಜೈಲುಶಿಕ್ಷೆಯ ಪ್ರಾವಧಾನವಿದೆ. ಇದರಡಿಯಲ್ಲಿ ಹೆರಿಗೆಯಾದ ತಾಯಿ ಮತ್ತು ಮಗುವನ್ನು ಹೊರತುಪಡಿಸಿ ಆಕೆಯ ಗಂಡ, ಅತ್ತೆ, ಮಾವ, ತಂದೆ, ತಾಯಿ ಎಲ್ಲರನ್ನೂ ನಿರ್ದಾಕ್ಷಿಣ್ಯವಾಗಿ ಬಂಧಿಸಲಾಗುವುದು.

ಅದೇ ರೀತಿ ಮುಟ್ಟಾದ ಹೆಣ್ಣುಮಕ್ಕಳನ್ನು ತಿಂಗಳುಗಟ್ಟಲೆ ಶಾಲೆಗೆ ಕಳಿಸದೆ ಅವರನ್ನೂ ಮನೆಯಿಂದ ಹೊರಗೆ ಇಡುವ ಅನಿಷ್ಟ ಆಚರಣೆಯನ್ನು ಜನ ಬಿಟ್ಟುಬಿಡಬೇಕು ಎಂದು ಬಲ್ಲಪ್ಪನಹಟ್ಟಿಗೆ ಶುಕ್ರವಾರ ಭೇಟಿನೀಡಿದ್ದ ಸಂದರ್ಭದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯರಾದ ಡಾ ಕೆ ಟಿ ತಿಪ್ಪೇಸ್ವಾಮಿ ಎಚ್ಚರಿಸಿದರು.

ಕಳೆದ ಜೂನ್ ತಿಂಗಳಲ್ಲಿ, ತಾಲ್ಲೂಕಿನ ಬಲ್ಲಪ್ಪನಹಟ್ಟಿ ಮತ್ತು ಎಮ್ಮೆಕರಿಕೆಹಟ್ಟಿಗಳಲ್ಲಿ ಅವ್ಯಾಹತವಾಗಿದ್ದ ಹೆರಿಗೆ-ಮುಟ್ಟು ಅನಿಷ್ಟ ಪದ್ಧತಿ ಆಚರಣೆಯ ವಿರುದ್ಧ ‘ಕಾಡುಗೊಲ್ಲ ಪ್ರಗತಿಪರ ಹಾಗೂ ಸಮಾನಸ್ಕ ವೇದಿಕೆಯವರು ಜಾಗೃತಿ ಅರಿವು ಕಾರ್ಯಕ್ರಮ ನಡೆಸುತ್ತಿದ್ದಾಗ ಅದೇ ಹಟ್ಟಿಗಳಲ್ಲಿ ಬೆಳಕಿಗೆ ಬಂದ ಇಂತಹ ಮೂರ್ನಾಲ್ಕು ಘಟನೆಗಳ ಬಗ್ಗೆ
ಈ-ದಿನ.ಕಾಮ್ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡಿತ್ತು.

ಈ-ದಿನ.ಕಾಮ್’ನ ಆಯೆಲ್ಲ ವರದಿಗಳನ್ನು ಓದಿ ತಾವೀಗ ಬಲ್ಲಪ್ಪನಹಟ್ಟಿಗೆ ಭೇಟಿ ನೀಡಿದ್ದೇನೆ. ನಮಗೆ ಇಲ್ಲಿನ ವಾಸ್ತವಸ್ಥಿತಿ ತಿಳಿದಿದೆ. ಹಾಗಾಗಿ ನಾವಿಲ್ಲಿಗೆ ಭೇಟಿ ನೀಡಿದ್ದೇವೆ ಎಂದು ಮಕ್ಕಳ ಹಕ್ಕುಗಳ ಆಯೋಗದ ಸದಸ್ಯರಾದ ಡಾ ಕೆ ಟಿ ತಿಪ್ಪೇಸ್ವಾಮಿ ಹಟ್ಟಿಯ ಎಲ್ಲರಿಗೆ ತಿಳಿಸಿದರು.

75 ವರ್ಷಗಳಿಂದಲೂ ಜಾಗೃತಿ, ಅರಿವು ಮೂಡಿಸುವುದೇ ಕೆಲಸವಾಗಿಹೋಗಿದೆ. ಆದರೂ ಬದಲಾವಣೆಗೆ ಜನ ತಯಾರಿಲ್ಲ. ಇನ್ನು ಜಾಗೃತಿ, ಅರಿವು ಮೂಡಿಸುವ ಕಾರ್ಯಕ್ರಮ ನಿಲ್ಲಿಸಿ ನಿರ್ದಾಕ್ಷಿಣ್ಯವಾದ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.

ಜನ ಸ್ವತಃ ಮೂಢನಂಬಿಕೆ, ದೈವನಂಬಿಕೆಗಳ ಹೆಸರಲ್ಲಿ ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ ಹಾಗೂ ಬಸುರಿ-ಬಾಣಂತಿಯರ ಮೇಲೆ ಪುರುಷಾಧಿಕಾರದ ದೌರ್ಜನ್ಯ ನಡೆಸಲು ಅವಕಾಶವಿಲ್ಲ. ಅದು ಅಕ್ಷಮ್ಯ. ಜನ ತಮ್ಮ ಅನಿಷ್ಟ ಮತ್ತು ಮೌಢ್ಯಾಚರಣೆಗಳ ನೆಪದಲ್ಲಿ ಮಕ್ಕಳು ಮತ್ತು ಮಹಿಳೆಯರ ಪ್ರಾಣಕ್ಕೆ ಹಾನಿಯುಂಟಾಗಬಹುದಾದ ಅಪಾಯಗಳನ್ನು ತಂದೊಡ್ಡಬಾರದು. ನಮ್ಮ ದೇಶದಲ್ಲಿ ಯಾರೂ ಯಾರಿಗೂ ಜೀವ ಹಾನಿ ಉಂಟುಮಾಡಲು ಅವಕಾಶವಿಲ್ಲ. ಸ್ವತಃ ಹೆತ್ತವರಿಗೂ ಕೂಡ ಮಗುವಿನ ಜೀವ ತೆಗೆಯುವ ಹಕ್ಕಿಲ್ಲ. ಅಂಥದ್ದರಲ್ಲಿ, ಛಳಿ, ಮಳೆ, ಗಾಳಿ, ಹಗಲು, ರಾತ್ರಿಯೆನ್ನದೆ ಎಂಥ ಹೊತ್ತಲ್ಲಿ ಬೇಕಾದರೂ ಮುಟ್ಟಾದ ಹೆಣ್ಣುಮಕ್ಕಳನ್ನು ಮನೆಯಿಂದ ಹೊರಗೆ ಹಾಕಿಬಿಡುವ ಇಂಥ ಮಾರಣಾಂತಿಕವಾದ ಹೆರಿಗೆ-ಮುಟ್ಟು ಅನಿಷ್ಟ ಪದ್ಧತಿಯ ಆಚರಣೆಯನ್ನು ಇನ್ನು ಯಾರೂ ಮುಂದುವರೆಸಬಾರದು ಎಂದು ಎಚ್ಚರಿಸಿದರು.

ಇದನ್ನು ಆಚರಿಸುವವರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣಶಿಕ್ಷೆ ನೀಡಲಾಗುವುದು. ನಿಮ್ಮ ಊರುಗಳಲ್ಲಿ ಮಕ್ಕಳ ಮೇಲೆ ನಡೆಯುವ ಎಂಥದೇ ಅನಿಷ್ಟ ಕೃತ್ಯಗಳನ್ನು ಕಂಡಾಕ್ಷಣ ಜನ ಸ್ವಯಂಪ್ರೇರಿತರಾಗಿ 1098 (ಮಕ್ಕಳ ಸಹಾಯವಾಣಿ) ಗೆ ಕರೆ ಮಾಡಿ ತಿಳಿಸಬೇಕು.

ಇಲ್ಲಿ ಕರೆ ಮಾಡಿದವರ ಹೆಸರು ಮತ್ತು ಗುರುತನ್ನು ಗೌಪ್ಯವಾಗಿಡಲಾಗುವುದು. ಹಾಗಾಗಿ ಭಯಪಡದೆ, ಹಿಂಜರಿಯದೆ ಎಲ್ಲರೂ ತಮ್ಮ ಪಾಲಿನ ಸಾಮಾಜಿಕ ಬದ್ಧತೆಯನ್ನು ಪಾಲಿಸಬೇಕು ಎಂದು ಅವರು ತಿಳಿಸಿದರು.

ನಂತರ ಅವರು ತಾಲ್ಲೂಕಿನ ಹೊಯ್ಸಳಕಟ್ಟೆ ಗ್ರಾಮ ಪಂಚಾಯತಿಗೆ ಭೇಟಿ ನೀಡಿ, ಅಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಅನುಷ್ಠಾನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದರು. ಅಲ್ಲಿ ನಾಪತ್ತೆಯಾಗಿರುವ ಬಸವರಾಜ್, ದಿವ್ಯಾ, ಲೋಹಿತ್ ಎಂಬ ಮೂವರು ಮಕ್ಕಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ವಹಿಸಿರುವ ನಿರ್ಲಕ್ಷ್ಯವನ್ನು ಪ್ರಶ್ನಿಸಿ, ನಿರ್ದಾಕ್ಷಿಣ್ಯ ಶಿಸ್ತುಕ್ರಮದ ಎಚ್ಚರಿಕೆ ಕೊಟ್ಟರು.

ಅದೇ ರೀತಿ ಹೊಯ್ಸಳಕಟ್ಟೆ ಸರ್ಕಾರಿ ಶಾಲೆಯಲ್ಲಿ ಸರಿಯಾದ ದಾಖಲೆ ಮತ್ತು ಪತ್ರಗಳನ್ನು ಇಡಲಾಗದೆ ತಡಬಡಾಯಿಸಿದ ಮುಖ್ಯಶಿಕ್ಷಕರು ಹಾಗೂ ಅಕ್ಷರ ದಾಸೋಹದ ಸಂಯೋಜಕರ ಉದಾಸೀನತೆಯನ್ನು ಪ್ರಶ್ನಿಸಿ, ನೊಟಿಸ್ ನೀಡುವ ಎಚ್ಚರಿಕೆಯನ್ನು ನೀಡಿದರು.

ನಂತರ ಅದೇ ಹೊಯ್ಸಳಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಕೇನಹಳ್ಳಿಯಲ್ಲಿ ತಳಪಾಯವನ್ನೇ ಭದ್ರಪಡಿಸದೇ ಅವೈಜ್ಞಾನಿಕವಾದ ಕಳಪೆ ಕಾಮಗಾರಿ ಮಾಡಿ ನಿರ್ಮಿಸಲು ಮುಂದಾಗಿದ್ದ ಶಾಲಾ ಕೊಠಡಿಗೆ ಸಂಬಂಧಿಸಿದಂತೆ ಅದರ ಉಸ್ತುವಾರಿ ಹೊತ್ತಿದ್ದ ಇಂಜಿನಿಯರ್’ ಕುಮಾರನಾಯ್ಕ’ರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಮಕ್ಕಳು ಬಂದು ಕೂರುವ ಕೊಠಡಿಗಳನ್ನು ಇಷ್ಟು ಅಜಾಗರೂಕವಾಗಿ ನಿರ್ಮಾಣ ಮಾಡುತ್ತಿರುವ ಧೋರಣೆಯನ್ನು ಖಂಡಿಸಿದರು.

ತಾಲ್ಲೂಕು ಆಡಳಿತದೊಂದಿಗೆ ಸಭೆ ::

ಮಧ್ಯಾಹ್ನ 3.45’ರ ಹೊತ್ತಿಗೆ ಚಿಕ್ಕನಾಯಕನಹಳ್ಳಿ ಪಟ್ಟಣಕ್ಕೆ ಆಗಮಿಸಿದ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಡಾ ಕೆ ಟಿ ತಿಪ್ಪೇಸ್ವಾಮಿಯವರು, ತಾಲ್ಲೂಕಿನ ವಿವಿಧ ಇಲಾಖೆಗಳ ಎಲ್ಲ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ವಿದ್ಯುತ್ ಲೈನುಗಳ ತಂತಿ ಶಾಲಾ ಆವರಣ ಹಾಗೂ ಶಾಲೆಗಳ ಮೇಲಿಂದ ಹಾದುಹೋಗಿರುವುದನ್ನು ತುರ್ತಾಗಿ ತೆಗೆದುಹಾಕುವ ಆದೇಶವಿದ್ದರೂ ಇದುವರೆಗೂ ಅದನ್ನು ನಿರ್ವಹಿಸದೆ ಇರುವ ಬೆಸ್ಕಾಂ ಇಲಾಖೆಯನ್ನು ಎಚ್ಚರಿಸಿದರು.

ಕೃಷಿ ಇಲಾಖೆ ಮತ್ತು ತೋಟಗಾರಿಕಾ ಇಲಾಖೆಗಳು ಕೊಳವೆ ಬಾವಿ ಮತ್ತು ಕೃಷಿ ಹೊಂಡಗಳಲ್ಲಿ ಎಳೆಯ ಮಕ್ಕಳು ಬೀಳದಂತೆ ವಹಿಸಿರುವ ಮುಂಜಾಗ್ರತಾ ಕ್ರಮಗಳ ಮಾಹಿತಿ ಪಡೆದರು. ಪಟ್ಟಣದ ಪುರಸಭೆಯ ಬೇಜವಾಬ್ದಾರಿ ಹಾಗೂ ಹೊಣೆಗೇಡಿ ವರ್ತನೆಗಳನ್ನು ಖಂಡಿಸಿ, ಅವರಿಗೆ ನೊಟೀಸ್ ನೀಡುವ ಎಚ್ಚರಿಕೆ ಕೊಟ್ಟರು.

ಸಭೆಯಲ್ಲಿ ತಾಲ್ಲೂಕಿನ ಎಲ್ಲ ಇಲಾಖೆಗಳ ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದರು. ಸಭೆಗೆ ಬಾರದೆ ತಪ್ಪಿಸಿಕೊಂಡಿದ್ದ ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಎನ್ ಬಿ ಗವಿರಂಗಯ್ಯ ಹಾಗೂ ಪುರಸಭೆ ಮುಖ್ಯಾಧಿಕಾರಿ ಮಂಜುಳ’ರವರನ್ನು ಕರೆ ಮಾಡಿ ಕರೆಸಿ, ನಿಗದಿತ ಸಮಯಕ್ಕೆ ಸರಿಯಾಗಿ ಸಭೆಗೆ ಬಾರದೆ ಅವರು ತೋರಿದ ಬೇಜವಾಬ್ದಾರಿ ವರ್ತನೆಯನ್ನು ಎಲ್ಲರೆದುರು ನಿಲ್ಲಿಸಿ ಪ್ರಶ್ನಿಸಿದರು.

ತಾಲ್ಲೂಕು ಆಡಳಿತ ಮತ್ತು ಕೆಲವು ಇಲಾಖೆ ಹಾಗೂ ಕೆಲಮಂದಿ ಅಧಿಕಾರಿಗಳ ಕಾರಣದಿಂದ ಆಗಿರುವ ಎಲ್ಲ ಲೋಪಗಳನ್ನು ಶೀಘ್ರವೇ ಸರಿಪಡಿಸಿ, ತಾಲ್ಲೂಕು ದಂಡಾಧಿಕಾರಿಗಳು ತಮ್ಮ ಅಧೀನ ಅಧಿಕಾರಿಗಳು ತಮ್ಮೆಲ್ಲಾ ಹೊಣೆಗಾರಿಕೆಗಳನ್ನು ಅನುಷ್ಠಾನಗೊಳಿಸುವಂತೆ ಎಚ್ಚರ ಕಾಯಬೇಕು ಎಂದು ತಹಸೀಲ್ದಾರರಿಗೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಡಾ. ಕೆ ಟಿ ತಿಪ್ಪೇಸ್ವಾಮಿ ಸೂಚಿಸಿದರು.


ವರದಿ, ಸಂಚಲನ
ಚಿಕ್ಕನಾಯಕನ ಸೀಮೆಯಿಂದ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?