ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಅರೆ-ಮಲೆನಾಡು ಮದಲಿಂಗನ ಕಣಿವೆ ಅರಣ್ಯ ಪ್ರದೇಶದ ಸಾರ್ವಜನಿಕ ವೀಕ್ಷಣಾ ಗೋಪುರ ಹಾನಿ
ಚಿಕ್ಕನಾಯಕನಹಳ್ಳಿ : ಚಿಕ್ಕನಾಯಕನ ಸೀಮೆಯುದ್ದಕ್ಕೂ ಚಾರಿತ್ರಿಕವಾದ
ಜನಪದೀಯ ಮಹತ್ವವನ್ನು ಹೊಂದಿರುವ ಮದಲಿಂಗನ ಕಣಿವೆ ಅರಣ್ಯ ಪ್ರದೇಶದ ಸಾರ್ವಜನಿಕ ವೀಕ್ಷಣಾ ಗೋಪುರ ಶಿಥಿಲಗೊಂಡು ಹಾನಿಗೊಳಗಾಗಿದೆ.
ತಾಲ್ಲೂಕು ಪಟ್ಟಣದ ಹಿತ್ತಿಲಲ್ಲೇ ಇರುವ ಮದಲಿಂಗನ ಕಣಿವೆ ಗುಡ್ಡಸಾಲು ಹಾಗೂ ಅರೆ ಮಲೆನಾಡು ಗುಡ್ಡಗಾಡು ಅರಣ್ಯದಲ್ಲಿ ಚಾರಣಿಗರು, ಪ್ರವಾಸಿಗರು ಹಾಗೂ ಸಾರ್ವಜನಿಕರು ಪ್ರಕೃತಿಯ ಸೊಬಗನ್ನು ಮನಸಾರೆ ವೀಕ್ಷಿಸುವ ಅನುಕೂಲಕ್ಕಾಗಿ ನಿರ್ಮಿಸಲಾಗಿದ್ದ ಕಬ್ಬಿಣದ ವೀಕ್ಷಣಾ ಗೋಪುರದ ಒಳಭಾಗ ತುಕ್ಕು ಹಿಡಿದು ಹಾನಿಗೊಳಗಾಗಿ ಮುರಿದುಬಿದ್ದಿದೆ.
ವೀಕ್ಷಣಾ ಗೋಪುರದ ಒಳಭಾಗದಲ್ಲಿ ಮಳೆ ನೀರು ಸಂಗ್ರಹವಾಗಿ, ಕಬ್ಬಿಣ ತುಕ್ಕು ಹಿಡಿದು ಶಿಥಿಲಾವಸ್ಥೆಗೆ ತಲುಪಿ ಅದು ಮುರಿದುಕೊಂಡು ಬಿದ್ದಿರುವಂತೆ ಕಾಣುತ್ತಿದೆ. ಗೋಪುರದ ಒಳಗಡೆ ಮಳೆ ನೀರು ಸಂಗ್ರಹವಾಗದೆ ಸರಾಗವಾಗಿ ಹರಿದು ಹೊರಹೋಗಲು ಅದಕ್ಕೆ ದಾರಿ ಮಾಡಿಕೊಡದಿರುವುದೇ ಇದಕ್ಕೆ ಕಾರಣ ಎಂದು ಪರಿಸರ ಪ್ರೇಮಿಗಳು ಹಾಗೂ ಪಕ್ಷಿ ವೀಕ್ಷಕ ತಜ್ಞರು ದೂರುತ್ತಾರೆ.
ಇಂಥ ಅವೈಜ್ಞಾನಿಕ ಕಾಮಗಾರಿಯನ್ನು ಪರಿಶೀಲಿಸಿ ಪ್ರಾರಂಭದಲ್ಲೇ ಅದರ ಬಗ್ಗೆ ಎಚ್ಚರ ವಹಿಸದಿರುವುದು ಮತ್ತು ತುಕ್ಕು ಹಿಡಿದು ಗೋಪುರ ಹಾನಿಗೊಳಗಾಗುವವರೆಗೂ ಅದರ ಬಗ್ಗೆ ನಿಗಾ ವಹಿಸದೇ ಇಲಾಖೆ ನಿರ್ಲಕ್ಷ್ಯ ತೋರಿರುವುದು ಸ್ಥಳೀಯ ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಸ್ಪಷ್ಟನೆ::
ಮದಲಿಂಗನ ಕಣಿವೆ ಅರಣ್ಯ ಪ್ರದೇಶದಲ್ಲಿರುವ ಸಾರ್ವಜನಿಕ ವೀಕ್ಷಣಾ ಗೋಪುರದ ದುರಸ್ತಿ ಕಾರ್ಯಗಳಿಗೆ ಸಂಬಂಧಿಸಿದ ಪ್ರಸ್ತಾವನೆ ಇಲಾಖೆಯ ಮುಂದಿದೆ. ಶೀಘ್ರವೇ ಅದನ್ನು ದುರಸ್ತಿಗೊಳಿಸಿ ಮತ್ತೆ ಸಾರ್ವಜನಿಕ ಬಳಕೆಗೆ ಅನುವು ಮಾಡಿಕೊಡಲಾಗುವುದು ಎಂದು (ಆರ್ ಎಫ್ ಒ) ವಲಯ ಅರಣ್ಯ ಅಧಿಕಾರಿ ಅರುಣ್ ಸ್ಪಷ್ಟಪಡಿಸಿದ್ದಾರೆ.
_ಸಂಚಲನ
ಚಿಕ್ಕನಾಯಕನ ಸೀಮೆಯಿಂದ