ಚಿಕ್ಕನಾಯಕನಹಳ್ಳಿ : ಅಂತರ್ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಭಾನುವಾರ ಬೆಳಗ್ಗೆ ಪಟ್ಟಣದ ನೆಹರೂ ಸರ್ಕಲ್’ನಿಂದ ಅಂಬೇಡ್ಕರ್ ಪುತ್ಥಳಿವರೆಗೆ ಸರಿಸುಮಾರು 1.5 ಕಿ.ಮೀ.ವರೆಗೆ ಮಾನವ ಸರಪಳಿ ರಚಿಸಲಾಗಿತ್ತು.
ಶಾಸಕ ಸಿ ಬಿ ಸುರೇಶ್ ಬಾಬು, ವಿವಿಧ ಇಲಾಖೆಗಳ ಅಧಿಕಾರಿಗಳು, ನೌಕರರು ಹಾಗೂ ಹಲವು ಶಾಲೆಗಳ ವಿದ್ಯಾರ್ಥಿಗಳು ಮತ್ತು ತಾಲ್ಲೂಕಿನ ವಸತಿ ಶಾಲೆಗಳ ಮಕ್ಕಳು , ಸಾರ್ವಜನಿಕರು ಸೇರಿ ಮಾನವ ಸರಪಳಿಯನ್ನು ರಚಿಸಲಾಗಿತ್ತು. ಈ ಸಂದರ್ಭದಲ್ಲಿ ಸಂವಿಧಾನ ಪೀಠಿಕೆಯನ್ನು ಸಾಮೂಹಿಕವಾಗಿ ಓದಿ ಪ್ರಜಾಪ್ರಭುತ್ವಕ್ಕೆ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಿ ಬಿ ಸುರೇಶ್ ಬಾಬು, ಉತ್ಸಾಹ ಹಾಗೂ ಶಾಂತಿಯುತ ಮಾನವ ಸರಪಳಿಯ ಮೂಲಕ ನಮ್ಮೂರಿನಲ್ಲಿ ಅಂತರ್ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ನಾವು ಆಚರಿಸಿದ್ದೇವೆ.
ಸರ್ಕಾರದ ಉದ್ದೇಶ ಬೀದರ್’ನಿಂದ ಚಾಮರಾಜನಗರದವರೆಗಿನ 25 ಲಕ್ಷ ಜನ ಸೇರಿ ಐತಿಹಾಸಿಕ ಮಾನವ ಸರಪಳಿ ರಚಿಸಬೇಕು ಎಂಬುದಾಗಿತ್ತು.
ಅದರ ಮಾರ್ಗಮಧ್ಯದಲ್ಲಿ ಬರುವ ನಮ್ಮ ತಾಲ್ಲೂಕಿನ ಎಲ್ಲ ಭಾಗಗಳಲ್ಲೂ ಸಂವಿಧಾನದ ಪೀಠಿಕೆ ಓದುವುದರ ಮೂಲಕ ನಾವು ಪ್ರಜಾಪ್ರಭುತ್ವ ದಿನಾಚರಣೆಯನ್ನು ಉತ್ತಮವಾಗಿ ಆಚರಿಸಿದ್ದೇವೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ನಮ್ಮದು. ನಮ್ಮ ಈ ಪ್ರಜಾಪ್ರಭುತ್ವದ ಅಡಿಯಲ್ಲಿ ಇದೂವರೆಗೂ ಇರುವ ವಂಚಿತ ಮತ್ತು ಅಲಕ್ಷಿತ ವರ್ಗಗಳಿಗೂ ಸಲ್ಲಬೇಕಾದ ಪಾಲು ಸಲ್ಲಬೇಕು. ಎಲ್ಲರಿಗೂ ಸಮಾನತೆ ಮತ್ತು ಸಮಾನ ನ್ಯಾಯ ಸಿಗುವಂತಾಗಬೇಕು ಎಂದು ಈ ಪ್ರಜಾಪ್ರಭುತ್ವ ದಿನಾಚರಣೆಯ ಸಂದರ್ಭದಲ್ಲಿ ನಾನು ಆಶಿಸುತ್ತೇನೆ ಎಂದು ಅವರು ಹೇಳಿದರು.
ಭೀಮಬಂಧು ಗೌತಮ್ ಮಾತನಾಡಿ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹೆಗ್ಗಳಿಕೆಯನ್ನು ನಾವಿಂದು ಸಂಭ್ರಮಿಸುತ್ತಿದ್ದೇವೆ. ಈ ನಮ್ಮ ಪ್ರಜಾಪ್ರಭುತ್ವಕ್ಕೆ ಸಂವಿಧಾನ ನೀಡಿರುವ ಬಹಳಷ್ಟು ಪ್ರಯೋಜನಗಳನ್ನು ನಾವಿನ್ನೂ ಸಂಪೂರ್ಣವಾಗಿ ಪಡೆದುಕೊಳ್ಳಲಾಗಿಲ್ಲ.
ನಮ್ಮಲ್ಲಿ ಇನ್ನೂ ಮಾಹಿತಿ ಕೊರತೆಯಿದೆ. ಅರಿವಿನ ಅಭಾವ ಇದೆ. ಪ್ರಜೆಗಳ ಎಲ್ಲ ಪ್ರಸ್ತಾವನೆಗಳು ಸಮರ್ಪಕವಾಗಿ ಜಾರಿ ಆಗಬೇಕಿದ್ದರೆ, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ತಿಳಿವಳಿಕೆ ಬಹಳ ಮುಖ್ಯ. ಹಾಗಾಗಿ, ನಾವೆಲ್ಲ ಸೇರಿ ಪ್ರಬುದ್ಧ ಭಾರತದ ಆಶಯದಡಿ ಐತಿಹಾಸಿಕ ಮಾನವ ಸರಪಳಿ ರಚಿಸಿ ಅಂತರ್ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಆಚರಿಸುತ್ತಿದ್ದೇವೆ ಎಂದರು.
ವಿವಿಧ ಇಲಾಖೆಗಳ ಅಧಿಕಾರಿಗಳು, ಸರ್ಕಾರಿ ನೌಕರರು, ಶಾಲಾ-ಕಾಲೇಜು ಮಕ್ಕಳು, ವಿವಿಧ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಪ್ರಜಾಪ್ರಭುತ್ವ ದಿನಾಚರಣೆ ಹಿನ್ನೆಲೆ ::
ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ ವಿಶ್ವದಾದ್ಯಂತ ಧ್ವಸ್ಥಗೊಳ್ಳುತ್ತಿರುವ ಪ್ರಜಾಪ್ರಭುತ್ವದ ಆಶಯ ಮತ್ತು ಮೌಲ್ಯಗಳನ್ನು ಮತ್ತೆ ಮತ್ತೆ ಎತ್ತಿಹಿಡಿಯುವ ಸಲುವಾಗಿ ಸೆಪ್ಟೆಂಬರ್ 15’ರಂದು ಅಂತರ್ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಆಚರಿಸುವ ಅನುಮೋದನೆ ಮಾಡಿತು.
ಇದಾಗಿ 2008’ರಿಂದ ಅಂತರ್ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಿಸಲು ಆರಂಭಿಸಿದ ಇಂಟರ್ ಪಾರ್ಲಿಮೆಂಟರಿ ಯೂನಿಯನ್(IPU) ಜಾಗತಿಕವಾಗಿ ಪ್ರಜಾಪ್ರಭುತ್ವ ದಿನಾಚರಣೆಗೆ ನಾಂದಿ ಹಾಡಿತು.
ಸತತವಾಗಿ 20 ವರ್ಷಗಳ ಕಾಲ ಫಿಲಿಪ್ಪೀನ್ಸ್ ದೇಶದಲ್ಲಿ ಸರ್ವಾಧಿಕಾರವನ್ನು ನಡೆಸುತ್ತಿದ್ದ ಫರ್ಡಿನಾಂಡ್ ಮಾರ್ಕೋಸ್’ನ ವಿರುದ್ಧ ‘ಕೊರೊಜನ್ ಸಿ ಅಕ್ವಿನೊ’ ಎಂಬ ಜನಪರ ಹೋರಾಟಗಾರ್ತಿ “ಪೀಪಲ್ ಪವರ್ ರೆವಲ್ಯೂಷನ್” ಸಂಘಟಿಸಿ, ನಿರಂತರ ಹೋರಾಡಿ, ಮಾರ್ಕೋಸ್’ನ ನಿಕುಶ ಪ್ರಭುತ್ವವನ್ನು ಮಣಿಸಿ, 1986’ರ ಸೆಪ್ಟೆಂಬರ್ 15’ರಂದು ತನ್ನ ತಾಯ್ನಾಡು ಫಿಲಿಪ್ಫೀನ್ಸ್’ನಲ್ಲಿ ಪ್ರಜಾಪ್ರಭುತ್ವವನ್ನು ಮರಳಿ ಸ್ಥಾಪಿಸುತ್ತಾಳೆ.
ಈಕೆಯ ಈ ಅಪ್ರತಿಮ ಸಾಧನೆ ಸಾಕಾರಗೊಂಡದ್ದು ಸೆಪ್ಟೆಂಬರ್ 15’ರಂದು. ಹೀಗಾಗಿ, ಜಗತ್ತಿನ ಚರಿತ್ರೆಯಲ್ಲಿ ಅತಿಮಹತ್ವದ ದಿನವಾದ ಈ ಸೆಪ್ಟೆಂಬರ್ 15’ನ್ನೇ ಪ್ರಜಾಪ್ರಭುತ್ವದ ದಿನವನ್ನಾಗಿ ಆಚರಿಸಲು ಆಯ್ಕೆ ಮಾಡಲಾಯಿತು.
ಜನಮತದ ಮೂಲಕ ಚುನಾಯಿತರಾದ ಜನನಾಯಕರೇ ಕ್ರಮೇಣ ಸರ್ವಾಧಿಕಾರಿಗಳಾಗಿ ಬದಲಾಗುತ್ತಿರುವ ಆತಂಕಕಾರಿ ಕಾಲಘಟ್ಟದಲ್ಲಿ ಈ 2024’ರ ಅಂತರ್ರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಿಸಲಾಗುತ್ತಿದೆ. ಈ ಬಾರಿಯ ಅಂತರ್ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಧ್ಯೇಯಘೋಷ, ಪ್ರಜಾಪ್ರಭುತ್ವದ ಕಾರ್ಯಕಲಾಪಗಳಲ್ಲಿ ನಾಗರಿಕರ ವ್ಯಾಪಕ ಒಳಗೊಳ್ಳುವಿಕೆ ಹಾಗೂ ಆಡಳಿತ ಸುಧಾರಣೆಯ ನಿರಂತರ ಪ್ರಕ್ರಿಯೆಗೆ ತೊಡಕಾಗಬಲ್ಲ
ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲೆಜೆನ್ಸ್)ಯನ್ನು ಸಂಪೂರ್ಣ ಹೊರಗಿಡುವುದು. ಅತ್ಯಾಧುನಿಕವಾದ ಈ ಕ್ರಾಂತಿಕಾರಕ AI ತಂತ್ರಜ್ಞಾನ ಪ್ರಜಾಪ್ರಭುತ್ವದ ಬಹುಪಾಲು ಎಲ್ಲ ಆಶಯಗಳಿಗೂ ಆತಂಕಕಾರಿ ಅಪಾಯಗಳನ್ನು ತಂದೊಡ್ಡಬಹುದು. ಇದರ ಎಚ್ಚರಿಕೆಯ ಕರೆಘಂಟೆ ಈ ಬಾರಿಯ ಅಂತರ್ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಧ್ಯೇಯಘೋಷದಲ್ಲಿದೆ.
_ಸಂಚಲನ
ಚಿಕ್ಕನಾಯಕನ ಸೀಮೆಯಿಂದ