ಚಿತ್ರ ಶೀರ್ಷಿಕೆ: ಇಸ್ಲಾಮಿಕ್ ಪವಿತ್ರ ಇಮಾರತ್ತುಗಳ ಪುಟ್ಟಪುಟ್ಟ ಪ್ರತಿಕೃತಿಗಳನ್ನು ಮಾಡಿಟ್ಟುಕೊಂಡು ಈದ್-ಮಿಲಾದ್ ಆಚರಿಸುತ್ತಿರುವ ಚಿಕ್ಕನಾಯಕನಹಳ್ಳಿ ಪಟ್ಟಣದ ನಾಲಬಂದ್ ವಾಡಿಯ ಮಕ್ಕಳು
(ಸದ್ದಿಲ್ಲದೆ ಎಲ್ಲೆಡೆ ಆಚರಣೆಯಾದ ಈದ್-ಮಿಲಾದ್)
ಚಿಕ್ಕನಾಯಕನಹಳ್ಳಿ : ಪಟ್ಟಣದಲ್ಲಿ ಸೋಮವಾರದಂದು ಮುಸ್ಲಿಮ್ ಬಾಂಧವರು ಈದ್ ಮಿಲಾದ್ ಹಬ್ಬವನ್ನು ಆಚರಿಸಿದರು. ಗಣೇಶೋತ್ಸವಗಳು ಇರುವುದರಿಂದ ಯಾವುದೇ ಬಗೆಯ ಮೆರವಣಿಗೆ, ಸದ್ದು-ಗದ್ದಲ ಇಲ್ಲದೆ ಶಾಂತಿಯುತವಾಗಿ ‘ಮಿಲಾದ್-ಉನ್-ನಬಿ’ ಆಚರಿಸಲಾಗಿದೆ.
ಗಣೇಶೋತ್ಸವಗಳ ಮೆರವಣಿಗೆ, ಗಣೇಶ ಆರ್ಕೆಸ್ಟ್ರಾ, ಗಣೇಶ ರಸಸಂಜೆ ಇತ್ಯಾದಿ ಎಲ್ಲವೂ ಮುಗಿದ ನಂತರದ ದಿನಗಳಲ್ಲಿ ಈದ್ ಮಿಲಾದ್ ಮೆರವಣಿಗೆಗೆ ಅವಕಾಶ ನೀಡುವಂತೆ ಪಟ್ಟಣದ ಮಸೀದಿ ಜಮಾತ್ ಕಮಿಟಿಯವರು ಅರ್ಜಿ ಕೊಟ್ಟಿದ್ದಾರೆ. ಹಾಗಾಗಿ, ನಂತರದ ದಿನಗಳಲ್ಲಿ ಮಿಲಾದ್-ಮೆರವಣಿಗೆಗೆ ಅನುಕೂಲ ಕಲ್ಪಿಸಿರುವುದಾಗಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಯತೀಶ್ ಹೇಳುತ್ತಾರೆ.
ಈದ್ ಮಿಲಾದ್ ಸಾಮರಸ್ಯ-ಸೌಹಾರ್ದತೆಯ ಮಹತ್ವದ ಹಬ್ಬವಾಗಿರುವುದರಿಂದ ಶಾಂತಿಯುತವಾಗಿ ಹಬ್ಬವನ್ನು ಆಚರಿಸಲು ತಾಲ್ಲೂಕಿನಲ್ಲಿ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯಾವುದೇ ಅಡಚಣೆಯಿಲ್ಲದೆ ಎಲ್ಲರ ಹಬ್ಬಗಳು ಆಚರಣೆಗೊಳ್ಳಬೇಕು ಎಂದು ಆರಕ್ಷಕ ವೃತ್ತ ನಿರೀಕ್ಷಕ ಎಫ್ ಕೆ ನದಾಫ್ ತಿಳಿಸಿದರು.
ಮಿಲಾದ್ ಮಹತ್ವ,
ಈದ್ ಮಿಲಾದ್ ಹಬ್ಬವನ್ನು ಸುನ್ನಿ ಮುಸ್ಲಿಮರು ಇಸ್ಲಾಮ್ ಧಾರ್ಮಿಕ ಪಂಚಾಂಗದ 12 ನೇ ದಿನದಂದು ಆಚರಿಸಿದರೆ, ಶಿಯಾ ಮುಸ್ಲಿಮರು ‘ರಬಿ ಉಲ್ ಅವ್ವಲ್’ನ 17’ನೇ ದಿನದಂದು ಆಚರಿಸಿಕೊಳ್ಳುತ್ತಾರೆ. ಶಾಂತಿ, ನೆಮ್ಮದಿ, ಸೌಹಾರ್ದತೆ, ಸಾಮರಸ್ಯ ಹಾಗೂ ಸಹಬಾಳ್ಮೆಯಂತಹ ಪ್ರವಾದಿಯವರು ನೀಡಿರುವ ವಿಶ್ವ-ಮಾನವೀಯ ಮಹತ್ವದ ಸಂದೇಶಗಳನ್ನು ಪಾಲಿಸುವುದರ ದ್ಯೋತಕವಾಗಿ ಈದ್ ಮಿಲಾದ್’ನ್ನು ಆಚರಿಸಲಾಗುತ್ತದೆ.
ಪ್ರವಾದಿ-ಪೈಗಂಬರ್ ಮೊಹಮ್ಮದರ ಜನ್ಮದಿನವನ್ನು ಈದ್-ಎ-ಮಿಲಾದ್ ಹೆಸರಿನಲ್ಲಿ ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ದಿನವನ್ನು ನಬಿದ್, ಮಿಲಿದ್ ಮತ್ತು ಮಿಲಾದ್-ಅನ್-ನಬಿ ಎಂದೂ ಹೆಸರಿಸಲಾಗಿದೆ. ಒಂದೇ ಅರ್ಥವನ್ನೇ ಕೇಂದ್ರೀಕರಿಸಿ ಎಲ್ಲ ಹೆಸರುಗಳನ್ನು ಸೂಚಿಸಲಾಗಿದೆ. ಮಧ್ಯಪ್ರಾಚ್ಯದ ಅರೇಬಿಕ್ ರಾಷ್ಟ್ರಗಳು ಹಾಗೂ ಹಲವು ಯುರೋಪಿಯನ್ ದೇಶಗಳಲ್ಲಿ ಈ ದಿನ ರಾಷ್ಟ್ರೀಯ ಸಾರ್ವಜನಿಕ ರಜೆ ಆಗಿರುತ್ತದೆ.
ಇಸ್ಲಾಮಿಕ್ ಕ್ಯಾಲೆಂಡರಿನ 3 ನೇ ತಿಂಗಳ 12 ನೇ ತಾರೀಕಿನ ದಿನ ಪ್ರವಾದಿ ಮಹಮದ್ ಪೈಗಂಬರ್ ಜನಿಸಿದರು ಎಂದು ನಂಬಲಾಗಿದೆ. ಈ ನಂಬಿಕೆಯ ಪ್ರಕಾರ ಕ್ರಿಸ್ತಶಕ 517 ರಲ್ಲಿ ಪ್ರವಾದಿ ಮೊಹಮ್ಮದ್ ಜನಿಸಿದರು. ಪ್ರವಾದಿಯವರ ಈ ಜನ್ಮದಿನವನ್ನು ಮೊದಲಿಗೆ ಈಜಿಫ್ತಿನಲ್ಲಿ ಆಚರಿಸಲಾಗಿತ್ತಂತೆ. ನಂತರದ 11 ನೇ ಶತಮಾನದ ಶುರುವಾತಿನಿಂದ ಇದು ವಿಶ್ವದಾದ್ಯಂತ ಹಬ್ಬಿದೆ. ಪ್ರವಾದಿ ಮೊಹಮ್ಮದ್ ಪೈಗಂಬರರು ಸೌದಿ ಅರೇಬಿಯಾದ ಮಕ್ಕಾದಲ್ಲಿ ಜನಿಸಿದ್ದರು. ಕ್ರಿಸ್ತಶಕ 540 ರಲ್ಲಿ ಮಕ್ಕಾದ ಹಿರಾ ಗುಹೆಯಲ್ಲಿ ಅವರು ಜ್ಞಾನೋದಯವನ್ನು ಪಡೆದರು. ನಂತರದ ತಮ್ಮ ಜೀವಿತಾವಧಿಯ ಅಷ್ಟೂ ಕಾಲವನ್ನು ಅವರು ಇಸ್ಲಾಮ್ ಧರ್ಮದ ಸ್ಥಾಪನೆ ಮತ್ತು ಅದರ ವಿಸ್ತರಣೆಗಾಗಿ ಮೀಸಲಿಟ್ಟರು. ಇದರ ಪರಿಣಾಮ ಇಡೀ ಸೌದಿ ಅರೇಬಿಯಾ ದೇವರ ಆರಾಧನೆಗೆಂದೇ ಮೀಸಲಾದ ರಾಜ್ಯವಾಯಿತು. ಕ್ರಿಸ್ತಶಕ 632 ರಲ್ಲಿ ಮೊಹಮ್ಮದ್ ಪೈಗಂಬರರು ಇಹಲೋಕ ತ್ಯಜಿಸಿ ದೇವರ ರಾಜ್ಯ ಸೇರಿಕೊಂಡರು. ಅದಾದ ಬಳಿಕ ಅವರ ಜೀವನ ಮತ್ತು ಬೋಧನೆಗಳನ್ನು ಅನುಸರಿಸಿ ಅವರ ಅನುಯಾಯಿಗಳು ಅನೇಕ ಹಬ್ಬಗಳನ್ನು ಧಾರ್ಮಿಕ ಪದ್ಧತಿಯ ಅಂಗದಂತೆ ಆಚರಿಸಲು ತೊಡಗಿಕೊಂಡರು.
ಈದ್ ಮಿಲಾದ್’ನಂದು ಪ್ರವಾದಿ ಮೊಹಮ್ಮದರ ಜೀವನ ಮತ್ತು ಬೋಧನೆಗಳ ಕುರಿತಾಗಿ ವಿಶೇಷ ಉಪನ್ಯಾಸಗಳು, ಚರ್ಚೆ-ಪರಾಮರ್ಶೆಗಳು ನಡೆಯುತ್ತವೆ. ಮುಸ್ಲಿಮ್ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ಧರ್ಮ ಮತ್ತು ಜೀವನ ಎರಡರ ಆತ್ಮಾವಲೋಕನ ಹಾಗೂ ಆತ್ಮಸಾಕ್ಷಾತ್ಕಾರದ ರೂಪಕದಂತೆಯೂ ಈದ್ ಮಿಲಾದ್ ಆಚರಣೆ ಗೋಚರಿಸುತ್ತದೆ. ಇನ್ನು ಶಿಯಾ ಮುಸ್ಲಿಮರು ಈ ದಿನದಂದು ಪ್ರವಾದಿ ಮೊಹಮ್ಮದರು ಹಜ಼ರತ್ ಅಲಿ’ಯವರನ್ನು ತಮ್ಮ ಉತ್ತರಾಧಿಕಾರಿ ಎಂದು ಘೋಷಿಸಿದ ದಿನ ಎಂದು ನಂಬಿ ಆಚರಿಸುತ್ತಾರೆ. ಒಂದೆಡೆ ಸಾವಿನ ಸೂತಕ ಮತ್ತು ದುಃಖವಿದ್ದರೆ, ಇನ್ನೊಂದೆಡೆ ಉತ್ತರಾಧಿಕಾರತ್ವದ ಹಕ್ಕುದಾರಿಕೆಯನ್ನು ಮಂಡಿಸಲಾಗುತ್ತದೆ. ಸುನ್ನಿ ಮತ್ತು ಶಿಯಾ ಪಂಗಡಗಳು ತಂತಮ್ಮ ನಂಬಿಕೆಯನುಸಾರ ಪವಿತ್ರ ಈದ್ ಮಿಲಾದ್ ಹಬ್ಬವನ್ನು ಆಚರಿಸುತ್ತವೆ.
ಈ ದಿನದಂದು ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ, ಪವಿತ್ರ ಖುರಾನ್ ಪಠಣ, ವಿಶೇಷ ಉಪನ್ಯಾಸ, ಪ್ರವಾದಿಯವರ ಜೀವನ ದರ್ಶನ ಮತ್ತು ಮೌಲ್ಯಯುತ ಆದರ್ಶಗಳ ಕುರಿತು ಗೋಷ್ಠಿಗಳನ್ನು ನಡೆಸಲಾಗುತ್ತದೆ. ಮೆರವಣಿಗೆ, ಜುಲೂಸ್, ಮುಶಾಯೆರಾ, ಘಜ಼ಲ್ ಸಂಗೀತ್ ಕಾರ್ಯಕ್ರಮಗಳೂ ಕೆಲವೆಡೆ ಜರುಗುತ್ತವೆ. ಎಲ್ಲ ಎಲ್ಲದರಲ್ಲೂ ಪ್ರವಾದಿಯವರ ಮೇಲಿನ ಗೌರವ ಮತ್ತು ಪ್ರೇಮ ಕಂಡುಬರುತ್ತದೆ.
__ಸಂಚಲನ
ಚಿಕ್ಕನಾಯಕನ ಸೀಮೆಯಿಂದ