C N Halli:
(ಮೈಸೂರು-ಜೇವರ್ಗಿ ಹೆದ್ದಾರಿಯ ನಿರ್ಮಾಣದೋಷ ಸರಿಪಡಿಸಿ, ವೈಜ್ಞಾನಿಕ ದುರಸ್ತಿ ಮಾಡಿಕೊಡುವಂತೆ ಟ್ಯಾಕ್ಸಿ ಚಾಲಕರ ಆಗ್ರಹ)
ಚಿಕ್ಕನಾಯಕನಹಳ್ಳಿ : ಮೈಸೂರು-ಜೇವರ್ಗಿ ಹೆದ್ದಾರಿ ಹಾದುಹೋಗುವ ಮಾರ್ಗಮಧ್ಯದಲ್ಲಿ ಸಿಗುವ ತಾಲ್ಲೂಕಿನ ಆಲದಕಟ್ಟೆ, ಸಾಲ್ಕಟ್ಟೆ ಭಾಗದಲ್ಲಿ ದಿನಕ್ಕೊಂದರಂತೆ ಒಂದಲ್ಲಾ ಒಂದು ರೀತಿಯ ಅಪಘಾತಗಳು ಸಂಭವಿಸುತ್ತಿವೆ. ಇಲ್ಲಿ ನಿರ್ಮಿಸಿರುವ ಹೆದ್ದಾರಿ ರಸ್ತೆಯ ನಿರ್ಮಾಣ ಅವೈಜ್ಞಾನಿಕವಾಗಿರುವುದೇ ಇದಕ್ಕೆ ಕಾರಣ ಎಂದು ಟ್ಯಾಕ್ಸಿ ಚಾಲಕರ ಸಂಘ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿದೆ.
ಚಿಕ್ಕನಾಯಕನಹಳ್ಳಿಯಿಂದ ಹುಳಿಯಾರು ಮಾರ್ಗವಾಗಿ ಮೈಸೂರು-ಜೇವರ್ಗಿ ಹೆದ್ದಾರಿಯ ರಸ್ತೆಯ ಎರಡೂ ಬದಿಯ ಪಥ ಸಮತಟ್ಟಾಗಿರುವುದಿಲ್ಲ. ಎಡಬದಿಯ ಪಥ ತುಸು ಎತ್ತರಕ್ಕಿದ್ದರೆ, ಬಲಬದಿಯ ಪಥ ಕೊಂಚ ತಗ್ಗಾಗಿದೆ. ಭಾರೀ ವಾಹನಗಳು ಮತ್ತು ಸರಕು ಸಾಗಣೆಯ ವಾಹನಗಳು ಇಲ್ಲಿ ಚಲಿಸುವಾಗ ಏಕಾಏಕಿ ಒಂದುಕಡೆಗೆ ವಾಲಿಕೊಂಡು ಆಯತಪ್ಪಿ ಪಲ್ಟಿ ಹೊಡೆದುಬೀಳುತ್ತವೆ. ಈ ವಿಷಯ ಸಾಮಾಜಿಕ ಜಾಲತಾಣದಲ್ಲೂ ತೀವ್ರ ಚರ್ಚೆಗೆ ಗ್ರಾಸವಾದ ಕಾರಣ, ಚಿಕ್ಕನಾಯಕನಹಳ್ಳಿಯ ಆರಕ್ಷಕ ವೃತ್ತ ನಿರೀಕ್ಷಕರಾದ ಎಫ್ ಕೆ ನದಾಫ್’ರವರು ಈ ಮಾರ್ಗದ ರಸ್ತೆಯಲ್ಲಿ ಸ್ವತಃ ತಮ್ಮ ಜೀಪ್ ಚಾಲನೆ ಮಾಡಿ, ರಸ್ತೆ ನಿರ್ಮಾಣದ ಏರು-ಪೇರುಗಳನ್ನು ಅನುಭವಿಸಿದ್ದಾರೆ. ಟ್ಯಾಕ್ಸಿ ಚಾಲಕರ ಸಂಘ ಹಾಗೂ ಸ್ಥಳೀಯರ ಒತ್ತಾಯಕ್ಕೆ ಮಣಿದ ಪೊಲೀಸ್ ಇಲಾಖೆ ಮೇಲಧಿಕಾರಿಗಳು ಸದರಿ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಮೃತ್ಯುಂಜಯ ಮತ್ತು ರಸ್ತೆ ನಿರ್ಮಾಣ ಗುತ್ತಿಗೆದಾರ ಕಂಪನಿಯಾದ ಶ್ರೀ ಸಾಯಿ ಕನ್ಸಟ್ರಕ್ಷನ್ಸ್’ಗೆ ಪತ್ರ ಬರೆದಿದ್ದಾರೆ.
ವೈಜ್ಞಾನಿಕವಾಗಿ ರಸ್ತೆಯ ಮರುಪರಿಶೀಲನೆ ನಡೆಸಿ, ಅದರಲ್ಲಿ ಆಗಿರುವ ಲೋಪಗಳನ್ನು ಸಾಧ್ಯವಾದಷ್ಟು ಬೇಗನೇ ಸರಿಪಡಿಸುವುದು. ಪ್ರಸ್ತುತ ಸ್ಥಿತಿಯಲ್ಲಿ ರಸ್ತೆಮೇಲೆ ಚಲಿಸುವ ವಾಹನಗಳು ಆಯತಪ್ಪುವ ಸಂಭವ ಹೆಚ್ಚಿದೆ.
ಇದರಿಂದಾಗಿ ಈ ಭಾಗದಲ್ಲಿ ಅಪಘಾತಗಳ ಸಂಖ್ಯೆ ದಿನೇದಿನೆ ಏರುತ್ತಿದೆ. ಕೂಡಲೇ ಹೆದ್ದಾರಿ ರಸ್ತೆಯ ವೈಜ್ಞಾನಿಕ ಪರಿಶೀಲನೆ ನಡೆಸಿ, ಅದನ್ನು ಸರಿಪಡಿಸಿ ಸಾರ್ವಜನಿಕ ಬಳಕೆಗೆ ವಹಿಸತಕ್ಕದ್ದು ಎಂದು ಆರಕ್ಚಕ ವೃತ್ತ ನಿರೀಕ್ಷಕ ಎಫ್ ಕೆ ನದಾಫ್’ರವರ ಕಚೇರಿಯಿಂದ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಮತ್ತು ರಸ್ತೆ ನಿರ್ಮಾಣ ಗುತ್ತಿಗೆದಾರ ಕಂಪನಿ ಶ್ರೀ ಸಾಯಿ ಕನ್ಸಟ್ರಕ್ಷನ್ಸ್’ಗೆ ಪತ್ರ ರವಾನಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೃತ್ಯುಂಜಯ ಪ್ರತಿಕ್ರಿಯಿಸಿ, ಸಾಧ್ಯವಾದಷ್ಟೂ ಶೀಘ್ರವೇ ರಸ್ತೆಯ ಸಮರ್ಪಕ ದುರಸ್ತಿಯನ್ನು ನಿರ್ವಹಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಲಾಗುವುದು ಎಂದಿದ್ದಾರೆ.
ಚಾಲಕರ ಮೇಲೆ ಬೀಳುವ ಒತ್ತಡ ಮತ್ತದರ ದುಷ್ಪರಿಣಾಮ ::
ನಾಗರಿಕರ ಮೇಲೆ ವಿಧಿಸಲ್ಪಟ್ಟಿರುವ ನಾನಾ ರೀತಿಯ ತೆರಿಗೆಗಳಷ್ಟೇ ಅಲ್ಲದೆ ನಾವು ರಸ್ತೆ ತೆರಿಗೆಯನ್ನೂ ಪಾವತಿಸುತ್ತೇವೆ. ಟೋಲ್ ಸುಂಕವನ್ನೂ ಪಾವತಿಸುತ್ತೇವೆ. ಇಷ್ಟೆಲ್ಲಾ ಪಾವತಿಸಿದ ನಂತರವೈ ನಮಗೆ ವ್ಯವಸ್ಥಿತ ರಸ್ತೆ ಸಿಗುವುದೇ ಮರೀಚಿಕೆಯಾಗಿದೆ. ವಾಹನ ಚಾಲಕರಾದ ನಾವು, ದಿನದ ಹದಿನೆಂಟು-ಇಪ್ಪತ್ತು ಗಂಟೆಗಳ ಅವಧಿಗೆ ರಸ್ತೆ ಮೇಲೆ ಚಲಿಸುತ್ತಿರುತ್ತೇವೆ. ಹೀಗೆ ಸಮವಲ್ಲದ ಅಸಮತೋಲ ರಸ್ತೆಯ ಮೇಲೆ ವಾಹನ ಚಾಲನೆ ಮಾಡುವಾಗ ಉಂಟಾಗುವ ದೈಹಿಕ ಮತ್ತು ಮಾನಸಿಕ ಒತ್ತಡಗಳು ನಮ್ಮನ್ನು, ನಮ್ಮ ಆಯಸ್ಸಿಗೂ ಮೊದಲೇ ಬಲಿ ತೆಗೆದುಕೊಳ್ಳುತ್ತಿವೆ. ನಮ್ಮ ಈಯೆಲ್ಲ ಸಂಕಟಗಳಿಗೆ ಯಾರನ್ನು ಹೊಣೆ ಮಾಡುವುದು. ನಮ್ಮ ಅಕಾರಣ ಪ್ರಾಣಹಾನಿಗೆ ಯಾರನ್ನು ದೂಷಿಸುವುದು. ಇದರಿಂದ ನಮ್ಮ ಕುಟುಂಬಗಳಿಗೆ ಒದಗುವ ತಬ್ಬಲಿತನಕ್ಕೆ ಯಾರು ಜವಾಬ್ದಾರರಾಗುತ್ತಾರೆ ಎಂದು ಕರ್ನಾಟಕ ರಾಜ್ಯ ಟ್ಯಾಕ್ಸಿ ಚಾಲಕರ ಸಂಸ್ಥೆಯ ಜಂಟಿ ಕಾರ್ಯದರ್ಶಿ ಮಹಮದ್ ಹುಸೇನ್ ಗುಂಡಾ ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಆರಕ್ಷಕ ವೃತ್ತ ನಿರೀಕ್ಷಕರು ಸದರಿ ರಸ್ತೆಯ ಸಮತೋಲನವನ್ನು ಪರೀಕ್ಷಿಸುವ ಸಂದರ್ಭದಲ್ಲಿ, ಕರ್ನಾಟಕ ರಾಜ್ಯ ಟ್ಯಾಕ್ಸಿ ಚಾಲಕರ ಸಂಸ್ಥೆಯ ಜಂಟಿ ಕಾರ್ಯದರ್ಶಿ ಮಹಮದ್ ಹುಸೇನ್ ಗುಂಡಾ ಮತ್ತು ಚಿಕ್ಕನಾಯಕನಹಳ್ಳಿ ಪಟ್ಟಣದ ಟ್ಯಾಕ್ಸಿ ಚಾಲಕರುಗಳಾದ ಯೋಗೇಶ್, ನರೇಂದ್ರ, ಅರುಣ್ ಉಪಸ್ಥಿತರಿದ್ದರು.
__ಸಂಚಲನ
ಚಿಕ್ಕನಾಯಕನ ಸೀಮೆಯಿಂದ