(ಪಬ್ಲಿಕ್ ಸ್ಟೋರಿ ಪ್ರಕಟಿಸಿದ್ದ “ಸುಡುಗಾಡಿಗೆ ರಸ್ತೆ ಯಾವುದಯ್ಯಾ ಸರ್ಕಾರವೇ…!?” ವರದಿಯ ಪರಿಣಾಮ ಸಿದ್ದ ಜನಾಂಗದ ಅಲೆಮಾರಿ ವಸತಿ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿಗಳು ಪ್ರಾರಂಭಗೊಂಡಿವೆ)
ಚಿಕ್ಕನಾಯಕನಹಳ್ಳಿ : ತಾಲ್ಲೂಕಿನ ಕಸಬಾ ಹೋಬಳಿ ಹೊನ್ನೆಬಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ದಬ್ಬೇಘಟ್ಟ ಗ್ರಾಮದ ಸರ್ವೆ ನಂಬರ್-122’ರಲ್ಲಿ ಸಿದ್ದ ಜನಾಂಗದ ಅಲೆಮಾರಿ ಕುಟುಂಬಗಳಿಗೆ ನಿವೇಶನ ಹಂಚಿಕೆಯಾಗಿರುವ ವಸತಿಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಮಾಡಲು ಬಂದಿದ್ದ ಅಧಿಕಾರಿಗಳನ್ನು ತಡೆದು, ಸ್ಥಳೀಯರು ರಸ್ತೆ ನಿರ್ಮಾಣ ಕಾಮಗಾರಿಗೆ ವಿರೋಧ ಒಡ್ಡಿದ್ದಾರೆ.
ಸ್ಥಳದಲ್ಲಿ ತಾಲ್ಲೂಕಿನ ಸಮಾಜ ಕಲ್ಯಾಣ ಅಧಿಕಾರಿ ಶ್ರೀಧರಮೂರ್ತಿ ಮತ್ತು ಸಿಬ್ಬಂದಿ, ಹೊನ್ನೆಬಾಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಭೈರಪ್ಪ ಹಾಗೂ ಹೊನ್ನೆಬಾಗಿ ಗ್ರಾಮ ಆಡಳಿತ ಅಧಿಕಾರಿ ಅಶೋಕ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ಡಾ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ತುಮಕೂರು ಜಿಲ್ಲೆ, ತುಮಕೂರು ನಿರ್ಮಿತಿ ಕೇಂದ್ರ, ಜಿಲ್ಲಾ ಆಡಳಿತ ಹಾಗೂ ತಾಲ್ಲೂಕು ಆಡಳಿತ ಜಾಗ ಗುರ್ತಿಸಿ, ನಿವೇಶನ ಹಂಚಿಕೆ ಮಾಡಿ, ಅಲೆಮಾರಿ ಸಿದ್ದರಿಗೆ ವಸತಿ ಕಲ್ಪಿಸಿರುವ ಪ್ರದೇಶ ಅದು. ಅಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಆಗಲೇ ಅಳೆದು, ನಿರ್ಧರಿಸಿ ನಿಗದಿ ಮಾಡಲಾಗಿತ್ತು. ಈಗ ಅಲ್ಲಿ ಬಳಕೆಯಲ್ಲಿರುವ ಕಚ್ಛಾರಸ್ತೆಯೇ ಅಲ್ಲಿಗಿರುವ ಸಂಪರ್ಕದ ಏಕೈಕ ದಾರಿ. ಈ ಹಿಂದೆ (ಸರ್ವೇಯರ್) ಭೂ-ಮಾಪನ ಅಧಿಕಾರಿ ಮತ್ತು ಗ್ರಾಮ ಆಡಳಿತ ಅಧಿಕಾರಿಗಳು ಸ್ಥಳವನ್ನು ಅಳೆದು ರಸ್ತೆಗಾಗಿ ಈಗಿರುವ ಜಾಗವನ್ನೇ ಬಾಂದು-ಬಂದೋಬಸ್ತ್ ಮಾಡಿ ತೆರಳಿದ್ದರು. ಆಗ ಅಕ್ಕಪಕ್ಕದವರು ಇದನ್ನು ಒಪ್ಪಿ ಸಹಿ ಮಾಡಿಕೊಟ್ಟಿದ್ದರು. ಅದೇ ಕಚ್ಚಾ ರಸ್ತೆಯನ್ನು ಪಕ್ಕಾ ರಸ್ತೆಯನ್ನಾಗಿ ನಿರ್ಮಾಣ ಕಾಮಗಾರಿ ಪ್ರಾರಂಭಿಸಲು ಜೆಸಿಬಿ ಸಮೇತ ಭಾನುವಾರ ಬೆಳಗ್ಗೆ ಅಲ್ಲಿಗೆ ಹೋದಾಗ, ಕಾಮಗಾರಿ ಕೆಲಸಗಳನ್ನು ತಡೆದು ಈಗ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಪ್ರಸ್ತುತ, ಅಲೆಮಾರಿಗಳ ವಸತಿ ಪ್ರದೇಶದಲ್ಲಿ ಭೂ-ಮಾಪನ ಇಲಾಖೆಯ ಅಧಿಕಾರಿಗಳು ಮತ್ತೊಮ್ಮೆ ಹೊಸದಾಗಿ ನಿವೇಶನಗಳ ಚಕ್ಕುಬಂದಿ ಸಿದ್ಧಪಡಿಸಿದ್ದು, ವಿತರಣೆಯಾಗಿರುವ ಹಕ್ಕುಪತ್ರಗಳಲ್ಲಿ ಆಗಿರುವ ಅಳತೆ ಮತ್ತು ಚಕ್ಕುಬಂದಿ ಲೋಪಗಳನ್ನು ಸರಿಪಡಿಸಿ, ನಿವೇಶನಗಳಲ್ಲಿಮನೆ ನಿರ್ಮಾಣ ಕಾಮಗಾರಿಗೆ ಅನುಮತಿ ಪತ್ರಗಳನ್ನು ವಿತರಿಸಲಾಗುವುದು. ಜಿಲ್ಲೆಯ ಡಾ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ತಾಲ್ಲೂಕಿನ ಸಮಾಜ ಕಲ್ಯಾಣ ಅಧಿಕಾರಿಗಳ ವ್ಯಾಪ್ತಿ ಸುಪರ್ದಿಗೆ ಲಿಖಿತವಾಗಿ ನಿವೇಶನ ಹಂಚಿಕೆಯ ಜಾಗ ಹಸ್ತಾಂತರವಾದ ನಂತರ ಅಲ್ಲಿನ ಅಭಿವೃದ್ಧಿ ಕಾಮಗಾರಿಗಳಿಗೆ ಹಸಿರು ನಿಶಾನೆ ಸಿಕ್ಕಂತಾಗುತ್ತದೆ.
ಈಗ ಆ ವಸತಿ ಪ್ರದೇಶ ಹೊನ್ನೆಬಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದ್ದರೂ, ಅಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಅಧಿಕಾರ ಪಂಚಾಯತಿಗಿರುವುದಿಲ್ಲ. ಇದು ಸುಪರ್ದು-ಹಸ್ತಾಂತರ ಕುರಿತ ತಾಂತ್ರಿಕ ಸಮಸ್ಯೆ. ಇದನ್ನೆಲ್ಲ ಶೀಘ್ರವೇ ನಿವಾರಿಸಿಕೊಂಡು ಅಲೆಮಾರಿಗಳ ನಿವೇಶನ ಜಾಗದಲ್ಲಿ ಅಗತ್ಯವಿರುವ ಸೌಕರ್ಯಗಳನ್ನು ಒದಗಿಸಿಕೊಡಲಾಗುವುದು ಎಂದು ಹೊನ್ನೆಬಾಗಿ ಗ್ರಾಮ ಆಡಳಿತ ಅಧಿಕಾರಿ ಅಶೋಕ್ ತಿಳಿಸಿದ್ದಾರೆ.
ಜಿಲ್ಲೆಯ ಡಾ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ತುಮಕೂರು ನಿರ್ಮಿಸಿ ಕೇಂದ್ರ ವತಿಯಿಂದ ನಮಗೆ ಸದರಿ ಜಾಗಕ್ಕೆ ಸಂಬಂಧಿಸಿ ಸ್ಪಷ್ಟವಾದ ಲಿಖಿತ ಸುಪರ್ದು-ಹಸ್ತಾಂತರ ಸಿಗದ ಹೊರತು, ಗ್ರಾಮ ಪಂಚಾಯತಿ ಮಟ್ಟದಲ್ಲಿ ಯಾವ ನಿರ್ಣಯಗಳನ್ನು ತೆಗೆದುಕೊಳ್ಳಲು ಅವಕಾಶವಿರುವುದಿಲ್ಲ ಎಂದು
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭೈರಪ್ಪ ಹೇಳಿದರು.
ಅವಕಾಶ ವಂಚಿತ ಅನಕ್ಷರಸ್ಥರೇ ಆಗಿರುವ ನಮಗೆ ಸರ್ಕಾರಿ ಕಡತಗಳ ವಿಚಾರ ಅರ್ಥವಾಗುವುದಿಲ್ಲ. ಓದಿ ತಿಳಿದ ದೊಡ್ಡವರು ನಮ್ಮಂಥ ಬಡವರಿಗೆ ಅನುಕೂಲ ಕಲ್ಪಿಸಿಕೊಡಬೇಕು. ಜಿಲ್ಲಾಧಿಕಾರಿಗಳು, ತಾಲ್ಲೂಕು ದಂಡಾಧಿಕಾರಿಗಳು ಆದಷ್ಟು ಬೇಗ ಈ ವಿಚಾರದಲ್ಲಿ ಸೂಕ್ತ ಕ್ರಮಗಳನ್ನು ಜರುಗಿಸಿ, ಅಲೆಮಾರಿ ಕುಟುಂಬಗಳು ವಾಸವಿರುವ ವಸತಿ ಪ್ರದೇಶಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ, ಇಲ್ಲಿಗೆ ಸಂಪರ್ಕ ಕಲ್ಪಿಸುವ ಪಕ್ಕಾ ರಸ್ತೆಯನ್ನು ನಿರ್ಮಿಸಿಕೊಡಬೇಕು ಎಂದು ಸಿದ್ದ ಜನಾಂಗದ ಅಲೆಮಾರಿ ಮುಖಂಡ ವೆಂಕಟೇಶ್ ಆಗ್ರಹಿಸಿದ್ದಾರೆ.
ನಾವೂ ಚೊಚ್ಚಲಮಕ್ಕಳು ::
ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳ ಅನುಸಾರ ಯಾವುದೇ ದೇಶವೊಂದರ ಕಟ್ಟಕಡೆಯ ಪ್ರಜೆಗೂ, ತನ್ನ ಮೂಲಭೂತ ಹಕ್ಕು-ಸೌಕರ್ಯಗಳನ್ನು ಪಡೆದುಕೊಳ್ಳಲು ಬೇಕಾದ ಹಕ್ಕಿದೆ. ನಾವು ಕೂಡ ಈ ಭೂಮ್ತಾಯಿಯ ಚೊಚ್ಚಲಮಕ್ಕಳು. ಆದಿ ಮನುಜರು. ಈ ನೆಲದ ಮೂಲನಿವಾಸಿಗಳು. ನಮಗೆ ನಮ್ಮ ಮನೆಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಮಾಡಿಸಿಕೊಳ್ಳಲು ಹಕ್ಕಿದೆ. ಸಂಬಂಧಿಸಿದ ಅಧಿಕಾರಿ ಮತ್ತು ಇಲಾಖೆಗಳ ಎದುರು ನಾವು ನಮ್ಮ ಸಂವಿಧಾನಬದ್ಧ ಹಕ್ಕನ್ನು ಕೇಳುತ್ತಿದ್ದೇವೆ. ಇನ್ನೂ ಅದೆಷ್ಟು ದಶಕಗಳ ಕಾಲ ನಾವು ಹೀಗೇ ನಿರ್ಗತಿಕರಾಗಿರಬೇಕು, ಈ ವಿಶಾಲ ಆಕಾಶದ ಕೆಳಗೆ ನಾವು ಮಾತ್ರ ಯಾಕೆ ಅನಾಥರಾಗಿರಬೇಕು ಎಂದು ಅಲೆಮಾರಿ ಬುಡಕಟ್ಟು ಮಹಾಸಭಾ ಜಿಲ್ಲಾ ಕಾರ್ಯದರ್ಶಿ ಪರಮೇಶ್, ತಮ್ಮ ನಾಗರಿಕ ಹಕ್ಕುದಾರಿಕೆಯನ್ನು ಮಂಡಿಸುತ್ತಾರೆ.
ಸಂಚಲನ
ಚಿಕ್ಕನಾಯಕನ ಸೀಮೆಯಿಂದ