ತುಮಕೂರು: ಎಪ್ಪತ್ತೈದು ವರ್ಷಗಳ ಇತಿಹಾಸ ನೋಡಿದಾಗ ಸಂವಿಧಾನ ರಕ್ಷಿಸುವಲ್ಲಿ ಸುಪ್ರೀಂ ಕೋರ್ಟ್, ಹೈಕೋರ್ಟ್ ಗಳು ನಿರ್ವಹಿಸಿದ ಪಾತ್ರ ಅಗಾಧವಾದುದ್ದಾಗಿದೆ ಎಂದು ತುಮಕೂರು ಏಳನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಟಿ.ಪಿ. ರಾಮಲಿಂಗೇಗೌಡ ಅಭಿಪ್ರಾಯಪಟ್ಟರು.
ಇಲ್ಲಿನ ಸುಫಿಯಾ ಕಾನೂನು ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಯಲ್ಲಿ ಅವರು ಮಾತನಾಡಿದರು.
ಸಂವಿಧಾನದ ಆರ್ಟಿಕಲ್ 14, 15, 16 ಹಾಗೂ ಆರ್ಟಿಕಲ್ 21ರ ಮಹತ್ವದ ಬಗ್ಗೆ ಒತ್ತಿ ಹೇಳಿದ ಅವರು, ದೇಶದ ಜನರು ಘನತೆಯಿಂದ ಜೀವಿಸುವ, ಮುಕ್ತ ಸ್ವಾತಂತ್ರ್ಯ ಇದು ಸಂವಿಧಾನ ನೀಡಿದ ರಕ್ಷಣೆಯ ಕಾರಣದಿಂದ ನಮಗೆ ಸಿಗುತ್ತಿದೆ ಎಂದರು.
ಜನರ ಹಿತಾಸಕ್ತಿಗೆ ವಿರುದ್ಧವಾದ, ಸಂವಿಧಾನದ ಆಶಯಗಳಿಗೆ ವ್ಯತಿರಿಕ್ತವಾದ ಅನೇಕ ಕಾನೂನುಗಳನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದ್ದನ್ನು ಸ್ಮರಿಸಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅಧಿಕಾರದ ಗೆರೆಯನ್ನು ಸಹ ಸಂವಿಧಾನ ಹಂಚಿದೆ. ನಮ್ಮದು ಒಕ್ಕೂಟದ ಸರ್ಕಾರ ಎಂದು ಹೇಳಿದರು.
ಜನರಿಗೆ ಪ್ರಜಾಸತ್ತಾತ್ಮಕ ಹಕ್ಕುಗಳಷ್ಟೇ ಅಲ್ಲ, ಸಾಮಾಜಿಕ ಸಬಲತೆ, ಆರ್ಥಿಕ ಸಬಲತೆ, ರಾಜಕೀಯ ಸ್ವಾತಂತ್ರ್ಯ ಇವು ಸಂವಿಧಾನದ ಮುಖ್ಯ ಆಶಯವಾಗಿದೆ ಎಂದರು.
ಸಂವಿಧಾನದ ಕರಡು ರಚನಾ ಸಮಿತಿ ಸಭೆಯ ಚರ್ಚೆಗಳನ್ನು ಓದುವುದರಿಂದ ಸಂವಿಧಾನದ ಆಶಯದ ಬಗ್ಗೆ ಗೊತ್ತಾಗಲಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಬಿ. ಜಯಂತಕುಮಾರ್ ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಅವರು, ಸಂವಿಧಾನದ ಕರಡುವರಚನಾ ಸಮಿತಿಯ ಎಲ್ಲಾ ಪ್ರಮುಖರನ್ನು ನೆನೆಯಬೇಕು ಎಂದರು.
ವಿದ್ಯಾರ್ಥಿಗಳು ಶಿಸ್ತು ರೂಢಿಸಿಕೊಳ್ಳಬೇಕು. ವಿದ್ಯಾರ್ಥಿ ದೆಸೆಯಿಂದಲೇ ಕೋರ್ಟ್ ಗಳಿಗೆ ಬರುವುದರಿಂದ ನ್ಯಾಯಾಲಯಗಳ ಕಲಾಪಗಳ ಬಗ್ಗೆ ತಿಳುವಳಿಕೆ ಬರಲಿದೆ. ಇದು, ಮುಂದೆ ವಕೀಲಿಕೆ ಅಭ್ಯಾಸಕ್ಕೆ ಸಹಕಾರಿಯಾಗಲಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಶಿಸ್ತು ಕಡಿಮೆಯಾಗುತ್ತಿದೆ. ಹಿರಿಯ ವಕೀಲರಿಗೆ ಗೌರವ ಕೊಡುವುದನ್ನು ಕಿರಿಯ ವಕೀಲರು ಕಲಿತುಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಅವರು ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಿದರು. ಪ್ರಾಂಶುಪಾಲರಾದ ಡಾ. ರಮೇಶ್, ಪ್ರಾಧ್ಯಾಪಕರಾದ ಓಬಣ್ಣ, ಮಮತಾ ಇತರರು ಇದ್ದರು.