ತುಮಕೂರು: ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಅಮಲಾಪುರದಲ್ಲಿ 20 ಎಕರೆ ಜಾಗದ ಬದಲು 10 ಎಕರೆ ಜಾಗ ನೀಡಲು ಸರ್ಕಾರಕ್ಜೆ ಜಿಲ್ಲಾಧಿಕಾರಿ ಬರೆದಿರುವ ಪತ್ರಕ್ಕೆ ಮಂಗಳವಾರ ನಡೆದ ಸಭೆಯಲ್ಲಿ ವಕೀಲರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಭೆಗೆ ಜಿಲ್ಲಾಧಿಕಾರಿ ಗೈರು ಆಗಿದ್ದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾದೀಶರಾದ ಜಯಂತ ಕುಮಾರ್ ಅವರನ್ನು ಕೆರಳಿಸಿತು. ಪ್ರತಿ ಸಲ ಸಭೆ ಕರೆದಾಗಲೂ ಜಿಲ್ಲಾಧಿಕಾರಿ ಅವರ ಸಮಯವನ್ನು ನಿಗದಿಪಡಿಸಿಕೊಂಡೇ ಕರೆಯಲಾಗುತ್ತಿದೆ. ಅವರು ನ್ಯಾಯಾಂಗಕ್ಕೆ ಸುಳ್ಳು ಹೇಳುತ್ತಿದ್ದಾರೆ. ನ್ಯಾಯಾಂಗದ ಬಗ್ಗೆ ಇಷ್ಟೊಂದು ಅಸಡ್ಡೆ ಸರಿ ಅಲ್ಲ ಎಂದರು.
ಉಪ ಲೋಕಾಯುಕ್ತರ ನಿರ್ದೇಶನವಿದೆ. ಕನಿಷ್ಠ 20 ಎಕರೆ ಇಲ್ಲದಿದ್ದರೆ 18 ಎಕರೆಯಷ್ಟಾದರೂ ಭೂಮಿ ಬೇಕು. ಇಲ್ಲದಿದ್ದರೆ ಏನು ಪ್ರಯೋಜನವಾಗದು ಎಂದರು. ಹೆಚ್ಚುವರಿ ಜಿಲ್ಲಾಧಿಕಾರಿ ಅವರು ತಂದಿದ್ದ ಹತ್ತು ಎಕರೆ ಜಾಗ ನೀಡಲು ಸರ್ಕಾರಕ್ಕೆ ಬರೆದಿದ್ದ ಪತ್ರವನ್ನು ಸ್ವೀಕರಿಸಲು ನಿರಾಕರಿಸಿದರು.
ಜಾಗ ನೀಡಿದರೆ, ಈಗಿರುವ ಕೋರ್ಟ್ ಜಾಗ, ಕಟ್ಟಡಗಳನ್ನು ಕಂದಾಯ ಇಲಾಖೆಗೆ ನೀಡಲಾಗುವುದು. ಇದರಿಂದ ನಗರದಲ್ಲಿ ಬಾಡಿಗೆ ಕಟ್ಟಡಗಳಲ್ಲಿನ ಸರ್ಕಾರಿ ಕಚೇರಿಗಳನ್ನು ಇಲ್ಲಿಗೆ ಸ್ಥಳಾಂತರಿಸಬಹುದು. ನಗರದ ಅಭಿವೃದ್ಧಿ ದೃಷ್ಟಿಯಿಂದಲೂ ಇದು ಮುಖ್ಯವಾಗಿದೆ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆಂಪರಾಜಯ್ಯ ಮಾತನಾಡಿ, ಜಿಲ್ಲಾಧಿಕಾರಿ ಅವರಿಗೆ ಜಾಗ ನೀಡಲು ಏನು ಸಮಸ್ಯೆ ಎಂದರು
ಪ್ರಧಾನ ಕಾರ್ಯದರ್ಶಿ ಮಹೇಶ್ ಹಿರೇಹಳ್ಳಿ ಮಾತನಾಡಿ, ಜಿಲ್ಲಾಧಿಕಾರಿ ಅವರು ನ್ಯಾಯಾಂಗದ ಜತೆ ಚೆಲ್ಲಾಟವಾಡುತ್ತಿದ್ದಾರೆ. ಎಂ ಎಸ್ ಎಂ ಇ ಗೆ ನೀಡಿದ್ದ ಹದಿನೈದು ಎಕರೆ ಜಾಗದಲ್ಲಿ ಹತ್ತು ಎಕರೆ ನೀಡಿ, ಐದು ಎಕರೆ ಆಗೇ ಉಳಿಸಿಕೊಳ್ಳಲು ಕಾರಣವೇನು. ಇದರ ಹಿಂದೆ ಏನು ಉದ್ದೇಶ ಅಡಗಿದೆ ಎಂದು ಪ್ರಶ್ನಿಸಿದರು.
ಜಿಲ್ಲಾಧಿಕಾರಿ ಧೋರಣೆ ಬಗ್ಗೆ ಕೆಂಡಾಮಂಡಲವಾದ ಅವರು, ನಾಳೆಯಿಂದಲೇ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿಗಳ ಕೋರ್ಟ್ ಕಲಾಪ ಬಹಿಷ್ಕರಿಸಲಾಗುವುದು. ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಆರಂಭಿಸುತ್ತೇವೆ. ಕಾನೂನು ಸಂಘರ್ಷ ಎದುರಾದರೆ ಜಿಲ್ಲಾಧಿಕಾರಿಯೇ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ಉಪಾಧ್ಯಕ್ಷ ಎಂ.ಎಲ್.ರವಿಗೌಡ ಮಾತನಾಡಿ, ಜಿಲ್ಲಾಡಳಿತದ ನಡೆಗೆ ತೀವ್ರ ಬೇಸರ ವ್ಯಕ್ತಪಡಿಸಿದರು. ಹತ್ತು ಎಕರೆ ಜಾಗ ಸ್ವೀಕರಿಸಬಾರದು. ಜಾಗ ಕೊಡದಿದ್ದರೆ ವಕೀಲರ ಶಕ್ತಿ ಏನೆಂಬುದನ್ನು ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಎಚ್ಚರಿಸಿದರು.
ಕೈಗಾರಿಕೆ, ಐಟಿ, ಬಿಟಿ ಅವರಿಗೆ ಓಡೋಡಿ ಬನ್ನಿ ಜಾಗ ಕೊಡುತ್ತೇವೆ ಎಂದು ಜಿಲ್ಲಾಧಿಕಾರಿ ಹೇಳುತ್ತಾರೆ, ಬಡವರಿಗೆ ನ್ಯಾಯ ಕೊಡುವ ನ್ಯಾಯಾಂಗಕ್ಕೆ ಆದರೆ ಜಾಗ ಇಲ್ಲವೇ ಎಂದು ಪ್ರಶ್ನಿಸಿದರು.
ಹಿರಿಯ ವಕೀಲರಾದ ಎಂ.ಬಿ.ನವೀನ್ ಕುಮಾರ್ ಮಾತನಾಡಿ, ಜೆಲ್ಲಿ ಕ್ರಷರ್ ಗಳ ಒತ್ತಡಕ್ಕೆ ಜಿಲ್ಲಾಡಳಿತ ಮಣಿದಂತೆ ಕಾಣುತ್ತಿದೆ. ಜಿಲ್ಲೆಯಲ್ಲಿ ಒಳ್ಳೆಯ ಸತ್ ಸಂಪ್ರದಾಯವಿದೆ. ಜಿಲ್ಲಾಧಿಕಾರಿ ಅದನ್ನು ಹಾಳು ಮಾಡಬಾರದು. ಇದು, ನಮ್ಮ ಜಿಲ್ಲೆ. ನಮ್ಮ ಜಿಲ್ಲೆ ಅಭಿವೃದ್ಧಿ ನಮಗೆ ಬೇಕಾಗಿದೆ. ಇನ್ನು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ತಿಪ್ಪೇಸ್ವಾಮಿ, ಹಿರಿಯ ವಕೀಲರಾದ ಜಿ.ನಾಗರಾಜ್, ಶಿವಕುಮಾರ್, ಸಿ.ಕೆ.ಮಹೇಂದ್ರ ಅವರುಗಳು ಮಾತನಾಡಿ, ಜಿಲ್ಲಾಧಿಕಾರಿ ನಡೆ ಖಂಡಿಸಿದರು.
ಬುಧವಾರ ಸಂಜೆಯೊಳಗೆ ಜಿಲ್ಲಾಧಿಕಾರಿ ಅವರು ತಮ್ಮ ನಿರ್ಧಾರ ಬದಲಿಸಿ 20 ಎಕರೆ ಜಾಗ ನೀಡದಿದ್ದರೆ ಗುರುವಾರದಿಂದಲೇ ಪ್ರತಿಭಟನೆ ನಡೆಸುವುದಾಗಿ ಅಧ್ಯಕ್ಷ ಕೆಂಪರಾಜಯ್ಯ ಪ್ರಕಟಿಸಿದರು.
ಸಭೆಯಲ್ಲಿ ಸಂಘದ ಪದಾಧಿಕಾರಿಗಳಾದ ಸಿಂಧು, ಸೇವಪ್ರಿಯ, ಗೋವಿಂದರಾಜು, ವಕೀಲರಾದ ಮಧು, ಚಂದ್ರಶೇಖರ್ ಇತರರು ಇದ್ದರು.