ತುಮಕೂರು : ನಗರದ ಕನ್ನಡಭವನದಲ್ಲಿ (17.10.2025)’ರ ಶುಕ್ರವಾರ ಸಂಜೆ ಎಸ್ ಐ ಆರ್ ಜಾರಿ ಕುರಿತು ಸಮಾನ-ವಿರೋಧ ಹೊಂದಿರುವ ಕಾಂಗ್ರೆಸ್, ಸಿಪಿಐ(ಎಂ), ಸಿಪಿಐ, ವೆಲ್’ಫೇರ್ ಪಾರ್ಟಿ ಇಂಡಿಯಾ, ಆಮ್ ಎಸ್ ಐ ಆರ್ ಮೂಲಕಆದ್ಮಿ ಪಾರ್ಟಿ, ಬಹುಜನ ಸಮಾಜವಾದಿ ಪಕ್ಷ, ಸರ್ವೋದಯ ಪಕ್ಷ ಹಾಗೂ ರೈತಪರ ಸಂಘಟನೆಗಳು, ಮಹಿಳಾಪರ ಸಂಘಟನೆಗಳು, ದಲಿತಪರ ಸಂಘಟನೆಗಳು, ಕಾರ್ಮಿಕ ಸಂಘಟನೆ ಹಾಗೂ ಪ್ರಗತಿಪರ ಸಂಘಟನೆಗಳೆಲ್ಲ ಒಗ್ಗೂಡಿ ದುಂಡುಮೇಜಿನ ಸಭೆ ನಡೆಸಿವೆ.
ಸಭೆಯಲ್ಲಿ,
ಜನಪರ ಹೋರಾಟಗಾರರು, ರಾಜಕೀಯ ಮುಖಂಡರು, ಪಕ್ಷ-ಪ್ರಮುಖರು, ಮಹಿಳಾಪರ, ದಲಿತಪರ, ರೈತಪರ, ಕಾರ್ಮಿಕಪರ ಚಳವಳಿಗಾರರು, ಪ್ರಗತಿಪರರು, ಚಿಂತಕರು, ಬರಹಗಾರ-ಲೇಖಕರು ಮತ್ತು ಪತ್ರಕರ್ತರು ಭಾಗವಹಿಸಿದ್ದರು.
ಎಸ್ ಐ ಆರ್ ವಿರೋಧ ಯಾಕೆ…. ಎಂಬುದನ್ನು ವಿವರವಾಗಿ ವಿಶ್ಲೇಷಿಸುತ್ತಾ ಮಾತನಾಡಿದ ಸಿಪಿಐ(ಎಂ)ನ ರಾಜ್ಯ ಕಾರ್ಯದರ್ಶಿ ಕಾಮ್ರೇಡ್ ಪ್ರಕಾಶ್,
ಎಸ್ ಐ ಆರ್ ಮೂಲಕ ಭಾರತ ಚುನಾವಣಾ ಆಯೋಗ ಪರೋಕ್ಷವಾಗಿ ಭಾರತೀಯರ ಪೌರತ್ವದ-ಹಕ್ಕನ್ನು ಪ್ರಶ್ನಿಸುತ್ತಿದೆ. ಆ ಅಧಿಕಾರ ಭಾರತ ಚುನಾವಣಾ ಆಯೋಗಕ್ಕಿಲ್ಲ. ಇದನ್ನು ಸುಪ್ರೀಂಕೋರ್ಟ್ ಕೂಡ ಚುನಾವಣಾ ಆಯೋಗಕ್ಕೆ ಈಗಾಗಲೇ ಸ್ಪಷ್ಟವಾಗಿ ನಿರ್ದೇಶಿಸಿದೆ.
ಆದರೂ,
ಬಿಹಾರದಲ್ಲಿ ಕಳೆದ ಎರಡು-ಮೂರು ತಿಂಗಳುಗಳ ಹಿಂದೆ ಚುನಾವಣಾ ಆಯೋಗದ ವತಿಯಿಂದ ಪ್ರಾರಂಭಿಸಲಾದ ಈ ಎಸ್ ಐ ಆರ್ ಪ್ರಕ್ರಿಯೆಯನ್ನು ಈಗ ದೇಶದಾದ್ಯಂತ ಪ್ರಾರಂಭಿಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಇದರ ಅರ್ಥ ಏನೆಂದರೆ, ಈ ದೇಶದ ಯಾವುದೇ ಒಬ್ಬ ನಾಗರಿಕ ತಾನು ಮತದಾನ’ಕ್ಕೆ ಅರ್ಹನಾಗಿದ್ದರೂ ಕೂಡ, ತನ್ನ ಪೌರತ್ವವನ್ನು ಸಿದ್ಧಪಡಿಸದ ಹೊರತು ಮತ ಚಲಾಯಿಸಲು ಹಕ್ಕುದಾರನಾಗಿರುವುದಿಲ್ಲ ಎಂಬುದಾಗಿದೆ.
ಅಂದರೆ,
ಪೌರತ್ವ-ಹಕ್ಕಿನ ಕಾಯ್ದೆಯನ್ವಯ ಸಲ್ಲಿಸಬೇಕಾದ ದಸ್ತಾವೇಜುಗಳನ್ನು ಈಗ ಈ ಎಸ್ ಐ ಆರ್ ಪ್ರಕ್ರಿಯೆಯಲ್ಲಿ ಸಲ್ಲಿಸಿ ಮತ್ತೆ ಹೊಸದಾಗಿ ಮತದಾನದ ಹಕ್ಕನ್ನು ಪಡೆಯಬೇಕಾದ ತುರ್ತು ಈಗ ಒದಗಿಬಂದಿದೆ.
ಬಡವರು, ಹಿಂದುಳಿದವರು, ದಲಿತರು, ಆದಿವಾಸಿ-ಅಲೆಮಾರಿಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಬಹುಪಾಲು ಬಡವರು ಮತ್ತು ಅನಕ್ಷರಸ್ಥರೇ ತುಂಬಿರುವಾಗ ತಮ್ಮ ತಾತ-ಮುತ್ತಾತಂದಿರ ಕಾಲದ ದಸ್ತಾವೇಜುಗಳನ್ನು ಹೊಂದಿರಲು ಅವರಿಂದ ಸಾಧ್ಯವೇ ಇಲ್ಲ. ಮತ್ತದನ್ನು ಈಗ ತಂದು ಚುನಾವಣಾ ಆಯೋಗದ ಈ ಎಸ್ ಐ ಆರ್ ಪ್ರಕ್ರಿಯೆಯಲ್ಲಿ ಪ್ರಸ್ತುತಪಡಿಸುವುದು ದೂರದ ಮಾತೇ ಸರಿ. ಈ ವಾಸ್ತವಾಂಶಗಳ ಬಗ್ಗೆ ಅರಿವಿದ್ದೂ ಕೂಡ ಭಾರತ ಚುನಾವಣಾ ಆಯೋಗ ಈ ಪ್ರಕ್ರಿಯೆಯನ್ನು ಜಾರಿ ಮಾಡುತ್ತಿರುವುದರ ಹಿಂದಿನ ಹುನ್ನಾರವೇನು ಎಂದು ಪರಿಶೀಲಿಸಿದರೆ, ಬಿಜೆಪಿಯ ಕೈಗೊಂಬೆಯಂತೆ ವರ್ತಿಸುತ್ತಿರುವ ಚುನಾವಣಾ ಆಯೋಗವು
ಆದಿವಾಸಿ-ಅಲೆಮಾರಿ, ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗಗಳನ್ನು ಮತದಾನದಿಂದ ಹೊರಗಿಡುವ ಬಿಜೆಪಿ ಪಕ್ಷದ ಹಿಡನ್-ಅಜೆಂಡಾವನ್ನೇ ಜಾರಿ ಮಾಡುತ್ತಿದೆ ಎಂಬ ಅನುಮಾನ ಬರುತ್ತಿದೆ.
ಇಲ್ಲಿ ಮತದಾರ-ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳುವುದಕ್ಕಿಂತ ಹೆಚ್ಚಾಗಿ, ಮತದಾರ-ಪಟ್ಟಿಯಿಂದ ಹೆಸರುಗಳನ್ನು ಕೈ-ಬಿಡುವುದೇ ಮುಖ್ಯವಾಗಿದೆ. ಒದಗಿಸಲಾಗದ ದಸ್ತಾವೇಜುಗಳನ್ನು ಅಪೇಕ್ಷಿಸುತ್ತಿರುವ ಚುನಾವಣಾ ಆಯೋಗವು, ಬಡವರು ಮತ್ತು ಅಂಚಿನ ಜನರ ಮತದಾನದ-ಹಕ್ಕನ್ನು ಕಸಿದುಕೊಳ್ಳುವ ಕೆಲಸ ಮಾಡಹತ್ತಿದೆ. ಇದು ಬಿಜೆಪಿ ಪಕ್ಷದ ಹಿಡನ್-ಅಹೆಂಡಾ ಜಾರಿಯಷ್ಟೇ ಹೊರತು, ಜನಪರವಾದ ಕೆಲಸವಲ್ಲ.
ಬಡವರು ಮತ್ತು ಅಲಕ್ಷಿತರನ್ನು ಹೀಗೆ ಮೂಲೆಗುಂಪು ಮಾಡುವ ತಂತ್ರ ನಮ್ಮ ದೇಶಕ್ಕೆ ಅಪಾಯಕಾರಿ. ಪ್ರಜಾಪ್ರಭುತ್ವಕ್ಕೆ ಮಾರಕ. ಸಾಂವಿಧಾನಿಕ ಆಶಯಗಳಿಗೆ ಹಾನಿಕಾರಕ. ಹಾಗಾಗಿ ಎಸ್ ಐ ಆರ್ ಜಾರಿಗೆ ನಮ್ಮ ತೀವ್ರ ವಿರೋಧವಿದೆ. ಕೇರಳ ಸರ್ಕಾರ ತನ್ನ ರಾಜ್ಯದಲ್ಲಿ ಚುನಾವಣಾ ಆಯೋಗದ ಎಸ್ ಐ ಆರ್-ಪ್ರಕ್ರಿಯೆ ನಡೆಸುವುದಿಲ್ಲ ಎಂದು ವಿಧಾನಸಭೆಯಲ್ಲಿ ಅಂಗೀಕಾರ ನಿರ್ಣಯಿಸಿ ಕೇರಳದಲ್ಲಿ ಎಸ್ ಐ ಆರ್ ಜಾರಿಯನ್ನು ತಡೆದಿದೆ. ಇದೇ ನೀತಿಯನ್ನನುಸರಿಸಿ, ಕರ್ನಾಟಕ ಸರ್ಕಾರವು ಕೂಡ ತನ್ನ ವಿಧಾನಸಭೆಯಲ್ಲಿ ಎಸ್ ಐ ಆರ್ ಅಂಗೀಕಾರ ನಿರ್ಣಯಿಸಿ, ಕರ್ನಾಟಕದಲ್ಲಿಯೂ ಎಸ್ ಐ ಆರ್ ಜಾರಿಯಾಗದಂತೆ ತಡೆಯಬೇಕು ಎಂಬುದು ನಮ್ಮ ಆಗ್ರಹ ಎಂದು ಕಾಮ್ರೇಡ್ ಪ್ರಕಾಶ್ ಮುಖ್ಯಮಂತ್ರಿ ಸಿದ್ಧರಾಮಯ್ಯರನ್ನು ಒತ್ತಾಯಿಸಿದರು.
ಪ್ರಗತಿಪರ ಚಿಂತಕ ಕೆ ದೊರೈರಾಜು ಮಾತನಾಡಿ,
ಬಲಹೀನರು ಮತ್ತು ಬಡವರ ಪರವಾಗಿರುವ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕೇವಲ ಉಳ್ಳವರ ಪರ ಮಾಡಿಡುವ ಕುತಂತ್ರ ಕಳೆದ ಒಂದು ದಶಕದಿಂದಲೂ ನಡೆಯುತ್ತಲೇ ಇದೆ. ಇದರ ಮುಂದುವರಿಕೆಯ ಭಾಗವಾಗಿ ಈಗ ಈ ಎಸ್ ಐ ಆರ್-ಜಾರಿ ಮಾಡಲಾಗುತ್ತಿದೆ. ಇದು, ಬಡವರು ಮತ್ತು ಬಲಹೀನರ ಮತದಾನದ-ಹಕ್ಕನ್ನು ಕಸಿಯಲು ನೇರವಾಗಿ ಹೂಡಿರುವ ಹುನ್ನಾರವಾಗಿದೆ. ಇದು ಆಗಕೂಡದು ಎಂದಾದರೆ, ನಮ್ಮ ಕರ್ನಾಟಕ ಸರ್ಕಾರ ಇದರ ವಿರುದ್ಧ ನಿರ್ಣಯವನ್ನು ಅಂಗೀಕರಿಸಿ ಕರ್ನಾಟಕದಲ್ಲಿ ಇದು ಜಾರಿಯಾಗದಂತೆ ಇದನ್ನು ತಡೆಯಬೇಕು. ಹಾಗೂ ಜಾತ್ಯತೀತ-ಪಕ್ಷಗಳು ಎಂದು ಹೇಳಿಕೊಳ್ಳುವ ಸಾಫ್ಟ್-ಕೋಮುವಾದಿಗಳು ಮೈ-ಚಳಿಬಿಟ್ಟು ಬಹಿರಂಗದಲ್ಲಿ ಬಂದು ಇದರ ವಿರುದ್ಧ ಮಾತನಾಡಬೇಕು ಎಂದು ಹೇಳಿದರು.
ದುಂಡುಮೇಜಿನ ಸಭೆಯಲ್ಲಿ,
ಕೆ ದೊರೈರಾಜು, ಯತಿರಾಜು, ನಟರಾಜಪ್ಪ, ಜವಾಹರ್, ಅನುಪಮಾ, ಸಮೀಉಲ್ಲಾ, ಅಲ್ಲಾಬಕ್ಷ್, ಅಶ್ವತಯ್ಯ, ಕಲ್ಪನಾ, ತಿರುಮಲಯ್ಯ, ತಹಸೀನ್ ಮೈಸೂರಿ, ನಯಾಜ಼್ ಅಹಮದ್, ರಾಮಾಂಜಿನಪ್ಪ, ಶಂಬಣ್ಣ, ಮೂರ್ತಿ, ಬಿ ಉಮೇಶ್, ಷಣ್ಮುಗಪ್ಪ, ಕಮಲ, ಬಾಬು ಮನಸೇ, ಕಿಶೋರ್, ವಸೀಮ್, ರಾಜಮ್ಮ, ಭೋಜರಾಜು, ಅಜ್ಜಪ್ಪ, ಅಪ್ಸರ್, ರಾಘವೇಂದ್ರ, ಲಕ್ಷ್ಮಿಕಾಂತು ಮುಂತಾದವರು ಉಪಸ್ಥಿತರಿದ್ದರು.
ವರದಿ,
ಸಂಚಲನ
ಚಿಕ್ಕನಾಯಕನ ಸೀಮೆಯಿಂದ