ಬಿ.ಜಿ.ನಗರ
ಆದಿಚುಂಚನಗಿರಿ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗವು ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ ಬೆಂಗಳೂರು (RSC) ಸಹಯೋಗದಲ್ಲಿ “ಸುಸ್ಥಿರ ರಸಾಯನಿಕ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಅಭಿವೃದ್ಧಿ” ಎಂಬ ವಿಷಯದ ಮೇಲೆ ಎರಡು ದಿನಗಳ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ (ಭಾರತ ಮತ್ತು ದಕ್ಷಿಣ ಏಷ್ಯಾ)ಯ ಇನೊವೇಶನ್, ತಂತ್ರಯೋಜನೆ ಹಾಗೂ ಸರ್ಕಾರಿ ವ್ಯವಹಾರಗಳ ಮುಖ್ಯಸ್ಥರಾದ ಡಾ. ಶ್ವೇತಾ ರಾಘವನ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು “ಸ್ಪಷ್ಟವಾಗಿ, ಜವಬ್ದಾರಿಯುತವಾಗಿ, ವಿಶಿಷ್ಠವಾಗಿ ವಿದ್ಯಾರ್ಥಿಗಳ ಚಿಂತನೆ ರೂಪುಗೊಳ್ಳಲು ಅಗತ್ಯವಾದ ಸಾಧನಗಳನ್ನು ಹೊಂದಿರಬೇಕು ಎಂಬ ಆಲೋಚನೆಯಿಂದ ಈ ಕಾರ್ಯಗಾರವನ್ನು ರೂಪಿಸಲಾಗಿದೆ. ವೈಜ್ಞಾನಿಕವಾಗಿ ಮತ್ತು ಸಾಮಾಜಿಕವಾಗಿ ಸಾಕಷ್ಟು ಜಟಿಲ ಸಮಸ್ಯೆಗಳನ್ನು ಎದುರಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ ತಾಂತ್ರಿಕ ಕೌಶಲ್ಯಕ್ಕೆ ಹೆಚ್ಚು ಮಹತ್ವ ನೀಡಬೇಕಾಗಿದೆ ಎಂದು ಸಲಹೆ ನೀಡಿದರು.
ಸೆನ್ಸ್ ನ ಹಿರಿಯ ವಿಜ್ಞಾನಿಗಳಾದ ಪ್ರೊ. ಸಿ. ವಿ. ಯೆಳಮಗದ್ ಅವರು, ಜಾಗತಿಕ ಮಟ್ಟದಲ್ಲಿ ರಸಾಯನಿಕ ವಿಜ್ಞಾನಗಳ ಬೆಳವಣಿಗೆಗೆ ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ ನೀಡುತ್ತಿರುವ ಕೊಡುಗೆ ಹಾಗೂ ಸಂಶೋಧನಾ ಸಹಕಾರಗಳ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ಡೀನ್ ಪ್ರೊ. ಪ್ರಶಾಂತ ಕಾಳಪ್ಪ ಅವರು, ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಲ್ಲಿ ನಿರಂತರ ಕಲಿಕೆ ಹಾಗೂ ಸಾಮರ್ಥ್ಯ ವೃದ್ಧಿಯ ಅಗತ್ಯತೆಯನ್ನು ಒತ್ತಿಹೇಳಿದರು.
ವಿವಿಧ ಕ್ಷೇತ್ರದ ವಿಜ್ಞಾನಿಗಳಾದ ಡಾ. ರವಿಕುಮಾರ್., ಡಾ ಟಿ ಆರ್ ಗಿರೀಶ್, ಡಾ. ಬೆಟ್ಟದಯ್ಯ, , ಡಾ ರೇವಯ್ಯ, ಪ್ರೋ ಎಂ ಎನ್ ಚಂದ್ರಪ್ರಭ. ಶ್ರಿಯುತ ಶಶಿಕಿರಣ್ ಇವರುಗಳು ಎರಡು ದಿನದ ಕಾರ್ಯಾಗಾರದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ನಂತರ ನಡೆದ ತಾಂತ್ರಿಕ ಅಧಿವೇಶನಗಳಲ್ಲಿ ಡಾ. ಶೋಭಿತ್ ರಂಗಪ್ಪ, ಡಾ. ಗಿರೀಶ್ ವೈ. ಆರ್., ಡಾ. ಎಸ್. ಎಂ. ಅನುಷ್, ಡಾ. ಕೆ. ಎನ್. ನಂದೀಶ್ ಇವರುಗಳು ರಸಾಯನಿಕ ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತಂತೆ ಉಪನ್ಯಾಸ ನೀಡಿದರು. ನೈಸರ್ಗಿಕ ವಿಜ್ಞಾನ ವಿಭಾಗದ ಪ್ರಾಂಶುಪಾಲರಾದ ಡಾ. ಶ್ವೇತಾ ಎಚ್. ಎನ್. ಅವರು ಸ್ವಾಗತಿಸಿದರು. ಡಾ ಶೋಭಿತ್ ರಂಗಪ್ಪ ಅವರು ವಂದಿಸಿದರು.ರಸಾಯನಶಾಸ್ತ್ರ ವಿಭಾಗದ ಅಧ್ಯಾಪಕರು ಹಾಗೂ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಸಂಶೋಧಕರು ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಿದರು.


