ಪುಸ್ತಕದ ಲೇಖಕರು :ಡಾ. ಎಸ್ ಎನ್ ಶ್ರೀಧರ
ಪುಸ್ತಕ ಪರಿಚಯ :ಡಿ. ಮಲ್ಲಾರೆಡ್ಡಿ ( ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರು)
ಕವಿ ಪರಿಚಯ : ಕರ್ನಲ್ ಎಸ್.ಎನ್. ಶ್ರೀಧರ – ರವರು ಬೆಂಗಳೂರಿನ ಪ್ರತಿಷ್ಠಿತ ವಿಜ್ಞಾನ ಸಂಸ್ಥೆಯಾದ IISc ಸಂಸ್ಥೆಯಿಂದ ಏರೋ ಸ್ಪೇಸ್ ವಿಭಾಗದಲ್ಲಿ ಸ್ನಾತಕೋತ್ತರ ಮತ್ತು ಪಿ. ಎಚ್. ಡಿ. ಪದವಿ ಪಡೆದಿದ್ದು, ಪ್ರಸ್ತುತ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಪತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. N.C.C. – ಗೆ ಅವರು ಸಲ್ಲಿಸಿದ ಅತ್ಯುತ್ತಮ ಸೇವೆಗಾಗಿ ಭಾರತ ಸರ್ಕಾರವು ಅವರಿಗೆ ಕರ್ನಲ್ ಹುದ್ದೆಯನ್ನು ಪ್ರಧಾನ ಮಾಡಿದೆ.
ಅತ್ಯುತ್ತಮ ಲೇಖಕರೂ ಆಗಿರುವ ಡಾ.ಎಸ್. ಎನ್. ಶ್ರೀಧರ್ ರವರು ಪ್ರೊಫೆಸರ್, ಡೀನ್, ಪ್ರಿನ್ಸಿಪಾಲ್, ಡೈರೆಕ್ಟರ್ ಹಾಗೂ ಕುಲಪತಿ…..ಗಳಂತಹ ಉನ್ನತ ಸ್ಥಾನಗಳೂ ಸೇರಿದಂತೆ, ಅನೇಕ ಪ್ರಮುಖ ಹುದ್ದೆಗಳಲ್ಲಿ ನಾಲ್ಕು ದಶಕಗಳ ಅನುಭವ ಹೊಂದಿದ್ದು, ಪ್ರಸಿದ್ಧ ಶಿಕ್ಷಕರಾಗಿರುವಂತೆಯೇ ಪ್ರೇರಣಾದಾಯಕ ನಾಯಕತ್ವ ಮಾರ್ಗದರ್ಶಕರಾಗಿಯೂ ಕಾರ್ಯನಿರ್ವಹಿಸಿ ಅನೇಕ ಶಿಕ್ಷಕರಿಗೆ, ವೃತ್ತಿಪರರಿಗೆ ಮತ್ತು ಕಾರ್ಪೊರೇಟ್ ತಂಡಗಳಿಗೆ ತರಬೇತಿ ನೀಡಿದ್ದಾರೆ.
ಅರ್ಥಪೂರ್ಣ ಮುಖಪುಟವಿರುವ ‘ನಿಮ್ಮ ನಾಯಕತ್ವಕ್ಕೆ ನೀವೇಶಿಲ್ಪಿ’ (ನಾಯಕತ್ವದ ಯಶಸ್ಸಿನ ಸೂತ್ರಗಳ ಕೈಪಿಡಿ ) ಎಂಬ ಈ ವಿಶಿಷ್ಟ ಕೃತಿಯಲ್ಲಿ 32 ಲೇಖನಗಳಿದ್ದು, ಒಬ್ಬ ಸಾಮಾನ್ಯ ಮಾನವನು ಹೇಗೆ ಧನಾತ್ಮಕ ಮನೋಭಾವವನ್ನು ಹೊಂದಬೇಕು ಮತ್ತು ಹೇಗೆ ತಾನೊಬ್ಬ ಯಶಸ್ವಿ ನಾಯಕನಾಗಬಹುದು.
ಎಂಬುದನ್ನು ಚಿಂತಿಸಿ ಬರೆದಿರುವ ಲೇಖನಗಳಲ್ಲಿ ಲೇಖಕರು ತಮ್ಮ ಬೋಧನೆ, ಸಂಶೋಧನೆ ಹಾಗೂ ಶೈಕ್ಷಣಿಕ ನಾಯಕತ್ವದಲ್ಲಿ ಪಡೆದ ವಿಸ್ತಾರವಾದ ಅನುಭವವನ್ನೇ ಸಾರದ ರೂಪದಲ್ಲಿ ಪ್ರಸ್ತುತಪಡಿಸಿದ್ದಾರೆ.
“ಪ್ರತಿಯೊಬ್ಬ ವ್ಯಕ್ತಿಯಲ್ಲೂ ನಾಯಕತ್ವದ ಗುಣಗಳ ಆಗರವಿದೆ. ನಾಯಕನಾದವನು ತನ್ನ ಉತ್ತಮ ನಾಯಕತ್ವದ ವರ್ಚಸ್ಸಿನಿಂದ ಇತರರನ್ನು ಸಂಮೋಹನ ಗೊಳಿಸುವಷ್ಟು ಪ್ರಭಾವ ಬೀರಬಲ್ಲನು. ನಾಯಕತ್ವ ವೆನ್ನುವುದು ತಾಯ್ತನ ವಿದ್ದಂತೆ. ತಾಯಿಯು ತನ್ನ ಮಕ್ಕಳನ್ನು ಅವರು ಜೀವನದಲ್ಲಿ ಯಶಸ್ವಿ ವ್ಯಕ್ತಿಯಾಗಿ ರೂಪುಗೊಳ್ಳುವಂತೆ ತನ್ನ ಸ್ವಾರ್ಥ ಮರೆತು ಪ್ರೀತಿಯಿಂದ ಸಲಹುತ್ತಾಳೆ. ಮಕ್ಕಳು ತಮ್ಮ ತಾಯಿಯಿಂದ ಅತ್ಯಂತ ಪ್ರಭಾವಿತರಾಗುತ್ತಾರೆ. ತಾಯಿಯಂತೆ ಶ್ರೇಷ್ಠ ನಾಯಕನೂ ಸಹ ತನ್ನ ತಂಡದ ಸದಸ್ಯರ ಸರ್ವೋತ್ತಮ ಬೆಳವಣಿಗೆಗಾಗಿ ಕಾಯಾ, ವಾಚಾ ಮತ್ತು ಮನಸಾ ತನ್ನನ್ನು ತೊಡಗಿಸಿಕೊಳ್ಳಬೇಕು ” ಎಂದು ಲೇಖಕರು ಹೇಳುವುದರ ಮೂಲಕ ಒಬ್ಬ ಶ್ರೇಷ್ಠ ನಾಯಕನನ್ನು ತಾಯಿಯಂತಹ ಶ್ರೇಷ್ಠ ಹಾಗೂ ಪೂಜನೀಯ ವ್ಯಕ್ತಿಗೆ ಹೋಲಿಸುತ್ತಾ ನಾಯಕನಾದವನ ಜವಾಬ್ದಾರಿಯನ್ನು ನೆನಪಿಸುತ್ತಾರೆ . ತಮ್ಮ ವೃತ್ತಿಯ ಪಯಣದಲ್ಲಿ ಹಂತ ಹಂತವಾಗಿ ಉನ್ನತ ಹುದ್ದೆಗೇರಿರುವ ಲೇಖಕರಿಗೆ ಇದೆಲ್ಲ ಸಾಧ್ಯವಾಗಿದ್ದು ತಮ್ಮ ಪ್ರಾಮಾಣಿಕವಾದ ಹಾಗೂ ತಮ್ಮ ಸಮರ್ಥವಾದ ನಾಯಕತ್ವ ಗುಣಗಳಿಂದಲೇ ಎಂಬುದು ವೇದ್ಯವಾಗುತ್ತದೆ. ಲೇಖಕರಿಂದ ಈಗಾಗಲೇ ವೃತ್ತಿಗೆ ಸಂಬಂಧಿಸಿದಂತೆ ಕೃತಿಗಳು ಪ್ರಕಟವಾಗಿರುವುದಲ್ಲದೆ, ಕನ್ನಡದಲ್ಲಿ ‘ಬಿಂಬ – ಅರಿಬೊಮ್ಮನ ಸ್ವಗತ’ ( ವಚನಗಳು) ಎಂಬ ಕೃತಿ ಈಗಾಗಲೇ ಪ್ರಕಟಗೊಂಡಿದ್ದು,ಇದು ಲೇಖಕರ ಎರಡನೇ ಕೃತಿಯಾಗಿದೆ.

ತಮ್ಮ ಪೂಜ್ಯ ತಂದೆ- ತಾಯಿಗಳಿಗೆ ಈ ಕೃತಿಯನ್ನು ಅರ್ಪಿಸಿರುವ ಲೇಖಕರು, ಪ್ರಾರಂಭದಲ್ಲಿ ರಥಾರೂಢರಾಗಿರುವ ಶ್ರೀ ಕೃಷ್ಣಾರ್ಜುನರ ಚಿತ್ರವನ್ನು ನೀಡಿದ್ದು, ಅಂದು ಕುರುಕ್ಷೇತ್ರ ಯುದ್ಧದ ಪ್ರಾರಂಭದ ದಿನವೇ ಕರ್ತವ್ಯದಿಂದ ವಿಮುಖನಾದ ಅರ್ಜುನನನ್ನು ಸಾರಥಿಯಾಗಿದ್ದ ಶ್ರೀ ಕೃಷ್ಣ ಒಬ್ಬ ಶ್ರೇಷ್ಠ ನಾಯಕನಾಗಿ ಹಾಗೂ ಯುದ್ಧದಲ್ಲಿ ಜಯಶಾಲಿಯಾಗುವಂತೆ ಮಾಡಲು ತಾಯಿಯಂತೆ ಪೊರೆದ — ಎಂಬುದನ್ನು ಜ್ಞಾಪಿಸುವಂತಿದೆ. ಅನೇಕ ಜ್ಞಾನಿಗಳು, ವಾಗ್ಮಿಗಳು, ಆಧ್ಯಾತ್ಮಿಕ ಚಿಂತಕರು ಹೇಳುವಂತೆ, ‘ಭಗವದ್ಗೀತೆ ‘ ಎಂಬುದು ‘ವ್ಯಕ್ತಿತ್ವ ನಿರ್ಮಾಣ ಮಾಡುವ’ ‘ (Personality development) ಪ್ರಪ್ರಥಮ ಕೃತಿಯಾಗಿದೆ ಹಾಗೂ ಶ್ರೀ ಕೃಷ್ಣ ಒಬ್ಬ ಸಮರ್ಥ ನಾಯಕ ಹಾಗೂ ವ್ಯಕ್ತಿತ್ವ ನಿರ್ಮಾಣ ಮಾಡಿದ ಪ್ರಥಮ ಮಾರ್ಗದರ್ಶಕನೂ ಹೌದು…. ಎಂಬ ಮಾತುಗಳು ನಿಜವೆನಿಸುತ್ತದೆ.
“Most creative person is one, who has many options to perform” -ಎಂಬ ಮಾತು ಶ್ರೀ ಕೃಷ್ಣನ ಶ್ರೇಷ್ಠ ನಾಯಕತ್ವ ಗುಣವನ್ನು ಕುರಿತೇ ಹೇಳಿದ ಮಾತುಗಳಾಗಿವೆ. ಇದಕ್ಕೊಂದು ಉದಾಹರಣೆ ನೀಡಬಹುದಾದರೆ, ” ಶ್ರೀ ಕೃಷ್ಣನು ಪಾಂಡವರ ಇಚ್ಚೆಯಂತೆ ಕೌರವರ ಬಳಿ ರಾಜೀ ಸಂಧಾನಕ್ಕೆ ಹೊರಡಲು ಸಿದ್ದನಾಗುತ್ತಾನೆ. ತನ್ನ ಸಾರಥಿಯನ್ನು ಕರೆದು ನನ್ನ ರಥದಲ್ಲಿ ಆಯುಧ, ಬಿಲ್ಲು, ಬಾಣ, ಗದೆ, ಚಕ್ರ, ಶಸ್ತ್ರ…..ಗಳೆಲ್ಲವನ್ನು ಇಟ್ಟುಕೋ . ಏಕೆಂದರೆ ಕೌರವರು ಹೇಗೆ ನಡೆದುಕೊಳ್ಳುವರೋ ತಿಳಿಯದು. ಯುದ್ಧಕ್ಕೂ ಬರಬಹುದು ಅಥವ ಬಂಧಿಸಲೂಬಹುದು. ಅವರನ್ನು ನಂಬಲು ಸಾಧ್ಯವಿಲ್ಲ. ರಾಜಿಯಾದರೆ ಸಂತೋಷ. ಯುದ್ಧವಾದರೂ ಸಿದ್ದರಾಗಬೇಕು…… ” ಎಂದು ಹೇಳುವುದರ ಮೂಲಕ, Most Succesful man- ಆದವನು ಅಥವಾ ಒಬ್ಬ ಶ್ರೇಷ್ಠ ನಾಯಕನಾದವನು
‘Multiple options’ ಇಟ್ಟುಕೊಂಡಿರಬೇಕು ಎಂದು ಹೇಳುವುದರ ಮೂಲಕ ನಾಯಕನಾದವನು ಹೇಗಿರಬೇಕು ಎಂಬುದನ್ನು ವಿವರಿಸುವಂತಿದ್ದು, ಇದೇ ರೀತಿ ನಮ್ಮ ನಿತ್ಯದ ಲೌಕಿಕ ಜೀವನದಲ್ಲೂ ನಾಯಕರಾದವರು ತಮ್ಮ ತಮ್ಮ ತಂಡದ ಯಶಸ್ವಿಗಾಗಿ ಪ್ರಾಮಾಣಿಕವಾಗಿ ದುಡಿಯಬೇಕು ಎನ್ನುವಂತಿದೆ.
ಈ ಕೃತಿಯಲ್ಲಿರುವ 32 ಲೇಖನಗಳಿದ್ದು ಯಶಸ್ವಿ ನಾಯಕನೊಬ್ಬ ಬೆಳೆಸಿಕೊಳ್ಳಬೇಕಾದ 32 ಗುಣಗಳೇ ಆಗಿದ್ದು, ಪ್ರತಿಯೊಂದು ಲೇಖನವು ಮೂರು ಭಾಗಗಳನ್ನು ಹೊಂದಿದೆ. ಮೊದಲ ಭಾಗದಲ್ಲಿ ನಾಯಕನೊಬ್ಬ ಬೆಳೆಸಿಕೊಳ್ಳಬೇಕಾದ ನಿರ್ದಿಷ್ಟ ಗುಣದ ಬಗ್ಗೆ ಲೇಖಕರು ಚಿಂತಿಸಿ ಬರೆದಿರುವ ವಿಚಾರಗಳು ಕಂಡು ಬಂದರೆ, ಎರಡನೆಯ ಭಾಗದಲ್ಲಿ ಇದನ್ನು ಸಮರ್ಥಿಸುವ ಒಂದು ಸುಂದರವಾದ ಹಾಗು ರಂಜನೀಯ ಕಥೆ ಇದ್ದು, ಓದುಗರಿಗುಂಟಾಗುವ ಏಕತಾನತೆಯಿಂದ ದೂರ ಮಾಡುತ್ತವೆ. ‘ಉಪಸಂಹಾರ’ದಲ್ಲಿ ನಾಯಕತ್ವದ ಒಂದು ನಿರ್ದಿಷ್ಟ ಗುಣವನ್ನು ಕಥೆಯಿಂದ ತಿಳಿದು ಬಂದ ನೀತಿಯೊಂದಿಗೆ ಸಮನ್ವಯಗೊಳಿಸಿ ನಾಯಕತ್ವ ಗುಣಗಳನ್ನು ಹೇಗೆ ಬೆಳೆಸಿಕೊಳ್ಳಬಹುದೆಂದು …. ತುಂಬಾ ಚೆನ್ನಾಗಿ ವಿವರಿಸಿದ್ದಾರೆ.
ಚಿಂತನಾರ್ಹ ವಿಚಾರಗಳು ನೇರವಾಗಿ ‘ಮಿದುಳ’ನ್ನು (Brain) ಮುಟ್ಟುವುದರಿಂದ ಸಹಜವಾಗಿ ಸ್ವಲ್ಪ ಮಟ್ಟಿನ ಬೇಸರ, ಶುಷ್ಕತೆ, ಏಕತಾನತೆ ಉಂಟಾಗುವುದರಿಂದ, ಅದನ್ನೇ ಒಂದು ಸುಂದರ ಕಥೆಯ ಮೂಲಕ ಹೇಳುವ ಪರಿಪಾಠ ಬಹಳ ಹಿಂದಿನಿಂದಲೂ (ದುರ್ಗಸಿಂಹನ ಪಂಚತಂತ್ರ ಕಥೆಗಳು ) ಬಂದಿದೆ.
ಕಥೆಗಳಂತಹ ರಂಜನೀಯ ವಿಚಾರಗಳು ಮೊದಲು ಹೃದಯವನ್ನು ಮುಟ್ಟಿ ನಂತರ ಮಿದುಳಿನ ಕಡೆ ಸಾಗುವುದರಿಂದ ಬಹಳ ಕಾಲ ಮನಸ್ಸಿನಲ್ಲಿ ಉಳಿದುಬಿಡುತ್ತವೆ. ಇದೇ ತತ್ವ ಇಲ್ಲಿಯ ಲೇಖನಗಳಲ್ಲಿದ್ದು ಲೇಖಕರು ಪ್ರತಿ ಲೇಖನಕ್ಕೂ ಒಂದು ಸುಂದರವಾದ ಚಿತ್ರದೊಡನೆ ರಂಜನೀಯವೆನಿಸುವ ಅರ್ಥಪೂರ್ಣ ಕಥೆಯನ್ನು ನೀಡಿದ್ದು ಲೇಖಕರ ಪರಿಶ್ರಮವನ್ನು ಮೆಚ್ಚಲೇಬೇಕೆನಿಸುತ್ತದೆ. ಈ ಮೂಲಕವೂ ಲೇಖಕರು ಒಬ್ಬ ಶ್ರೇಷ್ಠ ನಾಯಕರಾಗಿ ಕಾಣುತ್ತಾರೆ.
- ಯಶಸ್ವಿ ನಾಯಕನಾದವನು ಬೆಳೆಸಿಕೊಳ್ಳಲೇ ಬೇಕಾದ ಒಂದು ಪ್ರಮುಖ ಗುಣವೆಂದರೆ ಆತನಿಗೆ ‘ಆತ್ಮವಿಶ್ವಾಸ ಹಾಗೂ ದೃಢ ನಿರ್ಧಾರ ವಿರಬೇಕಲ್ಲದೆ – ಸ್ವ ಸಾಮರ್ಥ್ಯ ಬಗ್ಗೆ ಅನಗತ್ಯವಾಗಿ ಅನುಮಾನ ಪಡುತ್ತಾ ತನ್ನ ಬಗ್ಗೆ ತಾನೇ ಅನುಭವಿಸುವ ‘ಕೀಳರಿಮೆ’ ಯನ್ನು ಮೊದಲು ಕಿತ್ತೊಗೆಯಬೇಕು ಎನ್ನುವ ಲೇಖಕರು, ಇದನ್ನು ರಾಮಾಯಣದಲ್ಲಿ ಬರುವ ಒಂದು ಪ್ರಸಂಗವನ್ನು ತುಂಬಾ ಸುಂದರವಾಗಿ ಕಟ್ಟಿಕೊಡುತ್ತಾರೆ.
” ರಾವಣ ಸೀತಾಮಾತೆಯನ್ನು ಅಪಹರಿಸಿ ಸಮುದ್ರದಾಚೆ ಇರುವ ಲಂಕಾ ರಾಜ್ಯದಲ್ಲಿ ಬಂಧಿಸಿಟ್ಟಿರುತ್ತಾನೆ. ಆಗ ಸಮುದ್ರದ ಮೇಲೆ ಹಾರಿ ಹೋಗುವ ಸಾಮರ್ಥ್ಯವಿದ್ದದ್ದು ಆಂಜನೇಯನಿಗೆ ಮಾತ್ರ. ಆತನಿಗೆ ತನ್ನ ದೇಹದ ಗಾತ್ರದಲ್ಲಿ ಕುಗ್ಗಿಸಿಕೊಳ್ಳುವ (ಲಘಿಮಾ ) ಹಾಗೂ ನೂರಕ್ಕೂ ಹೆಚ್ಚು ಪಟ್ಟು ಹಿಗ್ಗಿಸಿಕೊಳ್ಳುವ (ಗರಿಮಾ ) ಶಕ್ತಿಗಳಿದ್ದರೂ ಬೇರೆಯವರು ತಿಳಿಸಿ ಹೇಳಿದರೆ ಮಾತ್ರ ಆತನಿಗೆ ತನ್ನ ಸ್ವ ಸಾಮರ್ಥ್ಯದ ಅರಿವು ಉಂಟಾಗುವ ದೋಷವಿರುತ್ತದೆ. ಸಮುದ್ರದ ಮುಂದೆ ನಿಂತ ಹನುಮನಿಗೆ ಸಮುದ್ರ ದಾಟುವ ಬಗ್ಗೆ ಅನುಮಾನ ಹಾಗೂ ಕೀಳಿರಿಮೆ ಕಾಡುತ್ತದೆ. ಈ ದೋಷವನ್ನು ಅರಿತಿದ್ದ ಶ್ರೀರಾಮನ ಗೆಳೆಯ ‘ಜಾಂಬವಂತ’ ಸಕಾಲದಲ್ಲಿ ಬಂದು ಹನುಮಂತನಗಿದ್ದ ಶಕ್ತಿ ಸಾಮರ್ಥ್ಯವನ್ನು ಕುರಿತು ಸ್ತುತಿಸುತ್ತಾನೆ. ಈ ಉತ್ತೇಜನದ ಮಾತುಗಳನ್ನು ಕೇಳಿದ ಹನುಮಂತ ತನ್ನ ದೇಹದ ಗಾತ್ರವನ್ನು ಹೆಚ್ಚಾಗಿ ಬೆಳೆಸಿಕೊಂಡು ಲಂಕಾ ತಲುಪುತ್ತಾನೆ. ತನ್ನ ಕಾರ್ಯದಲ್ಲಿ ಯಶಸ್ವಿಯಾಗುತ್ತಾನೆ.
‘ಉಪ ಸಂಹಾರ’ದ ಮೂಲಕ ಲೇಖಕರು, ಹನುಮಂತನಿಗೆ ಅಗಾಧ ಸಾಮರ್ಥ್ಯವಿದ್ದರೂ ಅದರ ಅರಿವಿಲ್ಲದ ಸ್ಥಿತಿಯಲ್ಲಿದ್ದಾಗ ಜಾಂಬವಂತ ನಂತಹ ಗೆಳೆಯ ಆತನನ್ನು ಉತ್ತೇಜಿಸಿದಂತೆ, ನಮ್ಮ ನಮ್ಮ ವೃತ್ತಿ ಜೀವನದಲ್ಲಿ ನಮ್ಮನ್ನು ಉತ್ತೇಜಿಸಲು ಉತ್ತಮ ಮಾರ್ಗದರ್ಶಕರ ಅವಶ್ಯಕತೆ ಇರುತ್ತದೆ. ಹೊಸ ಜವಾಬ್ದಾರಿಯ ಹೊರುವ ಮುನ್ನ ಉತ್ತಮ ಸ್ನೇಹಿತರ ಅಥವ ಯಶಸ್ವಿ ನಾಯಕರಾಗಿರುವವರ ಸಲಹೆ, ಅಭಿಪ್ರಾಯ ಪಡೆದು ಸೋಲಿನ ಭೀತಿಯಿಂದ ಹೊರ ಬರಬಹುದು. ಇಂತಹ ನಾಯಕರು ಮಾತ್ರ ತಮ್ಮ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ.
- ‘ವ್ಯಕ್ತಿಗತ ಕೌಶಲಗಳು ‘ ( Interpersonal skills)- ಎಂಬ ಲೇಖನದ ಮೂಲಕ ನಾಯಕನಾಗ ಬಯಸುವವರು ಬೆಳೆಸಿಕೊಳ್ಳಲೇ ಬೇಕಾದ ‘ಸಂವಹನಾ ಕಲೆ’ (Communication skills) ಮತ್ತು ಜನರೊಂದಿಗಿನ ಉತ್ತಮ ನಡವಳಿಕೆಗಳು ಬಹಳ ಮುಖ್ಯವಾದ ಗುಣಗಳಾಗಿವೆ ಎನ್ನುತ್ತಾರೆ. ನಾಯಕನಾದವನು ತನ್ನ ತಂಡಕ್ಕೆ ಹೇಳಬೇಕಾದ ವಿಷಯಗಳ ಬಗ್ಗೆ ಯಾವುದೇ ಅನುಮಾನವಿಲ್ಲದಂತೆ ಸ್ಪಷ್ಟವಾಗಿ ತಿಳಿದಿರಬೇಕು, ಅದನ್ನು ಸರಳ ಪದಗಳಲ್ಲಿ ವಿವರಿಸಬೇಕಲ್ಲದೆ ತನ್ನ ತಂಡದ ಪ್ರತಿಯೊಬ್ಬ ರೊಡನೆಯೂ ಉತ್ತಮ ಬಾಂಧವ್ಯವನ್ನು ಹೊಂದಿದಾಗ ಮಾತ್ರ ಆತ ಸಮರ್ಥನಾಯಕ ನಾಗಬಲ್ಲ ಎನ್ನುತ್ತಾರೆ. ಇದನ್ನೇ ಒಂದು ಸುಂದರ ಕಥೆ ಹೀಗೆ ವಿವರಿಸುತ್ತದೆ.
“ಒಂದು ಕಾಡಿನಲ್ಲಿ ರಾಜನಾಗಿ ಸಿಂಹ ಆಳುತ್ತಿತ್ತು. ತುಂಬಾ ಗಂಭೀರ ವದನದ ಸಿಂಹದ ಆಡಳಿತ ಚೆನ್ನಾಗಿಯೇ ನಡೆಯುತ್ತಿತ್ತು. ಸಿಂಹವನ್ನು ಕಂಡರೆ ಎಲ್ಲ ಇತರ ಪ್ರಾಣಿಗಳು ಗೌರವದಿಂದ ನಡೆದುಕೊಳ್ಳುತ್ತಿದ್ದವು. ಸ್ವಲ್ಪ ಕಾಲಾನಂತರ ಕೆಲವು ಪ್ರಾಣಿಗಳಿಗೆ ನೀರಸ ವೆನಿಸಿ ತಾವೇಕೆ ಇತರರು ಹೇಳಿದಂತೆ ಕಾರ್ಯನಿರ್ವಹಿಸಬೇಕೆನಿಸಿದ್ದಲ್ಲದೆ, ಸ್ವತಂತ್ರವಾಗಿ ಬದುಕುವ ಇಚ್ಛೆ ವ್ಯಕ್ತಪಡಿಸಿದಾಗ, ತಕ್ಷಣವೇ ಸಿಂಹರಾಜ ಎಲ್ಲ ಪ್ರಾಣಿಗಳ ಸಭೆ ಕರೆದು, ಅವುಗಳಲ್ಲಿ ತುಂಬಾ ಅಸಂತುಷ್ಟವಾಗಿದ್ದ ಕೋತಿಗಳಿಗೆ ಮಾತನಾಡಲು ಅವಕಾಶ ನೀಡಿ, ಅವುಗಳ ಅಭಿಪ್ರಾಯ ತಿಳಿದುಕೊಳ್ಳುತ್ತದೆ. ಈ ಮೊದಲೇ ಉತ್ತಮ ಸ೦ವಹನಕಲೆ ಯನ್ನು ಮೈಗೂಡಿಸಿಕೊಂಡಿದ್ದ ಸಿಂಹ ತನ್ನ ಎಂದಿನ ಗಂಭೀರ ವದನದಿಂದ, ಮುಂದೆ ಕಾಡಿಗೆ ಬರಬಹುದಾದ ಅನೇಕ ತೊಂದರೆಗಳ ಬಗ್ಗೆ ಅದರಲ್ಲೂ ಮಾನವರಿಂದಾಗ ಬಹುದಾದ ಎಲ್ಲ ತೊಂದರೆಗಳನ್ನು ಮನಃ ಮುಟ್ಟುವಂತೆ ವಿವರಿಸುವುದರ ಮೂಲಕ ಬುದ್ಧಿವಾದ ಹೇಳುತ್ತದೆ. ತಮಗೆ ಉತ್ತಮ ಮಾರ್ಗದರ್ಶನ ಮಾಡಿದ ಸಿಂಹರಾಜನಿಗೆ ವಂದಿಸಿ ಪ್ರಾಣಿಗಳು ಅಲ್ಲಿಂದ ತೆರಳುತ್ತವೆ. ಹೀಗೆ ನಾಯಕನಾದವನು ಉತ್ತಮ ಸಂವಹನಾ ಕೌಶಲ್ಯ ಬೆಳೆಸಿಕೊಳ್ಳಬೇಕಲ್ಲದೆ, ಕಪಟವಿಲ್ಲದ ನೇರ ನುಡಿ, ಪ್ರಾಮಾಣಿಕತೆ ಸ್ಪಷ್ಟವಾಗಿ ಹಾಗೂ ಉತ್ತಮವಾಗಿ ಮಾತನಾಡುವ ಕಲೆಯನ್ನಲ್ಲದೆ ತಂಡದ ಸದಸ್ಯರೊಡನೆ ಸ್ನೇಹ ಭಾವ ತೋರಬೇಕು ಎಂಬುದನ್ನು ಚೆನ್ನಾಗಿ ವಿವರಿಸುತ್ತಾರೆ. ಸಂತಸ ಹಾಗೂ ಉತ್ಸಾಹ ತುಂಬಿದ ನಿಮ್ಮ ತಂಡವು ನಿಮ್ಮ ಆಸ್ತಿ- ಎಂದು ಹೇಳುವುದನ್ನು ಮರೆಯುವುದಿಲ್ಲ.
ಮುಂದೆ, ಮಾನವನಲ್ಲಿರುವ ‘ಅಷ್ಟಮದ ‘ಗಳಲ್ಲೊಂದಾದ ‘ಅಧಿಕಾರದ ಅಮಲು ‘ ಇರಬಾರದೆಂದು ಹೇಳುತ್ತಾ, ನೈತಿಕತೆ, ಭಾವನಾತ್ಮಕ ಸಮತೋಲನ, ಹೊಗಳು ಪ್ರಿಯನಾಗದಿರಿ, ದೈಹಿಕ ಮತ್ತು ಮಾನಸಿಕ ಆರೋಗ್ಯ, ಸ್ವಪ್ರತಿಷ್ಠೆ ಮತ್ತು ಸ್ವಾರ್ಥ ಬಿಡಿ, ಸ್ವಸಾಮರ್ಥ್ಯದ ಅರಿವು, ಸರ್ವಾಂಗೀಣ ಬುದ್ಧಿಮತ್ತೆ, ವಾಚಾಳಿತನ ಸಲ್ಲದು, ನಿರಂತರ ಅಧ್ಯಯನ ಮತ್ತು ಸಿದ್ಧತೆ, ನೈಜ ಪ್ರತಿಭೆಯನ್ನು ಗುರುತಿಸುವ ಕಲೆ ಹಾಗು ನಿಮ್ಮ ಸೀಮಿತ ಅರಿವಿನ ಸುರಕ್ಷಾ ವಲಯದಿಂದ ಹೊರಬನ್ನಿ …. ನಂತಹ ಲೇಖನಗಳು ಇಲ್ಲಿದ್ದು, ಈ ಎಲ್ಲ ಲೇಖನಗಳು ಶ್ರೇಷ್ಠ ನಾಯಕನನ್ನು ರೂಪಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುವಂತಿವೆ.
Responsibility builds the leader.Leader builds the nation – ಎಂಬ ಮಾತಿದ್ದು ಒಂದು ಉದ್ದಿಮೆ – ಸಂಸ್ಥೆ – ಕಾರ್ಪೋರೇಟ್ – ಗಳಂತಹ ಜವಾಬ್ದಾರಿಯುತ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಯಕತ್ವವನ್ನು ರೂಪಿಸಿಕೊಳ್ಳ ಬೇಕೆನ್ನುವವರಿಗೆ ಮತ್ತು ಈಗಾಗಲೇ ಅನೇಕ ನಾಯಕತ್ವದ ಹುದ್ದೆಗಳಲ್ಲಿದ್ದು ಆಡಳಿತ ನಡೆಸಿ ಮುಂದೆ ಶ್ರೇಷ್ಠ ನಾಯಕತ್ವವನ್ನು ರೂಪಿಸಿಕೊಳ್ಳಲು ಬಯಸುವವರೆಗೂ ಸಹ ಈ ಕೃತಿ ತುಂಬಾ ಉಪಯುಕ್ತವಾಗುವಂತಿದೆ.
ಮ್ಯಾನೇಜ್ಮೆಂಟ್ ಕೌಶಲ್ಯಗಳನ್ನು ಕನ್ನಡದಲ್ಲಿ ಸರಳವಾಗಿ ವಿವರಿಸಿರುವ ಈ ವಿಶಿಷ್ಟ ಕೃತಿ ಎಲ್ಲರ ಮನ:ದಲ್ಲಿ ಹಾಗೂ ಮನೆಯ ಕಪಾಟಿನಲ್ಲಿರ ಬೇಕಾದ ಕೃತಿ ಎನಿಸಿತು.
ನೀವೂ ಓದಿ……
ಕೃತಿ: ನಿಮ್ಮ ನಾಯಕತ್ವಕ್ಕೆ ನೀವೇ ಶಿಲ್ಪಿ.(ನಾಯಕತ್ವದ ಯಶಸ್ಸಿನ ಸೂತ್ರಗಳ ಕೈಪಿಡಿ)
ಲೇಖಕರು: ಕರ್ನಲ್ ಡಾ. ಎಸ್. ಎನ್. ಶ್ರೀಧರ
ಪುಟಗಳು :144
ಬೆಲೆ:₹ 150/-
ಪ್ರಥಮ ಮುದ್ರಣ: 2025
ಪ್ರಕಾಶಕರು: ಎಚ್.ಎಸ್.ಆರ್.ಎ. ಪ್ರಕಾಶನ, ಬೆಂಗಳೂರು.
ಪ್ರತಿಗಳಿಗಾಗಿ ಸಂಪರ್ಕಿಸಿ:94485 07428

