ಕಲಬುರಗಿ: ಮಾಜಿ ಸಚಿವ, 371ಜೆ ವಿಧಿ ತಿದ್ದುಪಡಿ ಜಾರಿ ಹೋರಾಟಗಾರ ವೈಜನಾಥ ಪಾಟೀಲ್ ಇನ್ನಿಲ್ಲ.ಅವರಿಗೆ 82 ವರ್ಷ ವಯಸ್ಸಾಗಿತ್ತು.
ಅನಾರೋಗ್ಯ ದಿಂದ ಬಳಲುತ್ತಿದ್ದ ಪಾಟೀಲ್ ಅವರು ಇಂದು ಬೆಳಿಗ್ಗೆ ೬ ಗಂಟೆ ಸುಮಾರಿಗೆ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದರು.
ರಾಮಕೃಷ್ಣ ಹೆಗಡೆ ಸಂಪುಟದಲ್ಲಿ 1984ರಲ್ಲಿ ತೋಟಗಾರಿಕೆ ಹಾಗೂ ಎಚ್. ಡಿ. ದೇವೆಗೌಡ ಸಂಪುಟದಲ್ಲಿ 1994ರಲ್ಲಿ ನಗರಾಭಿವೃದ್ಧಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
ಹೈದರಾಬಾದ್ ಕರ್ನಾಟಕ ಈಗಿನ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಗೆ ಪಾಟೀಲ್ ರ ಮನಸ್ಸು ಸದಾ ಮಿಡಿಯುತ್ತಿತ್ತು. ಈ ಭಾಗದ ಅಭಿವೃದ್ಧಿ ಗಾಗಿ ವಿಶೇಷ ಸ್ಥಾನಮಾನ ಕಲ್ಪಿಸುವ 371 ಜೆ ವಿಧಿ ಜಾರಿಗೆ ಆಗ್ರಹಿಸಿ ಎರಡು ದಶಕಗಳ ಹಿಂದೆ ಧ್ವನಿ ಎತ್ತಿ ಹೋರಾಟ ರೂಪಿಸಿದವರೇ ವೈಜನಾಥ ಪಾಟೀಲ್.
371 ಜೆ ವಿಧಿ ಜಾರಿಯಲ್ಲದೇ ಕಲ್ಯಾಣ ಕರ್ನಾಟಕ ಭಾಗಕ್ಕೆ ಏನಾದರೂ ಅನ್ಯಾಯವಾದರೆ ತಕ್ಷಣ ವೇ ಸರಕಾರ ದ ಗಮನ ಸೆಳೆಯುತ್ತಿದ್ದ ವೈಜನಾಥ ಪಾಟೀಲ್ ಅವರು ತಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬಂದವರಾಗಿದ್ದಾರೆ.
ಹೋರಾಟಕ್ಕೆ ಇನ್ನೊಂದು ಹೆಸರು ವೈಜನಾಥ ಪಾಟೀಲ್ ಎಂದೇ ಹೆಸರು ಪಡೆದ ಪಾಟೀಲ್ ರನ್ನು ಕಳೆದುಕೊಂಡ ಕಲ್ಯಾಣ ಕರ್ನಾಟಕವಿಂದು ಬಡವಾಗಿದೆ.
ಎಂಎಸ್ಐಎಲ್ ಮಾಜಿ ಅಧ್ಯಕ್ಷ ಡಾ. ವಿಕ್ರಮ್ ಪಾಟೀಲ್, ಜಿಲ್ಲಾ ಪಂಚಾಯಿತಿ ಸದಸ್ಯ ಗೌತಮ ಪಾಟೀಲ್ ಸೇರಿ ಮೂವರು ಪುತ್ರರು, ಪತ್ನಿ ಹಾಗೂ ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ನಾಳೆ ರವಿವಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕಳೆದ ಸೆಪ್ಟೆಂಬರ್ 22 ರಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಮನದಾಳದ ಮಾತು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜೀವನ ಪರಿಚಯ ಹಾಗೂ ಹೋರಾಟದ ಇತಿಹಾಸ ಹೇಳಿದ್ದರು. ಆದರೆ ಜೀವನ ಇತಿಹಾಸದಿಂದ ಇಷ್ಟು ಬೇಗ ಮರೆಯಾಗುತ್ತಾರೆಂದು ಯಾರೂ ಊಹಿಸಿರಲಿಲ್ಲ
rip