ಅರವತ್ತಾರನೇ ಅಖಿಲ ಭಾರತ ಸಹಕಾರ ಸಹಕಾರ ಸಪ್ತಾಹ-2019 ರಾಜ್ಯಮಟ್ಟದ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭಕ್ಕೆ ತುಮಕೂರು ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಗುರುವಾರ ನಡೆಯಲಿದ್ದು, ಬೃಹತ್ ವೇದಿಕೆ ನಿರ್ಮಾಣಗೊಂಡಿದೆ.
ಮೈದಾನದಲ್ಲಿ ಬೃಹತ್ ಪೆಂಡಾಲ್ ಹಾಕಿದ್ದು ಜನರು ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಿದೆ. ಮಧ್ಯಾಹ್ನ 12 ಗಂಟೆಗೆ ಸಮಾರಂಭ ವಿದ್ಯುಕ್ತವಾಗಿ ಉದ್ಘಾಟನೆಗೊಳ್ಳಲಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಹಕಾರ ಸಪ್ತಾಹ-2019ರ ಸಮಾರಂಭವನ್ನು ಉದ್ಘಾಟಿಸಲಿದ್ದು, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಸಮಾರಂಭದ ಆದ್ಯಕ್ಷತೆ ವಹಿಸುವರು.
ಸಮಾರಂಭದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಸಚಿವ ವಿ.ಸೋಮಣ್ಣ ಸೇರಿದಂತೆ ಹಲವು ಗಣ್ಯರು ಭಾಗವಹಿಸುವರು.
ಇವರ ಜೊತೆಗೆ ತುಮಕೂರು ಸಂಸದ ಜಿ.ಎಸ್.ಬಸವರಾಜು, ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್, ಚಿತ್ರದುರ್ಗದ ಸಂಸದ ಎ.ನಾರಾಯಣ ಸ್ವಾಮಿ, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಆಗಮಿಸುವರು.
ಮಾಜಿ ಶಾಸಕ ಸುರೇಶ್ ಗೌಡ, ತುಮಕೂರು ನಗರ ಶಾಸಕ ಜ್ಯೋತಿಗಣೇಶ್, ತಿಪಟೂರು ಶಾಸಕ ಬಿ.ಸಿ.ನಾಗೇಶ್, ತುರುವೇಕೆರೆ ಶಾಸಕ ಮಸಾಲೆ ಜಯರಾಂ ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕೆ.ಎನ್.ರಾಜಣ್ಣ ಅವರು ಕಾರ್ಯಕ್ರಮದ ಸಿದ್ದತೆಗಳನ್ನು ವೀಕ್ಷಿಸಿದರು. ನಂತರ ಅಧಿಕಾರಿಗಳೊಂದಿಗೆ ರಾಜಣ್ಣ ಮಾತುಕತೆ ನಡೆಸಿದರು. ಇದೇ ವೇಳೆ ಪೊಲೀಸರು ಕೂಡ ವ್ಯಾಪಕ ಬಂದೋಬಸ್ತ್ ಸಂಬಂಧ ಸ್ಥಳದಲ್ಲಿ ಪರಿಶೀಲನೆ ನಡೆಸಿದರು.
ಸಹಕಾರ ಸಪ್ತಾಹ 2019ರ ಸಮಾರಂಭಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ವಾಹನಗಳಿಗೆ ನಗರದ ಅಮಾನಿಕೆರೆ ಬಳಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಗುಬ್ಬಿ, ಶಿರಾ, ಕುಣಿಗಲ್, ಕೊರಟಗೆರೆ ತಾಲ್ಲೂಕಿನಿಂದ ಕಾರ್ಯಕ್ರಮಕ್ಕೆ ಆಗಮಿಸುವ ಬಸ್ಸುಗಳು ಹಾಗೂ ಇತರೆ ವಾಹನಗಳು ಸಾರ್ವಜನಿಕರನ್ನು ಜೂನಿಯರ್ ಕಾಲೇಜು ಮೈದಾನದಲ್ಲಿ ಇಳಿಸಿ ನಂತರ ಶಂಕರಮಠ-ಎಸ್.ಎಸ್.ಸರ್ಕಲ್-ಕೋತಿತೋಪು ಮಾರ್ಗವಾಗಿ ಅಮಾನಿಕೆರೆ ಬಳಿಗೆ ಹೋಗಬೇಕು.
ಬೆಂಗಳೂರು ಮಾರ್ಗದಿಂದ ಆಗಮಿಸುವ ಬಸ್ಸುಗಳು ಸಾರ್ವಜನಿಕರನ್ನು ಶಂಕರಮಠದ ಬಳಿ ಇಳಿಸಿ ನಂತರ ಟೌನ್ಹಾಲ್-ಅಶೋಕ ರಸ್ತೆ-ಕೋಡಿ ಸರ್ಕಲ್ ಮೂಲಕ ಅಮಾನಿಕೆರೆ ಬಳಿ ಪಾರ್ಕಿಂಗ್ ಮಾಡಬೇಕು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ