ತುಮಕೂರು; ರೈತರಿಗೆ ಅನುಕೂಲವಾಗುವ ಯಶಸ್ವಿನಿ ಯೋಜನೆಯನ್ನು ಮರು ಜಾರಿಗೊಳಿಸುವ ಸಂಬಂಧ ಶೀಘ್ರವೇ ಸಚಿವ ಸಂಪುಟದ ಒಪ್ಪಿಗೆ ಪಡೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭವವಸೆ ನೀಡಿದರು.
ತುಮಕೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಅಪೆಕ್ಸ್ ಬ್ಯಾಂಕ್ ವತಿಯಿಂದ ಹಮ್ಮಿಕೊಂಡಿದ್ದ 66ನೇ ಅಖಿಲಭಾರತ ಸಹಕಾರ ಸಪ್ತಾಹದ ರಾಜ್ಯಮಟ್ಟದ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಯಶಸ್ವಿನಿ ಯೋಜನೆಯಿಂದ ಸುಮಾರು 25 ಲಕ್ಷ ರೈತರಿಗೆ ಅನುಕೂಲ ವಾಗಲಿದೆ. ಈ ವಿಷಯವನ್ನು ಮುಂದಿನ ಕ್ಯಾಬಿನೆಟ್ ಸಭೆಯ ಮುಂದೆ ತಂದು ಆದಷ್ಟು ಬೇಗ ಈ ಯೋಜನೆಯನ್ನುಜಾರಿಗೆ ತರುತ್ತೇನೆ ಎಂದು ಸಾವಿರಾಜು ಮಂದಿ ಸಭಿಕರ ಸಮ್ಮುಖದಲ್ಲಿ ಭರವಸೆಯಿತ್ತರು.
ತುಮಕೂರು ಹಾಲು ಒಕ್ಕೂಟದಲ್ಲಿ ಮೆಗಾ ಡೈರಿ ಆಗಬೇಕೆಂಬ ಬೇಡಿಕೆ ಬಂದಿದೆ. ಈ ಬೇಡಿಕೆಯನ್ನು ಆದಷ್ಟು ಬೇಗ ಈಡೇರಿಸುತ್ತೇನೆ. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನಲ್ಲಿ ತೋಟಗಾರಿಕೆ ಕಾಲೇಜು ಆರಂಭಿಸಬೇಕು. ಅದಕ್ಕಾಗಿ ಮೂರು ಎಕರೆ ಜಾಗವನ್ನು ನೀಡುವುದಾಗಿ ಜೆ.ಸಿ.ಮಾಧುಸ್ವಾಮಿ ಅವರು ಒತ್ತಾಯಿಸಿದ್ದಾರೆ. ಈ ವಿಷಯವನ್ನು ಕ್ಯಾಬಿನೆಟ್ ನಲ್ಲಿ ತಂದು ಮಂಜೂರು ಮಾಡಿಸಿಕೊಡುತ್ತೇನೆ ಎಂದಾಗ ಸಭಿಕರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು.
ಬಯಲುಸೀಮೆ ಪ್ರದೇಶವಾದ ತುಮಕೂರು ಜಿಲ್ಲೆಯ ಎಲ್ಲಾ ಕೆರೆಗಳಿಗೆ ನೀರು ಹರಿಸಲಾಗುವುದು. ನಮ್ಮ ಪ್ರಯತ್ನದ ಮೂಲಕ ರಾಜ್ಯದ ಇತರ ಕೆರೆಗಳಿಗೆ ನೀರು ತುಂಬಿಸುತ್ತೇವೆ. ಆದರೆ ನೀರಾವರಿಗೆ ನೀರನ್ನು ಕೊಡಲು ಸಾಧ್ಯವಿಲ್ಲ. ರಾಜ್ಯದ ಸಹಕಾರಿ ಬ್ಯಾಂಕುಗಳಲ್ಲಿ ಸಾಲ ಮಾಡಿರುವ ರೈತರ ಎಲ್ಲಾ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ತಿಳಿಸಿದರು.
ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಮುಖ್ಯಮಂತ್ರಿಗಳು ಪದೇ ಪದೇ ಯಡಿಯೂರು ಸಿದ್ದಲಿಂಗಸ್ವಾಮಿಯ ಸನ್ನಿಧಿಗೆ ಭೇಟಿ ನೀಡುತ್ತಿದ್ದರು. ನೀವು ಯಡಿಯೂರಿಗೆ ಬರುತ್ತೀರಿ. ಒಂದು ಸಮುದಾಯ ಭವನ ಕಟ್ಟಿಸಿಕೊಡಿ ಎಂದು ಕೇಳಿದೆ. ಕೂಡಲೇ ಅದಕ್ಕೆ ಒಪ್ಪಿ ಸ್ವಂತ ಹಣದಿಂದ ನಿರ್ಮಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಸಹಕಾರ ಸಚಿವರೂ ಆದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಸಾಕಷ್ಟು ಕೆಲಸ ಮಾಡಿದ್ದಾರೆ. ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರವನ್ನು ಬಲಿಷ್ಟವಾಗಿ ಕಟ್ಟಿದ್ದಾರೆ ಎಂದು ಶ್ಲಾಘಿಸಿದರು.
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ಪ್ರಾಸ್ತಾವಿಕ ಮಾತನಾಡಿ ಸಹಕಾರಿ ಕ್ಷೇತ್ರ ಬೆಳೆದು ಬಂದ ಬಗೆಯನ್ನು ವಿವರಿಸಿದರು. ಮುಖ್ಯಮಂತ್ರಿಗಳು ಸಹಕಾರ ಕ್ಷೇತ್ರಕ್ಕೆ ಉತ್ತಮವಾಗಿ ಸ್ಪಂದಿಸಿದ್ದಾರೆ ಎಂದರು.
ಇದೇ ವೇಳೆ ಸಹಕಾರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯರಿಗೆ ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಶಸ್ತಿ ಪ್ರದಾನ ಮಾಡಿದರು. ತುಮಕೂರು ಹಾಲು ಒಕ್ಕೂಟದಿಂದ 1 ಕೋಟಿ ರೂಪಾಯಿ ಚೆಕ್ ಅನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಯಿತು.
ಸಮಾರಂಭದಲ್ಲಿ ಸಚಿವ ವಿ.ಸೋಮಣ್ಣ, ಸಂಸದ ಜಿ.ಎಸ್.ಬಸವರಾಜು, ಮಾಜಿ ಸಂಸದ ಸಿ.ಪಿ.ಮೂಡ್ಲಗಿರಿಯಪ್ಪ, ಮಾಜಿ ಸಚಿವ ಸೊಗಡು ಶಿವಣ್ಣ, ಶಾಸಕರಾದ ಮಸಾಲಾ ಜಯರಾಂ, ಬಿ.ಸಿ.ನಾಗೇಶ್, ಜ್ಯೋತಿಗಣೇಶ್, ಮಾಜಿ ಶಾಸಕ ಬಿ.ಸುರೇಶ್ ಗೌಡ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.