ತುಮಕೂರು: ಜಾಗತೀಕರಣ ಹಾಗೂ ಖಾಸಗೀಕರಣದಿಂದ ವಾಣಿಜ್ಯಶಾಸ್ತ್ರ ಅಧ್ಯಯನಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವೈ.ಎಸ್. ಸಿದ್ದೇಗೌಡ ತಿಳಿಸಿದರು.
ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗದಿಂದ ಆಯೋಜಿಸಿದ್ದ ‘ಟೈಮ್ ವ್ಯಾಲ್ಯೂ ಆಫ್ ಮನಿ ಅಂಡ್ ಕ್ರಿಯೇಟಿಂಗ್ ವ್ಯಾಲ್ಯೂ ಫಾರ್ ಶೇರ್ಹೋಲ್ಡರ್ಸ್’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ ವಿಷಯಗಳಿಗೆ ಕೆಲವು ವರ್ಷಗಳ ಹಿಂದೆ ಅಷ್ಟೊಂದು ಮನ್ನಣೆ ಇರಲಿಲ್ಲ. ಇತ್ತೀಚಿನ ದಿನಗಳಲ್ಲಿ ಜಾಗತೀಕರಣ ಮತ್ತು ಖಾಸಗೀಕರಣದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಬದಲಾವಣೆಗಳಾಗುತ್ತಿವೆ. ಇದರಿಂದ ವಾಣಿಜ್ಯ ಶಾಸ್ತ್ರವನ್ನು ಅಧ್ಯಯನ ಮಾಡಲು ಹೆಚ್ಚು ಮಂದಿ ಆಸಕ್ತಿ ತೋರಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಕಾಮರ್ಸ್ ಇತ್ತೀಚಿನ ದಿನಗಳಲ್ಲಿ ತನ್ನ ಪ್ರಭಾವವನ್ನು ಸಹಜವಾಗಿಯೇ ವಿಸ್ತರಿಸಿಕೊಳ್ಳುತ್ತಿದೆ. ವ್ಯವಹಾರ ಮತ್ತು ನಿರ್ವಹಣೆ ಇಲ್ಲದೆ ಯಾವ ಸಂಸ್ಥೆಯೂ ಪ್ರಗತಿ ಹೊಂದುವುದು ಸಾಧ್ಯವಿಲ್ಲ. ಹೀಗಾಗಿ ಇದನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಹೇರಳ ಉದ್ಯೋಗಾವಕಾಶಗಳಿವೆ ಎಂದು ಹೇಳಿದರು.
ವಾಣಿಜ್ಯಶಾಸ್ತ್ರ ಅಧ್ಯಯನ ಮಾಡುವವರು ಕೇವಲ ಪಠ್ಯದ ಜ್ಞಾನಕ್ಕಿಂತ ಸಮಾಜದಲ್ಲಿ ನಡೆಯುವ ವಿದ್ಯಮಾನಗಳನ್ನು ಕುತೂಹಲದಿಂದ ಗಮನಿಸಿ ವ್ಯವಹಾರ ಕುಶಲತೆ ಬೆಳೆಸಿಕೊಳ್ಳಬೇಕು. ಉತ್ತಮ ನಾಯಕತ್ವ ಹಾಗೂ ಸಂವಹನ ಕಲೆ ಬೆಳೆಸಿಕೊಳ್ಳು ವವರಿಗೆ ಉದ್ಯೋಗಕ್ಷೇತ್ರದಲ್ಲಿ ಅಪಾರ ಬೇಡಿಕೆ ಇದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಬಿ.ಎನ್. ಬಹಾದುರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸೈನ್ಸ್ನ ನಿವೃತ್ತ ಪ್ರಾಧ್ಯಾಪಕ ಪ್ರೊ. ಶಿವರಾಜ್, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಜಿ. ಸುದರ್ಶನ ರೆಡ್ಡಿ, ಹಣಕಾಸು ಅಧಿಕಾರಿ ಪ್ರೊ. ಪಿ. ಪರಮಶಿವಯ್ಯ, ಎಂಬಿಎ ವಿಭಾಗದ ಪ್ರಾಧ್ಯಾಪಕಿ ಪ್ರೊ. ನೂರ್ ಅಫ್ಜಾ, ಸಂಯೋಜಕ ಡಾ. ಕೆ. ಸಿ. ಶಿವಶಂಕರ್, ಎಂಕಾಂ ಸಂಯೋಜಕ ಡಾ. ಎಸ್. ದೇವರಾಜಪ್ಪ ಉಪಸ್ಥಿತರಿದ್ದರು.