ತುಮಕೂರು; ಕುರುಬ ಸಮುದಾಯದ ಸ್ವಾಮೀಜಿಯೊಬ್ಬರ ಕುರಿತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತುಚ್ಛವಾಗಿ ಮಾತನಾಡಿರುವ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಕುರುಬ ಸಮುದಾಯದ ವ್ಯಕ್ತಿಯೊಬ್ಬರು ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಮೊಬೈಲ್ ಗೆ ಕರೆ ಮಾಡಿ ಮಾತನಾಡಿದಾಗ ತಾನು ಲಿಂಗಾಯತ ಸಮುದಾಯಕ್ಕೆ ಮಾತ್ರ ಸಚಿವ ಎಂದಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇದರಿಂದ ಆಕ್ರೋಶಗೊಂಡಿರುವ ಕುರುಬ ಸಮುದಾಯದ ಸಂಘಟನೆಗಳು ಸಚಿವರು ಬಹಿರಂಗ ಕ್ಷಮೆ ಕೇಳಬೇಕು. ಸಂವಿಧಾನಬದ್ದವಾಗಿ ಯಾವ ಭೇದವೂ ಮಾಡುವುದಿಲ್ಲವೆಂದು ಪ್ರಮಾಣ ವಚನ ಸ್ವೀಕರಿಸಿರುವ ಜೆ.ಸಿ.ಮಾಧುಸ್ವಾಮಿ ಅವರನ್ನು ಸಂಪುಟದಿಂದ ಕೂಡಲೇ ವಜಾ ಮಾಡಬೇಕೆಂದು ಹಾಲುಮತ ಮಹಾಸಭಾ ತುಮಕೂರು ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರನ್ನು ಒತ್ತಾಯಿಸಿದೆ.
ಕಾನೂನು ಸಚಿವರಾಗಿಯೂ ಹೀಗೆ ಸಾಮಾನ್ಯರಂತೆ ಮಾತನಾಡಿರುವುದು ಮತ್ತು ತಾನು ಲಿಂಗಾಯತರಿಗೆ ಮಾತ್ರ ಮಂತ್ರಿ ಎಂದು ಹೇಳಿರುವುದು ಸೂಕ್ತವಲ್ಲ. ಸಚಿವರು ಹೀಗೆ ವರ್ತಿಸುವ ಮೂಲಕ ತಾನು ತೆಗೆದುಕೊಂಡ ಪ್ರಮಾಣ ವಚನವನ್ನು ಉಲ್ಲಂಘಿಸಿದ್ದಾರೆ ಎಂದು ಹಾಲುಮತ ಮಹಾಸಭಾದ ಜಿಲ್ಲಾಧ್ಯಕ್ಷ ಟಿ.ಎಂ. ಗರುಡಯ್ಯ, ಟಿ.ಇ.ರಘುರಾಮ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಇನ್ನೊಂದೆಡೆ ಕುರುಬ ಸಮುದಾಯದ ಸ್ವಾಮೀಜಿಯ ಬಗ್ಗೆ ಹಗುರವಾಗಿ ಮಾತನಾಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜೆ.ಸಿ. ಮಾಧುಸ್ವಾಮಿ ಅವರನ್ನು ಕರೆಸಿಕೊಂಡು ಕಿವಿಮಾತು ಹೇಳಿದ್ದಾರೆ. ಸ್ವಾಮೀಜಿಯವರ ಬಗ್ಗೆ ಹಾಗೆಲ್ಲ ಮಾತನಾಡುವುದು ಸರಿಯಲ್ಲ ಎಂದಿದ್ದಾರೆ. ಇದಕ್ಕೆ ಜೆ.ಸಿ. ಮಾಧುಸ್ವಾಮಿ ನಾನು ಯಾವ ಸ್ವಾಮೀಜಿ ಬಗ್ಗೆಯೂ ಹಗುರವಾಗಿ ಮಾತನಾಡಿಲ್ಲ ಎಂದು ಮಾಧ್ಯಮಗಳ ಮುಂದೆ ಗರಂ ಆಗಿಯೇ ಹೇಳಿ ಹೊರಟು ಹೋಗಿದ್ದಾರೆ.