ತುಮಕೂರು; ವಿವಿಧೋದ್ದೇಶ ಮತ್ತು ಗ್ರಾಮೀಣ ಪುನರ್ ವಸತಿ ಕಾರ್ಯಕರ್ತರಿಗೆ ಸಾಮಾಜಿಕ ಭದ್ರತೆ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಠಕ ರಾಜ್ಯ ವಿಕಲಚೇನತರ ಹಾಗೂ ವಿವಿಧೋದ್ದೇಶ ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಒಕ್ಕೂಟದ ನೇತೃತ್ವದಲ್ಲಿ ವಿಕಲ ಚೇತನರು ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುತ್ತಿರುವ ಶೇಕಡ 75ರಷ್ಟು ಜನರ ಪೈಕಿ ಶೇ. 6ರಷ್ಟು ವಿಕಲಚೇತನರು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಅವರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ವೈದ್ಯಕೀಯ ಪುನರ್ವಸತಗಾಗಿ 2006-07ರಲ್ಲಿ ಗ್ರಾಮೀಣ ಪುನರ್ವಸತಿ ಯೋಜನೆಯನ್ನು ಜಾರಿಗೆ ತರಲಾಗಿತ್ತು.
ಪದವೀಧರ ವಿಕಲಚೇತನರನ್ನು ಎಂ.ಆರ್.ಡಬ್ಲ್ಯೂ ತಾಲೂಕು ಪಂಚಾಯಿತಿಗೆ, ಎಸ್.ಎಲ್.ಸಿ. ಉತ್ತೀರ್ಣರಾದ ವಿಕಲಚೇತನರನ್ನು ವಿಆರ್.ಡಬ್ಲ್ಯೂಗಳಾಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಗೌರವಧನದ ಆಧಾರದ ಮೇಲೆ ನೇಮಕ ಮಾಡಿತ್ತು. ಇವರಿಗೆ ಉದ್ಯೋಗ ಭದ್ರತೆ ಇರುವುದಿಲ್ಲ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.
ಈ ಯೋಜನೆಯಡಿ 11 ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಬಹುಜನಸಂಖ್ಯೆಯ ಪುನರ್ವಸತಿ ಜವಾಬ್ದಾರಿಯನ್ನು ತಾಲೂಕು ಮತ್ತು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ನಾವೇ ನಿರ್ವಹಿಸುತ್ತಿದ್ದೇವೆ. ಸ್ಥಳೀಯ ಇಲಾಖೆಯ ಸಿಬ್ಬಂದಿ ಇಲ್ಲದೆ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ನಮ್ಮನ್ನು ಎಂಆರ್.ಡಬ್ಲ್ಯೂವನ್ನು ತಾಲೂಕು ಕಲ್ಯಾಣಾಧಿಕಾರಿಗಳಾಗಿ, ವಿ.ಆರ್.ಡಬ್ಲ್ಯೂ ಆರ್.ಡಬ್ಲ್ಯೂ ವಿಕಲಚೇತನ ಅಭಿವೃದ್ಧಿ ಸಹಾಯೇತರರನ್ನಾಗಿ ಹುದ್ದೆಗಳನ್ನು ಸೃಜಿಸಿ ಖಾಯಂಗೊಳಿಸಬೆಕು ಎಂದು ಆಗ್ರಹಿಸಿದರು.