ತುಮಕುರು; ರಾಜ್ಯದಲ್ಲಿ ಹಮಾಲಿ ಕಾರ್ಮಿಕರು, ಬೀದಿಬದಿ ಮಾರಾಟಗಾರರು, ಮನೆಗೆಲಸ ಕಾರ್ಮಿಕರು ಆಟೋ, ಟ್ಯಾಕ್ಸಿ, ಖಾಸಗಿವಾಹನ ಚಾಲಕರು, ನಿರ್ವಾಹಕರು, ಟೈಲರ್‍ಗಳು ಹಾಗೂ ದ್ವಿಚಕ್ರವಾಹನ ಮೆಕಾನಿಕ್‍ಗಳಿಗೆ ಕಾರ್ಮಿಕ ಇಲಾಖೆ ರೂಪಿಸಿರುವ ಭವಿಷ್ಯನಿಧಿ ಯೋಜನೆಯನ್ನು ಕೂಡಲೇ ಜಾರಿಗೊಳಿಸಬೇಕು. 2020 ಬಜೆಟ್‍ನಲ್ಲಿ ಕನಿಷ್ಟ 500 ಕೋಟಿ ಅನುದಾನ ಘೋಷಿಸಬೇಕು ಎಂದು ಆಗ್ರಹಿಸಿ ಡಿಸೆಂಬರ್ 12 ರಂದು ಬೆಂಗಳೂರಿನಲ್ಲಿ ಬೃಹತ್ ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಮಹಾಂತೇಶ್ ತಿಳಿಸಿದರು.
ತುಮಕೂರಿನ ಗಾಂಧೀನಗರದಲ್ಲಿರುವ ಜನಚಳವಳಿ ಕೇಂದ್ರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಸುಮಾರು ಮೂರು ಕೋಟಿಯಷ್ಟಿರುವ ಕಾರ್ಮಿಕರು ಕನಿಷ್ಟ ವೇತನ, ಪಿಂಚಣಿ ಸೇರಿದಂತೆ ಯಾವೊಂದು ಸಾಮಾಜಿಕ ಭದ್ರತೆ ಇಲ್ಲದೆ ಅಸಂಘಟಿತ ವಲಯದಲ್ಲಿ ದುಡಿಯುತ್ತಿದ್ದಾರೆ. ರಾಜ್ಯದ ಬೊಕ್ಕಸಕ್ಕೆ ಅಸಂಘಟಿತ ವಲಯದ ಕೊಡುಗೆ ಶೇ 60 ಕ್ಕಿಂತ ಅಧಿಕವಿದೆ. ಹೀಗಿದ್ದರೂ ಅವರಿಗೆ ಯಾವುದೇ ಸೌಲಭ್ಯಗಳನ್ನು ನೀಡಲ್ಲ ಎಂದು ಹೇಳಿದರು.
ರಾಜ್ಯದ ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ರಕ್ಷಣೆ ಒದಗಿಸುವ ಸಲುವಾಗಿ 2009 ರಲ್ಲಿ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕ ಸಾಮಾಜಿಕ ಭದ್ರತಾ ಮಂಡಳಿ ರಚನೆಯಾಗಿದೆ. ಆರಂಭದಲ್ಲಿ ಕೇಂದ್ರದ ಸಾಮಾಜಿಕ ಭದ್ರತಾ ಮಂಡಳಿ ರೂಪಿಸಿದ ಯೋಜನೆಗಳ ಅನ್ವಯ ಮಕ್ಕಳಿಗೆ ಶಿಕ್ಷಣ, ಅಪಘಾತ ಪರಿಹಾರ, ವಸತಿ ಹಾಗೂ ಪಿಂಚಣಿ ಸೇರಿ ಹಲವು ಕಾರ್ಯಕ್ರಮಗಳನ್ನು ಅಂಗೀಕರಿಸಿದರೂ ಅನುದಾನದ ಕೊರತೆಯಿಂದ ಅವುಗಳು ಜಾರಿಯಾಗಲಿಲ್ಲ ಎಂದು ಹೇಳಿದರು.
ಹಲವು ಹೋರಾಟ ನಡೆಸಿದ ಪರಿಣಾಮ ಕಾರ್ಮಿಕ ಇಲಾಖೆ ಹಮಾಲಿ ಕಾರ್ಮಿಕರು, ಮನೆಗೆಲಸ ಮಾಡುವವರು, ಬೀದಿಬದಿ ವ್ಯಾಪಾರಿಗಳು ಹಾಗೂ ಚಿಂದಿ ಆಯುವ ಕಾರ್ಮಿಕರಿಗೆ ಆಧ್ಯತೆ ನೀಡಿ ಭವಿಷ್ಯ ನಿಧಿ ಜಾರಿಗೊಳಿಸಲು ರಾಜ್ಯ ಸರಕಾರದ ಮುಂದೆ 133 ಕೋಟಿ ರೂಗಳ ಅನುದಾನದ ಕೋರಿಕೆ ಸಲ್ಲಿಸಿತ್ತು. ಹೀಗಾಗಿ 2017 ರ ರಾಜ್ಯ ಸರಕಾರದ ಬಜೆಟ್‍ನಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಸಂಘಟಿತ ಕಾರ್ಮಿಕರಿಗಾಗಿ ಸ್ಮಾರ್ಟ್ ಕಾರ್ಡ್ ಹಾಗೂ ಭವಿಷ್ಯನಿಧಿ ಯೋಜನೆ ಘೋಷಿಸಿದರು.
ಕಾರ್ಮಿಕ ಇಲಾಖೆ ಕೋರಿಕೆಯಂತೆ ರೂ 133 ಕೋಟಿ ಬದಲು ಕೇವಲ 25 ಕೋಟಿ ಹಣಕಾಸಿನ ನೆರವನ್ನು ನೀಡಿದರು. ಆದರೆ ಈ ಹಣದಿಂದ ಕೇವಲ ಸ್ಮಾರ್ಟ್ ಕಾರ್ಡ್ ನೀಡಲು ಮಾತ್ರ ಸಾಧ್ಯವಾಯಿತು. ಭವಿಷ್ಯನಿಧಿ ಯೋಜನೆ ಅನುಷ್ಟಾನ ಮಾತ್ರ ಹಾಗೇ ಉಳಿಯಿತು. ಈಗ ಹಮಾಲಿ ಕಾರ್ಮಿಕರು ಮತ್ತು ಮನೆಕೆಲಸ ಕಾರ್ಮಿಕರಿಗೆ, ಸಾಕಷ್ಟು ಒತ್ತಡ ಹಾಗೂ ಹೋರಾಟದ ಬಳಿಕ ಡಾ.ಅಂಬೇಡ್ಕರ್ ಸಹಾಯ ಹಸ್ತ ಸ್ಮಾರ್ಟ್ ಕಾರ್ಡ್‍ಗಳನ್ನು ವಿತರಿಸಲಾಗಿದೆಯಾದರೂ ಅದರಿಂದ ಯಾವುದೇ ಸೌಲಭ್ಯಗಳಿಲ್ಲ ಎಂದರು.
ಕಾರ್ಮಿಕ ಮುಖಂಡರಾದ ಸಯ್ಯದ್ ಮುಜೀಬ್, ಎನ್.ಕೆ.ಸುಬ್ರಹ್ಮಣ್ಯ ಇದ್ದರು.