ಶಿರಾ;ಮಕ್ಕಳ ಹಕ್ಕುಗಳ ಗ್ರಾಮಸಭೆ ಎನ್ನುವ ವಿಶೇಷ ಕಾರ್ಯಕ್ರಮ ಇರುವುದು ಕರ್ನಾಟಕ ರಾಜ್ಯದಲ್ಲಿ ಮಾತ್ರ. ಇದು ಪಂಚಾಯತ್ ರಾಜ್ ಇಲಾಖೆಯಿಂದ ನಡೆಸುವ ಒಂದು ವಿನೂತನ ಕಾರ್ಯಕ್ರಮ. ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿಗಳು ನವೆಂಬರ್ ತಿಂಗಳಲ್ಲಿ ಕಡ್ಡಾಯವಾಗಿ ಮಕ್ಕಳ ಹಕ್ಕುಗಳ ಗ್ರಾಮಸಭೆ ಆಯೋಜಿಸಲೇಬೇಕು ಮತ್ತು ಅತ್ಯಂತ ಯಶಸ್ವಿಯಾಗಿ ನಡೆಸಬೇಕು.
ಸಿರಾ ತಾಲ್ಲೂಕಿನ ಮಾಗೋಡು ಗ್ರಾಮ ಪಂಚಾಯಿತಿಯಿಂದ ನಡೆದ ಮಕ್ಕಳ ಗ್ರಾಮಸಭೆ ಮಕ್ಕಳ ಹಕ್ಕುಗಳಿಗೆ ಬೆಲೆ ನೀಡಲಿಲ್ಲ. 12 ಶಾಲೆಗಳ ಸುಮಾರು 280 ಮಕ್ಕಳು ಈ ಸಭೆಯಲ್ಲಿ ಭಾಗವಹಿಸಿದ್ದರು. ಆದರೆ ಇದರಲ್ಲಿ ಶಾಮಿಯಾನದ ಅಡಿಯಲ್ಲಿ ನೆರಳಿನಲ್ಲಿ ಕುಳಿತಿದ್ದ ಮಕ್ಕಳ ಸಂಖ್ಯೆ 80 ರಿಂದ 100. ಇನ್ನುಳಿದ 180 ಮಕ್ಕಳು ಬಿಸಿಲಿನಲ್ಲಿ ಕುಳಿತುಕೊಳ್ಳಲು ಆಗದೆ ಎದ್ದು ಹೋಗಲು ಆಗದೆ ಪರದಾಡುತ್ತಿದ್ದದ್ದು ಅತ್ಯಂತ ಬೇಸರದ ಸಂಗತಿ.
ಪಂಚಾಯ್ತಿಯಿಂದ ನಡೆಸುವ ಮಕ್ಕಳ ಹಕ್ಕುಗಳ ಗ್ರಾಮಸಭೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಉಪಸ್ಥಿತಿ ಬಹಳ ಮುಖ್ಯವಾಗಿರುತ್ತದೆ. ಆದರೆ ಈ ಪಂಚಾಯಿತಿ ವತಿಯಿಂದ ಮಾಡಿರುವ ಮಕ್ಕಳ ಗ್ರಾಮಸಭೆಗೆ ಕಳೆದ 3 ವರ್ಷದಿಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭಾಗವಹಿಸದೆ ಇರುವುದು ಶೋಚನೀಯ.
ವಿಶ್ವ ಸಂಸ್ಥೆಯ ಪ್ರಕಾರ ೦ ಯಿಂದ 18 ವರ್ಷದವರನ್ನು ಮಕ್ಕಳು ಎಂದು ಪರಿಗಣಿಸಲಾಗುತ್ತದೆ. ಇದರ ಅನುಸಾರ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಎಲ್ಲಾ ಕಿರಿಯ, ಹಿರಿಯ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಮಾಹಿತಿ ನೀಡಬೇಕು. ಆದರೆ ಮಕ್ಕಳ ಗ್ರಾಮ ಸಭೆ ಮಾಡಿದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಪಕ್ಕದಲ್ಲಿಯೇ ಪದವಿ ಪೂರ್ವ ಕಾಲೇಜು ಇದ್ದರೂ ಸಹಾ ಯಾವುದೇ ಮಾಹಿತಿ ನೀಡಿಲ್ಲ ಎಂದು ಪ್ರಾಂಶುಪಾಲರು ಬೇಸರ ವ್ಯಕ್ತಪಡಿಸಿದರು.
ಮಕ್ಕಳು ಸಭೆಯಲ್ಲಿ ಶಾಲೆ ಮತ್ತು ಗ್ರಾಮಕ್ಕೆ ಸಂಬಂಧಿಸಿದ ಸುಮಾರು 30 ಪ್ರಶ್ನೆಗಳನ್ನು ಕೇಳಿದರು. ಮಕ್ಕಳ ಪ್ರಶ್ನೆಗಳಿಗೆ ಪಂಚಾಯಿತಿಯ ಕಾರ್ಯದರ್ಶಿ ಸಾಹಿರಾ ಬಾನು ಮಾತ್ರ ಉತ್ತರಿಸುವಂತಹ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿತ್ತು.
ಸಭೆಯಲ್ಲಿ ಪಂಚಾಯಿತಿ ಅಧ್ಯಕ್ಷೆ ಸುಮಿತ್ರಮ್ಮ, ಉಪಾಧ್ಯಕ್ಷೆ ವಿಜಯಲಕ್ಷ್ಮೀ, ಸದಸ್ಯರಾದ ಕರಿಯಣ್ಣ, ನರಸಿಂಹರಾಜು, ಭಾಗ್ಯಮ್ಮ, ಶಾಲಾ ಶಿಕ್ಷಕರು, ಮುಖ್ಯ ಶಿಕ್ಷಕರು ಭಾಗವಹಿಸಿದ್ದರು.