ತುಮಕೂರು: ಜನಪರ ಹಾಗೂ ಸಮಾಜಮುಖಿ ಅರಸರೆಂದು ಖ್ಯಾತರಾಗಿದ್ದ ಮೈಸೂರು ಸಂಸ್ಥಾನದ 25ನೆಯ ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಜನ್ಮಶತಾಬ್ದಿಯನ್ನು ಡಿಸೆಂಬರ್ 08 ರಂದು ಬೆಳಗ್ಗೆ 10.30ಕ್ಕೆ ತುಮಕುರು ನಗರದ ಅಮಾನಿಕೆರೆ ಮುಂಭಾಗದಲ್ಲಿರುವ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಾ.ಹ.ರಮಾಕುಮಾರಿ ತಿಳಿಸಿದರು.
ಜಯಚಾಮರಾಜೇಂದ್ರ ಒಡೆಯರ್ ಮೈಸೂರು ಸಂಸ್ಥಾನಕ್ಕೆ ನೀಡಿದ ಕೊಡುಗೆ ಅಪಾರ. ಸ್ವಾತಂತ್ರ್ಯ ಪೂರ್ವದಲ್ಲೇ ಜನಪರ ಯೋಜನೆ ರೂಪಿಸಿ ಅನುಷ್ಠಾನಕ್ಕೆ ತಂದರು. ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಿಸಿ ಸಂಸ್ಥಾಪಕ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದು ಅವರ ಸೇವೆಯನ್ನು ಮರೆಯಲು ಸಾಧ್ಯವಿಲ್ಲ ಎಂದರು.
ಮೈಸೂರು ಸಂಸ್ಥಾನಕ್ಕೆ ಸೇರಿದ್ದ ತುಮಕೂರು ಜಿಲ್ಲೆಗೂ ಜಯಚಾಮರಾಜೇಂದ್ರ ಒಡೆಯರ್ ಅವರು ಹಲವು ಬಾರಿ ಭೇಟಿ ನೀಡಿದ್ದಾರೆ. ತುಮಕೂರು ಜಿಲ್ಲಾಸ್ಪತ್ರೆ, ಕೆ.ಆರ್. ಮಾರುಕಟ್ಟೆ, ಪಾವಗಡ, ಶಿರಾ, ಮಧುಗಿರ ಮತ್ತು ತುರವೇಕೆರೆಯಲ್ಲಿ ಮುನಿಪಲ್ ಪ್ರೌಢಶಾಲೆಗಳ ನಿರ್ಮಾಣ, ತೀತಾ ಜಲಾಶಯ ಮತ್ತು ಬೋರನಕಣಿವೆ ಜಲಾಶಯ ನಿರ್ಮಾಣ, ತುಮಕೂರು ಜಿಲ್ಲೆಯ ಕೊರಟಗೆರೆ, ತಿಪಟೂರು, ಕೆಸರುಮಡು, ಮಧುಗಿರಿ, ಅಮೃತೂರು, ಹೊನ್ನವಳ್ಳಿ, ಚಿಕ್ಕನಾಯಕನಹಳ್ಳಿ ಸೇರಿದಂತೆ ಹಲವು ಪಟ್ಟಣಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದರು. ಹಲವು ದೇವಾಲಯ ನಿರ್ಮಾಣ ಮಾಡಿಸಿದರು. ಜಯಂಗಲಿ ನದಿಗೆ ಸೇತುವೆ ನಿರ್ಮಾಣ ಮಾಡುವಂತೆ ಕೆಲಸ ಮಾಡಿದ್ದಾರೆ. ಹೀಗಾಗಿ ಅವರನ್ನು ಸ್ಮರಿಸಬೇಕಗಿದೆ ಎಂದು ವಿವರಿಸಿದರು.
ಯಚಾಮರಾಜೇಂದ್ರ ಒಡೆಯರ್ ತುಮಕೂರು ಜಿಲ್ಲೆಗೆ ನೀಡಿರುವ ಕೊಡುಗೆ ಸಂಬಂಧ ಕಿರುಹೊತ್ತಿಗೆ ಹೊರತರಲಾಗಿದೆ. ಲೇಖಕ ಕೆ.ಪಿ.ಲಕ್ಷ್ಮೀಕಾಂತರಾಜೇ ಅರಸ್ ಕಿರುಹೊತ್ತಿಗೆ ಬರೆದಿದ್ದಾರೆ. ಜಿಲ್ಲೆಗೆ ಸಂಬಂಧಿಸಿದ ದಾಖಲೆಗಳು ದೊರೆಯುವ ಈ ಕೃತಿಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಜಯಚಾಮರಾಜೇಂದ್ರ ಒಡೆಯರ್ ಅಳಿಯ ಆರ್. ರಾಜಚಂದ್ರ ಮಂಟೇಸ್ವಾಮಿ ಮಠದ ಎಂ.ಎಲ್. ಶ್ರೀಕಂಠಸಿದ್ದಲಿಂಗರಾಜೇ ಅರಸ್, ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಡಾ.ವೈ.ಎಸ್.ಸಿದ್ದೇಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಲಕ್ಷ್ಮೀಕಾಂತರಾಜೇ ಅರಸ್ ಭಾಗವಹಿಸುವರು.
ಮಾಧ್ಯಮಗೋಷ್ಟಿಯಲ್ಲಿ ಕಸಾಪ ಕೋಶಾಧ್ಯಕ್ಷ ಬಿ.ಮರುಳಯ್ಯ, ಲೇಖಕ ಕೆ.ಪಿ.ಲಕ್ಷ್ಮೀಕಾಂತರಾಜೇ ಅರಸ್, ಕನ್ನಡ ಸಾಹಿತ್ಯ ಪರಿಷತ್ತಿನ ರಾಣಿಚಂದ್ರಶೇಖರ್ ಉಪಸ್ಥಿತರಿದ್ದರು.