ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ನಾಗಲಮಡಿಕೆ ಸುಬ್ರಹ್ಮಣ್ಯೇಶ್ವರ ಸ್ವಾಮಿ ರಥೋತ್ಸವ, ಜಾತ್ರಾ ಮಹೋತ್ಸವದ ಅಂಗವಾಗಿ ಧನಗಳ ಜಾತ್ರೆ, ಅಂಗಡಿ ಮಳಿಗೆಗಳ ಸುಂಕ ವಸೂಲಿಯನ್ನುತಹಶೀಲ್ದಾರರು, ಉಪ ವಿಭಾಗಾಧಿಕಾರಿಗಳು ಈ ಕೂಡಲೇ ನಿಲ್ಲಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವೆಂಕಟೇಶ್ ತಿಳಿಸಿದರು.
ಸತತ ಬರದಿಂದಾಗಿ ರೈತರು ಆರ್ಥಿಕವಾಗಿ ಅಬಲರಾಗಿದ್ದಾರೆ. ಇಂತಹ ಸ್ಥಿತಿಯಲ್ಲಿ ಅವರು ಜಾನುವಾರುಗಳನ್ನು ಜಾತ್ರೆಗೆ ತಂದು ಮಾರಾಟ ಮಾಡಲು ಸುಂಕ ಕೊಡಬೇಕಿರುವುದು ಅಮಾನವೀಯ. ಧನಗಳ ಜಾತ್ರೆಯ ಸುಂಕ ವಸೂಲಿಗಾಗಿ ಈ ವರ್ಷ 52 ಸಾವಿರಕ್ಕೆ ಹರಾಜು ಕೂಗಲಾಗಿದೆ. ಹರಾಜು ಕೂಗಿದವರು ಸುಮಾರು 6 ರಿಂದ 7 ಲಕ್ಷ ವಸೂಲಿ ಮಾಡುತ್ತಾರೆ. ಜಾನುವಾರುಗಳು ಮಾರಾಟವಾದರೂ, ಆಗದಿದ್ದರೂ ರೈತರು ಸುಂಕ ಪಾವತಿಸಲೇ ಬೇಕು. ಇದರಿಂದ ಸರ್ಕಾರಕ್ಕಿಂತ ವಸೂಲಿ ಮಾಡುವವರಿಗೆ ಹೆಚ್ಚಿನ ಲಾಭವಾಗುತ್ತದೆ. ರೈತರ ಹಿತ ದೃಷ್ಠಿಯಿಂದ ಸುಂಕ ವಸೂಲಿ ಮಾಡುವುದನ್ನು ನಿಲ್ಲಿಸಬೇಕು ಎಂದು ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಬುಧವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಅಂಗಡಿ ಮಳಿಗೆಗಳಿಂದ ಸುಂಕ ವಸುಲಿಮಾಡಲು ಸುಮಾರು 1 ಲಕ್ಷ ಹರಾಜು ಕೂಗಲಾಗಿದೆ. ಬಡ ಜನತೆ ಜಾತ್ರೆಯಲ್ಲಿ ದುಡಿಯುವ ಸಲುವಾಗಿ ಅಂಗಡಿ ಹಾಕಿಕೊಳ್ಳುತ್ತಾರೆ 1 ಲಕ್ಷ ರೂಪಾಯಿಗೆ ಹರಾಜು ಕೂಗಿರುವರು 10 ಲಕ್ಷ ರೂಪಾಯಿ ವಸೂಲಿ ಮಾಡುವ ಗುರಿ ಹಾಕಿಕೊಳ್ಳುತ್ತಾರೆ. ಇದರಿಂದ ಬಡ ಜನತೆಯ ಮೇಲೆ ದೌರ್ಜನ್ಯ ಎಸಗಲಾಗುತ್ತದೆ ಎಂದರು.
ದೇಗುಲ ಆವರಣ, ಗ್ರಾಮದ ಸ್ವಚ್ಚತೆ ಇನ್ನಿತರ ಆಗು ಹೋಗುಗಳನ್ನು ನೊಡಿಕೊಳ್ಳುವ ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳನ್ನು ಕಡೆಗಣಿಸಿ ಉಪ ವಿಭಾಗಾಧಿಕಾರಿ, ತಹಶೀಲ್ದಾರರು ಶಿಷ್ಠಾಚಾರ ಉಲ್ಲಂಘಿಸಿದ್ದಾರೆ. ಜಾತ್ರೆಯ ಪ್ರಯುಕ್ತ ಪೂರ್ವ ಭಾವಿ ಸಭೆಯನ್ನೂ ಕರೆಯದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರು.