ತುರುವೇಕೆರೆ,: . ಪ್ರೀತಿಸುತ್ತಿದ್ದ ಜೋಡಿಗಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಇವರಲ್ಲಿ ಯುವತಿ ಪ್ರಾಣ ಕಳೆದುಕೊಂಡರೆ, ಯುವಕ ಜೀವನ್ಮರಣದ ಮಧ್ಯೆ ಹೋರಾಡುತ್ತಿರುವ ಘಟನೆ ವರದಿಯಾಗಿದೆ.
ತಾಲೂಕಿನ ಗೋವಿಂದಘಟ್ಟದ ಪ್ರೇಮ್ ಕುಮಾರ್ (21) ಮತ್ತು ಮೊರಸನಕೊಟ್ಟಿಗೆಯ ಸಹನ (18) ಎಂಬುವವರು ಪರಸ್ಪರ ಪ್ರೀತಿಸುತ್ತಿದ್ದರು. ಪ್ರೇಮ್ ಕುಮಾರ್ ಪರಿಶಿಷ್ಠ ಜಾತಿ ಜನಾಂಗಕ್ಕೆ ಸೇರಿದವನಾಗಿದ್ದರೆ, ಯುವತಿ ಸಹನ ಒಕ್ಕಲಿಗ ಜನಾಂಗಕ್ಕೆ ಸೇರಿದವರಾಗಿದ್ದಾಳೆ. ಪ್ರೇಮ್ ಕುಮಾರ್ ಇಲ್ಲಿಯ ಕೆಎಸ್ ಆರ್ ಟಿ ಸಿ ಡಿಪೋನಲ್ಲಿ ಮೆಕಾನಿಕ್ ಆಗಿ ಕರ್ತವ್ಯ ನಿರ್ವಸುತ್ತಿದ್ದರೆ, ಯುವತಿ ಇಲ್ಲಿಯ ಸರಸ್ವತಿ ಪ್ರೌಢಶಾಲೆಯಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಳು ಎನ್ನಲಾಗಿದೆ.
ತಮ್ಮ ಮದುವೆಗೆ ಪೋಷಕರು ವಿರೋಧ ವ್ಯಕ್ತಪಡಿಸುವರು ಎಂಬ ಹೆದರಿಕೆಯಿಂದ ಪ್ರೇಮ್ ಕುಮಾರ್ ಮತ್ತು ಸಹನ ತಾಲೂಕಿನ ಕಂಚೀರಾಯಬೆಟ್ಟದ ತಪ್ಪಲಿಗೆ ತೆರಳಿ ಮಧ್ಯಾಹ್ನ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ವಿಷ ಕುಡಿದ ನಂತರ ಯುವತಿ ತನ್ನ ಸಂಬಂಧಿಕರಿಗೆ ಪೋನ್ ಮಾಡಿ ಕೊನೆಯದಾಗಿ ನಿಮ್ಮನ್ನು ನೋಡಬೇಕೆಂಬ ಆಸೆ ಇದೆಯೆಂದೂ, ಈರ್ವರೂ ವಿಷ ಕುಡಿದು ಕಂಚೀರಾಯಸ್ವಾಮಿ ತಪ್ಪಲಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾಳೆ. ಆ ವೇಳೆ ಯುವಕ ಸಹ ಸಹನಳ ಸಂಬಂಧಿಕರ ಜೊತೆ ಮಾತನಾಡಿದ ಎಂದು ತಿಳಿದುಬಂದಿದೆ.
ಪ್ರೇಮ್ ಕುಮಾರ್ ಸಹ ತನ್ನ ಕುಟುಂಬದ ಸದಸ್ಯರೊಂದಿಗೆ ಫೋನಿನಲ್ಲಿ ಮಾತನಾಡಿ ತಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾನೆ.
ಹುಡುಕಾಟ – ಸಹನ ಮತ್ತು ಪ್ರೇಮ್ ಕುಮಾರ್ ನೀಡಿದ ಮಾಹಿತಿಯನ್ನು ಅರಸಿ ಕಂಚೀರಾಯಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಎರಡೂ ಕುಟುಂಬದ ಸದಸ್ಯರು ಸುಮಾರು ಎರಡು ಗಂಟೆಗಳ ಕಾಲ ಹುಡುಕಾಡಿದ ನಂತರ ಅರೆಪ್ರಜ್ಞಾವಸ್ಥೆಯಲ್ಲಿದ್ದ ಇವರ ಕುರುಹು ಪತ್ತೆಯಾಗಿದೆ.
ಕೂಡಲೇ ಆಂಬ್ಯುಲೆನ್ಸ್ ನಲ್ಲಿ ಈರ್ವರನ್ನೂ ಸಕರ್ಾರಿ ಆಸ್ಪತ್ರೆಗೆ ಕರೆ ತರುವ ವೇಳೆಗಾಗಲೇ ಯುವತಿ ಸಹನ ಕೊನೆಯುಸಿರೆಳೆದಿದ್ದಳು. ಯುವಕ ಪ್ರೇಮ್ ಕುಮಾರ್ ನ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಡಾ.ಮುರುಳಿ ಹೆಚ್ಚಿನ ಚಿಕಿತ್ಸೆಗಾಗಿ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ್ದಾರೆ. ಪ್ರೇಮ್ ಕುಮಾರ್ ನ ಸ್ಥಿತಿ ಗಂಭೀರವಾಗಿದೆ.