ಡಾ.ಓ.ನಾಗರಾಜು.
ಇತ್ತೀಚೆಗೆ ಅಷ್ಟೆ ಜನ ತಮ್ಮ ದುಡಿಮೆಯ ಆದಾಯ ತಮ್ಮ ಸಂಸಾರಕ್ಕೆ ಮೀಸಲು, ಮಾಡಿದ ಅಡುಗೆ ಮನೆ ಮಂದಿಗೆ ಮಾತ್ರ, ಕೊಂಡು ತಂದ ಅಥವಾ ಬೆಳೆದ ಯಾವುದೇ ಹಣ್ಣು ಹಂಪಲು ಮಡದಿ ಕಂದಗಳಿಗೆ ಎಂದು ಭಾವಿಸಿಕೊಂಡು ಸ್ವಾರ್ಥದ ಬದುಕು ಸಾಗಿಸುತ್ತಿರುವುದು.
ಮೊದಲು ಈ ತರದ ಬೇರಿಂಗಡ ಇರಲಿಲ್ಲ.
ಅವಿಭಕ್ತ ಕುಟುಂಬ ವ್ಯವಸ್ಥೆ ಯಲ್ಲಿ ಎಲ್ಲರೂ ಒಂದಿಲ್ಲೊಂದು ಬಗೆಯಲ್ಲಿ ದುಡಿಯುವವರೆ ..ವೃದ್ಧರು ಹೆಳವರುಕೂಡ ಮನೆ ಯಲ್ಲಿದ್ದುಕೊಂಡು ಸಣ್ಣ ಪುಟ್ಟ ಕೆಲಸ ಮಾಡುವುದು ಮನೆಗಾಗಿ ಮಿಡಿಯುವುದು ನಡೆಯುತ್ತಿತ್ತು
ವೈಯಕ್ತಿಕ ದುಡಿಮೆ ಕೂಡು ಕುಟುಂಬದ ಒಟ್ಟಾದಾಯ ವಾಗುತಿತ್ತು. ಅದರ ಫಲಭೋಗಿಸುವಿಕೆ ಕೂಡ ಅನ್ಯೋನ್ಯವಾಗಿ ಸಾಮುದಾಯಿಕ ನೆಲೆಯಲ್ಲಿ ನೆರವೇರುತ್ತಿತ್ತು.
ಇನ್ನು ಮನೆಯಲ್ಲಿ ತಯಾರಿಸುವ ರುಚಿಕಟ್ಟು ಅಡುಗೆ ಮನೆ ಮಂದಿಗೆ ಅಲ್ಲದೆ ದಾಯಾದಿ ಸಂಬಂಧಿಗಳ ಮನೆ ಗೋಳ ಗಂಗಳದಲ್ಲಿ ಸ್ಥಾಪಿತಗೊಳ್ಳುತಿತ್ತು. ವಯಸ್ಸಾದವರ ಅಥವಾ ಪ್ರೀತಿ ಪಾತ್ರರ ಗ್ವಾಮಾಳೆಗುಂಟ ಬಸಿರಿಗೆ ಇಳಿಯುತಿತ್ತು.
ಹಸುಗೂಸುಗಳಿಗಂತು ಕವಳ ಒಂದು ಮನೆಯೇ? ಉದೊಸಲುದಾಟಿದ ಅಕ್ಕರೆ, ತಟ್ಟೆ ಮೀರಿದ ಕೈಎಂಜಲೇ ನೈಜಪ್ರೀತಿ..
ಹಾಗೆಯೇ ಹಣ್ಣು ಹಂಪಲು ತಿಂಡಿ ತಿನಿಸಿನ ವಿಚಾರ ಕ್ಕೆ ಬಂದಾಗ ಕೂಡು ಕುಟುಂಬ ವಿರಲಿ ಸಿಡಿದ ಮನೆಯಿರಲಿ ಕಡೆ ಪಕ್ಷ ನೆರೆ ಹೊರೆ ಯ ಕೂಸುಗಳಿಗೆ ಕೊಟ್ಟು ಕಳಿಸುವ ಇಲ್ಲವೇ ತಮ್ಮ ಕುಡಿಗಳ ಜತನದಲಿ ಕೂರಿಸಿ ತಿನ್ನಿಸಬಯಸುವ ಸೌಹಾರ್ದತೆ ಇರುತ್ತಲಿತ್ತು.
ಆದರೆ ಇಂದು.. ?
ಹೂಂ.ಈಗ ಬರಿಯ ಕನವರಿಕೆ.
ಜನ ಧನಗರ ಬಡಿಸಿ ಕೊಂಡು ಕೃಪಣತೆಯ ಎಳವುತನದಲಿ ಔದಾರ್ಯ ನೀಗಿದ ಬದುಕನ್ನು ಏಗುತ್ತಿದ್ದಾರೆ.
ಮನೆ ಮನಸ್ಸಿನ ನಡುವೆ ಗೋಡೆಗಳು ಎದ್ದಿವೆ.ಸಹಜಬಂಧುತ್ವದ ಭಾವಕೋಶದ ಬಾಗಿಲಿಗೆ ಅಸಹನೆಯ ಬೀಗ ಜಡಿಯಲ್ಪಟ್ಟಿದೆ. ಎದ್ದರೆ ಬಿದ್ದರೆ ಎಡತಾಕುವ ಮುಖಾಮುಖಿಯಾಗುವ ಸಂದರ್ಭದೊಳಗೂ ಪರಸ್ಪರ ಬಂಧುಗಳಾಗಿ ದಾಯಾದಿ ಗಳಾಗಿ ಸ್ನೇಹಿತರಾಗಿ ಇದ್ದರೂ ಪ್ರತ್ಯೇಕತೆಯ ವರ್ತುಲ ನಿರ್ಮಿಸಿಕೊಂಡು ಅಪರಿಚಿತ ಆಕೃತಿಗಳಾಗಿ ಕಂಡೂ ಕಾಣದಂತೆ ಅಥವಾ ಹಗೆಸಾಧಿಸುತ್ತ ಅಡ್ಡಾಡುವುದು ನಡೆಯುತ್ತಿದೆ.
ವೈಯುಕ್ತಿಕ-ಪ್ರಗತಿಗೆ ಸಾಮುದಾಯಿಕವಾಗಿ ಆರ್ಥಿಕ ಭಾವನಾತ್ಮಕ ವಿಕಾಸಕ್ಕೆ ಕಕ್ಕುಲಾತಿ ಯ ತಡೆ ಗೋಡೆ ಎದ್ದು ಬಿಟ್ಟಿದೆ.ಇದರೊಟ್ಟಿಗೆ ಜಾತಿ ಧರ್ಮಗಳ ಪ್ರೇತ ಬೇರೆ ಮೈದುಂಬಿ ಕೊಂಡಿದೆ . ಮಾನವೀಯತೆ ಮರೀಚಿಕೆ ಎನಿಸುತ್ತದೆ.
ಅಲ್ಲ.. ನಾವು ಕುವೆಂಪು ಅವರ ಮನುಮತ-ವಿಶ್ವಪಥ ಪರಿಕಲ್ಪನೆ ಯನ್ನು ಸಾಕಾರಗೊಳಿಸಿ ವಿಶ್ವ ಮಾನವ ರಾಗಲೇಬೇಕಾದ ದರ್ದಿನ ಈ ಹೊತ್ತಿನಲ್ಲಿ ಹೀಗೆ ದುರ್ದಿನದ ಕಂದಕ ನಿರ್ಮಿಸಿಕೊಳ್ಳುವುದು ಎಷ್ಟುಸರಿ? ಇದು ಖೇದದ ಸಂಗತಿ ಅಲ್ಲವೇ..ಸ್ನೇಹಿತರೇ?
ಲೇಖಕರು
ಕಾದಂಬರಿಕಾರ
ತುಮಕೂರು
94486 59646