Publicstory. in
Tumukuru: ಮಕ್ಕಳು ಚಿತ್ರಗಳನ್ನು ಬಿಡಿಸುವುದನ್ನು ರೂಡಿಸಿಕೊಂಡರೆ ಅವರ ಮನಸ್ಸು ಹತೋಟಿಗೆ ಬಂದು ಅಭ್ಯಾಸದ ಕಡೆಗೆ ಕೇಂದ್ರೀಕೃತವಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಎಸ್. ನಟರಾಜ್ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಬಾಲಭವನ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ 5 ರಿಂದ 16ರ ವಯೋಮಾನದ ಮಕ್ಕಳಿಗೆ ಏರ್ಪಡಿಸಿದ್ದ ವೇಷಭೂಷಣ ಸ್ಪರ್ಧೆ ಉದ್ಘಾಟಿಸಿ ಅವರು ಮತನಾಡಿದರು.
ಮಕ್ಕಳು ಎಲ್ಲಾ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ಮಕ್ಕಳ ಸರ್ವಾಂಗೀಣ ಬೆಳವಣಿಗೆ ಆಗುವುದರ ಜೊತೆಗೆ ಬುದ್ಧಿಮತ್ತೆ ಹೆಚ್ಚಾಗುವುದೆಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಲ್ಯಾಣಾಧಿಕಾರಿ ರಮೇಶ್ ಅವರು ಮಾತನಾಡಿ, ಮಕ್ಕಳು ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ರಾಷ್ಟ್ರಭಕ್ತಿ, ದೇಶಪ್ರೇಮ ವೃದ್ಧಿಸುವುದರ ಜೊತೆಗೆ ಯಾವುದೇ ಜಾತಿ, ಮತ, ಬೇಧ-ಭಾವವಿಲ್ಲದೇ ಒಟ್ಟಿಗೆ ಬೆಳೆಯುವಂತಾಗುತ್ತದೆ ಎಂದರು.
ಜಿಲ್ಲಾ ಬಾಲಭವನ ವ್ಯವಸ್ಥಾಪಕ ಕೃಷ್ಣನಾಯ್ಕ್, ಸಂಯೋಜಕಿ ಮಮತ ಪಿ, ಸ್ಪರ್ಧಾ ತೀರ್ಪುಗಾರರು, ಪೋಷಕರು, ವಿವಿಧ ಶಾಲೆಗಳ ಮಕ್ಕಳು ಉಪಸ್ಥಿತರಿದ್ದರು. ವಿಜೇತ ಮಕ್ಕಳಿಗೆ ಬಹುಮಾನ ಮತ್ತು ಪ್ರಶಂಸನ ಪತ್ರಗಳನ್ನು ನೀಡಿ ಗೌರವಿಸಲಾಯಿತು.