Publicstory.in
ಪಾವಗಡ: ಅಂತ್ಯ ಸುಬ್ರಹ್ಮಣ್ಯೇಶ್ವರ ಕ್ಷೇತ್ರ ನಾಗಲಮಡಿಕೆ ಉತ್ತರ ಪಿನಾಕಿನಿ ನದಿಯಲ್ಲಿ ನಾಗ ಲಿಂಗ ವಿಗ್ರಹ ಸಿಕ್ಕಿದೆ ಎಂಬ ವದಂತಿ ವಾಟ್ಸ್ ಆಪ್, ಫೇಸ್ ಬುಕ್ ನಲ್ಲಿ ವೈರಲ್ ಆಗಿದೆ.
ಸುಳ್ಳು ಸುದ್ಧಿಯನ್ನು ಹಬ್ಬಿಸುವ ಮೂಲಕ ಭಕ್ತಾದಿಗಳ ಧಾರ್ಮಿಕ ಭಾವನೆಯನ್ನು ಕೆರಳಿಸುವ, ಆ ಮೂಲಕ ಜನರ ನಂಬಿಕೆಯನ್ನು ಬಂಡವಾಳವಾಗಿಟ್ಟುಕೊಂಡು ಹಣ ಸುಲಿಗೆ ಮಾಡುವ ವ್ಯವಸ್ಥಿತ ಷಡ್ಯಂತ್ರದಲ್ಲಿ ಅಧಿಕಾರಿಗಳು, ಕೆಲ ಕಿಡಿಗೇಡಿಗಳು ಭಾಗಿಯಾಗಿದ್ದಾರೆ ಎಂಬ ಅನುಮಾನವನ್ನು ಜನತೆ ಹಂಚಿಕೊಳ್ಳುತ್ತಿದ್ದಾರೆ.
ಸುಬ್ರಹ್ಮಣ್ಯೇಶ್ವರ ಸ್ವಾಮಿ ಮೂಲ ವಿಗ್ರಹ ಮಡಿಕೆ ಹೊಡೆಯುವಾಗ ಸಿಕ್ಕಿತ್ತು. ಹೀಗಾಗಿ ಗ್ರಾಮಕ್ಕೆ ನಾಗಲಮಡಿಕೆ ಎಂಬ ಹೆಸರು ಬಂದಿತ್ತು. ರಾಜ್ಯ, ಆಂಧ್ರ ಪ್ರದೇಶ, ತಮಿಳು ನಾಡು ಸೇರಿದಂತೆ ದಕ್ಷಿಣ ಭಾರತದಲ್ಲಿಯೇ ಅಂತ್ಯ ಸುಬ್ರಹ್ಮಣ್ಯೇಶ್ವರ ಎಂಬ ಜನಪ್ರಿಯತೆ ಇಲ್ಲಿನ ಕ್ಷೇತ್ರಕ್ಕಿದೆ.
ಆದರೆ ಇದೇ ಪರಿಕಲ್ಪನೆಯನ್ನು ಆಧಾರವಾಗಿಟ್ಟುಕೊಂಡು 500 ವರ್ಷಗಳ ಹಿಂದೆ ನದಿಯಲ್ಲಿ ಸಿಕ್ಕಿರುವ ಮೂಲ ವಿಗ್ರಹದಂತೆಯೇ ಮತ್ತೊಂದು ವಿಗ್ರಹವನ್ನು ತಯಾರಿಸಿ ನದಿ ದಂಡೆಯಲ್ಲಿ ಹೂಳಲಾಗಿದೆ. ಹೂಳಲಾದ ವಿಗ್ರಹವನ್ನು ಜೆಸಿಬಿ ಮೂಲಕ ಮೇಲೆತ್ತಿ, ಶುದ್ಧಗೊಳಿಸಿ ತೀಟೆ ನಾಗಪ್ಪ ದೇಗುಲದ ಮುಂಭಾಗದ ಸರ್ಕಾರಿ ಸ್ಥಳದಲ್ಲಿ ಜನವರಿ-29 ಬುಧವಾರದಂದು ಪ್ರತಿಷ್ಠಾಪಿಸಲಾಗಿದೆ.
ಪೇರೂರಿಗೆ ನೀರು ಹರಿಸುವ ಕಾಮಗಾರಿ ನಡೆಸುವಾಗ ಬೃಹತ್ ಶಿವಲಿಂಗ ಸಿಕ್ಕಿದೆ ಎಂದು ಜೆಸಿಬಿ ಬಳಸಿ ವಿಗ್ರಹ ಮೇಲೆತ್ತುತ್ತಿರುವ ವಿಡಿಯೊ, ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿತ್ತು. ವಿಡಿಯೊ, ಚಿತ್ರ ವೀಕ್ಷಿಸಿದವರು ಆಶ್ಚರ್ಯ ವ್ಯಕ್ತಪಡಿಸಿದ್ದರು.
ಜಿಲ್ಲೆ ಸೇರಿದಂತೆ ರಾಜ್ಯ, ಆಂಧ್ರ ಪ್ರದೇಶ ಇತರೆ ರಾಜ್ಯಗಳಿಗೂ ಕೆಲವೇ ಗಂಟೆಗಳಲ್ಲಿ ಮಾಹಿತಿ ಹಬ್ಬಿತ್ತು. ಹಂದ್ರಿನಿವಾ ಯೋಜನೆಯಡಿ ಉತ್ತರ ಪಿನಾಕಿನಿ ನದಿ ಮೂಲಕ ಪೇರೂರು ಡ್ಯಾಂ ಗೆ ನೀರು ಹರಿಸುವ ಕಾಮಗಾರಿಗೆ ಕೆಲ ದಿನಗಳ ಹಿಂದೆ ರಾಪ್ತಾಡು ಶಾಸಕ ಪ್ರಕಾಶ್ ರೆಡ್ಡಿ ಶಂಕು ಸ್ಥಾಪನೆ ನೆರವೇರಿಸಿದ್ದರು.
ನೂರಾರು ವರ್ಷಗಳ ಇತಿಹಾಸವಿರುವ ಮೂಲ ವಿಗ್ರಹವನ್ನು ಹೋಲುವಂತಹ ಮೂರ್ತಿಯನ್ನೇ ಏಕೆ ತರಿಸಬೇಕಿತ್ತು. ಪ್ರತಿಷ್ಠಾಪನೆಗೂ ಮುನ್ನ ನೀರು, ದವಸ, ಧಾನ್ಯಗಳಲ್ಲಿ ವಿಗ್ರಹವನ್ನು ಇಡುವ ಶಾಸ್ತ್ರವಿದೆ ಎಂದು ಹೇಳಲಾಗುತ್ತದೆ. ಪ್ರತಿಷ್ಠಾಪನೆ ಮಾಡುವ ಸ್ಥಳದಲ್ಲಿಯೇ ನೀರು ಸಂಗ್ರಹಿಸುವ ತೊಟ್ಟಿ ನಿರ್ಮಿಸಿ ನೀರಿನಲ್ಲಿಡಬಹುದಿತ್ತು. ಆದರೆ ನದಿಯ ದಂಡೆಯಲ್ಲಿ ಗುಂಡಿ ನಿರ್ಮಿಸಿ ಅದರೊಳಗಿಟ್ಟು, ನಂತರ ಜೆಸಿಬಿಯಲ್ಲಿ ಮೇಲೆತ್ತಲಾಗಿದೆ. ವಿಗ್ರಹವನ್ನು ಗುಂಡಿಯಲ್ಲಿಡುವ ವಿಡಿಯೊವನ್ನು ಹಂಚಿಕೊಳ್ಳದೆ, ವಿಗ್ರಹವನ್ನು ಜೆಸಿಬಿ ಯಂತ್ರದ ಮೂಲಕ ಮೇಲೆತ್ತುವ, ಅದನ್ನು ಶುದ್ಧಗೊಳಿಸುವ ವಿಡಿಯೋ ಮಾಡಿ ಸುಳ್ಳು ಸುದ್ಧಿಯೊಂದಿಗೆ ವಿಡಿಯೊ, ಚಿತ್ರವನ್ನು ಹಬ್ಬಿಸುವ ಅಗತ್ಯವೇನಿತ್ತು?. ಸರ್ಕಾರಿ ಸ್ಥಳದಲ್ಲಿ ಖಾಸಗಿ ವ್ಯಕ್ತಿಗಳು ವಿಗ್ರಹ ಪ್ರತಿಷ್ಠಾಪನೆ ಮಾಡಲು ಯಾರು ಅನುಮತಿ ಕೊಟ್ಟಿದ್ದಾರೆ? ಅಧಿಕಾರಿಗಳೇ ಇದರಲ್ಲಿ ಷಾಮೀಲಾಗಿದ್ದಾರೆಯೆ? ಮುಜರಾಯಿ ದೇಗುಲದ ಸಿಬ್ಬಂದಿಯ ಕುಮ್ಮಕ್ಕು ಕೃತ್ಯಕ್ಕೆ ಇದೆಯೇ ಎಂಬೆಲ್ಲ ಪ್ರಶ್ನೆಗಳು ಸಾರ್ವಜನಿಕರನ್ನು ಕಾಡುತ್ತಿವೆ.
500 ವರ್ಷಕ್ಕೂ ಹಳೆಯ ದೇಗುಲದಲ್ಲಿರುವ ಮೂಲ ವಿಗ್ರಹವನ್ನೇ ಹೋಲುವ ವಿಗ್ರಹ ತರಿಸಿ ಇಂತಹ ಸುಳ್ಳು ಮಾಹಿತಿಯನ್ನು ಹಬ್ಬಿಸುವುದರಿಂದ ಸುಬ್ರಹ್ಮಣ್ಯೇಶ್ವರ ದೇಗುಲದ ಬಗ್ಗೆ ಜನತೆಗಿರುವ ನಂಬಿಕೆಗೆ ದಕ್ಕೆಯಾಗುತ್ತದೆ. ವಿಗ್ರಹ ಪ್ರತಿಷ್ಠಾಪಿಸುವ ಸ್ಥಳವನ್ನು ಜನಪ್ರಿಯಗೊಳಿಸಲು, ಪ್ರಮುಖ ದೇಗುಲದ ಭಕ್ತಾದಿಗಳನ್ನು ನೂತನವಾಗಿ ಪ್ರತಿಷ್ಠಾಪನೆ ಮಾಡಿರುವ ಸ್ಥಳಕ್ಕೆ ಸೆಳೆಯಲು ಇಂತಹ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಜನತೆ ವಿಶ್ಲೇಷಿಸುತ್ತಿದ್ದಾರೆ.
ಜನರ ಧಾರ್ಮಿಕ ಭಾವನೆಗಳೊಂದಿಗೆ ಚೆಲ್ಲಾಟವಾಡುವವರನ್ನು ಪತ್ತೆ ಹಚ್ಚಬೇಕು. ಇಂತಹ ಸೂಕ್ಷ್ಮ ವಿಚಾರಗಳನ್ನು ನಿರ್ಲಕ್ಷಿಸದೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂಬ ಒತ್ತಾಯಗಳು ಕೇಳಿಬರುತ್ತಿವೆ.
ಪ್ರಕರಣದ ಬಗ್ಗೆ ತಾಲ್ಲೂಕು ಆಡಳಿತ ನಿರ್ಲಕ್ಷ್ಯ ವಹಿಸಿರುವ ಬಗ್ಗೆ ಜನತೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ನಾಗಲಮಡಿಕೆ ಹೋಬಳಿ ಕಂದಾಯ ನಿರೀಕ್ಷಕ, ತಹಶೀಲ್ದಾರರು, ಜಿಲ್ಲಾಧಿಕಾರಿ ಯಾರೊಬ್ಬರೂ ಈ ಬಗ್ಗೆ ಸ್ಪಷ್ಟನೆ ನೀಡುವುದಿರಲಿ ರಾಜ್ಯ ಮಟ್ಟದಲ್ಲಿ ಸುಳ್ಳು ಸುದ್ದಿ ಹರಿದಾಡುತ್ತಿದ್ದರೂ ತುಟಿ ಬಿಚ್ಚದೆ ಮೌನವಾಗಿರುವುದರ ಹಿಂದಿನ ಮರ್ಮವೇನು? ಎಂದು ಜನತೆ ಪ್ರಶ್ನಿಸುತ್ತಿದ್ದಾರೆ.
ಶುಕ್ರವಾರ ಜನವರಿ-30 ರಂದು ನಾಗಲಮಡಿಕೆ ಗ್ರಾಮಕ್ಕೆ ಭೇಟಿ ನೀಡಲಾಗುವುದು. ನೂತನ ವಿಗ್ರಹ ಎಲ್ಲಿ ಪ್ರತಿಷ್ಠಾಪಿಸಲಾಗಿದೆ. ಅನುಮತಿ ಪಡೆಯಲಾಗಿದೆಯೇ ಇಲ್ಲವೆ? ಎಂಬಿತ್ಯಾದಿ ವಿಚಾರಗಳ ಬಗ್ಗೆ ಸ್ಥಳ ಪರಿಶೀಲನೆ ನಡೆಸಲಾಗುವುದು.
ವರದರಾಜು, ತಹಶೀಲ್ದಾರ್, ಪಾವಗಡ.