Tumukuru: ತುಮಕೂರು ಜಿಲ್ಲೆಯ ಕೊಬ್ಬರಿಗೆ ಅದರಲ್ಲೂ ತಿನ್ನುವ ಕೊಬ್ಬರಿ ವಿಶ್ವದಲ್ಲೇ ಹೆಸರುವಾಸಿಯಾಗಿದ್ದು ಅದಕ್ಕೆ ಸೂಕ್ತ ವೈಜ್ಞಾನಿಕ ಬೆಂಬಲ ಬೆಲೆ ನೀಡಬೇಕು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್ ಕಲ್ಪತರು ನಾಡಿನಲ್ಲಿ ಅತಿಹೆಚ್ಚು ತೆಂಗಿನ ಬೆಳೆ ಬೆಳೆಯಲಾಗುತ್ತಿದೆ. 1983ರಲ್ಲಿ ಇದ್ದ ಬೆಲೆಯೇ ಇಂದಿಗೂ ಇದೆ. ಬೆಲೆಯನ್ನು ಪರಿಷ್ಕರಿಸುವ ಗೋಜಿಗೆ ಹೋಗಿಲ್ಲ ಎಂದು ಆರೋಪಿಸಿದರು.
ಕೊಬ್ಬರಿ ಹೆಚ್ಚಾಗಿ ಬೆಳೆದರೂ ಸೂಕ್ತ ಬೆಲೆ ಸಿಗದೆ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ರೈತರ ಸಂಕಟ ಮತ್ತು ಕೊಬ್ಬರಿ ಬಗ್ಗೆ ಯಾವುದೇ ಜನಪ್ರತಿನಿಧಿಗಳು, ಸಚಿವರು, ಶಾಸಕರು ಕೂಡ ದನಿ ಎತ್ತುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೊರ ದೇಶಗಳಿಂದ ಕೊಬ್ಬರಿ ಮತ್ತು ರೇಷ್ಮೆಯನ್ನು ಆಮದು ಮಾಡಿಕೊಳ್ಳುತ್ತಿದ್ದರು. ಈಗ ಚೀನಾದಲ್ಲಿ ಕೊರೊನ ವೈರಸ್ ರೋಗ ಹರಡಿರುವುದರಿಂದ ಆಮದು ನಿಂತಿದೆ. ಇದರಿಂದ ದೇಶೀಯ ರೇಷ್ಮೆ ಬೆಳೆಗಾರರಿಗೆ ಉತ್ತಮ ಬೆಲೆ ದೊರೆಯುತ್ತಿದೆ. ಇದೇ ವಾತಾವರಣ ಮುಂದುವರಿದರೆ ಒಳ್ಳೆಯದು. ಸರ್ಕಾರ ಈ ದಿಕ್ಕಿನಲ್ಲಿ ಯೋಚನೆ ಮಾಡಬೇಕು ಎಂದು ಆಗ್ರಹಿಸಿದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಲಿದ್ದು ವಿದೇಶಿ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಮುಂದಾಗಿದ್ದಾರೆ. ಯಾವುದೇ ಕಾರಣಕ್ಕೂ ವಿದೇಶಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಬಾರದು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಾವು ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವ ಘೋಷಣೆ ಮಾಡಿದ್ದರು. ಈಗ ಅವಕಾಶ ಸಿಕ್ಕಿದೆ. ರೈತರ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ಮಾಧ್ಯಮಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ ಪಟೇಲ್ ಮೊದಲಾದವರು ಉಪಸ್ಥಿತರಿದ್ದರು.