Tumukuru: ಅನಾರೋಗ್ಯದಿಂದ ಬಳಲುತ್ತಿದ್ದ ಸಾಹಿತಿ, ಬಂಡಾಯ ಸಾಹಿತ್ಯ ಸಂಘಟನೆಯಲ್ಲಿ ಕೆಲಸ ಮಾಡಿದ್ದ , ಡಾ. ಸೋ.ಮು.ಭಾಸ್ಕರಾಚಾರ್ ಬುಧವಾರ ರಾತ್ರಿ ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಹಲವಾರು ಸಂಘಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ರಾಜ್ಯದಲ್ಲಿ ಕನ್ನಡದ ನೆಲ, ಜಲಕ್ಕಾಗಿ ಕೂಡ ಹೋರಾಟ ನಡೆಸಿದ್ದರು.
ಭಾಸ್ಕರಾಚಾರ್ ಅವರು 1979ರಲ್ಲಿ ಕೆಜಿಐಡಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ. ನಂತರ ಸಿದ್ದಗಂಗಾ ಕಾಲೇಜು ಮತ್ತು ಸರ್ಕಾರಿ ಕಲಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದರು.
ಬಳಿಕ ವಿದ್ಯಾವಾಹಿನಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದರು. ಆನಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಮೂರು ವರ್ಷ ಕೆಲಸ ನಿರ್ವಹಿಸಿ ಕನ್ನಡ ಚಟುವಟಿಕೆಗಳನ್ನು ಕೈಗೊಂಡಿದ್ದರು.
ಹಂಪಿ ವಿಶ್ವವಿದ್ಯಾಲಯದಲ್ಲಿ ನಡೆದ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಆಡಳಿತ ಭಾಷೆಯಾಗಿ ಕನ್ನಡ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಉಪನ್ಯಾಸ ನೀಡಿದ್ದರು.
ವಿಶೇಷತೆ ಎಂದರೆ ಭಾಸ್ಕರಾಚಾರ್ ನಿವೃತ್ತಿಯಾಗುವ ಅಂಚಿನಲ್ಲಿ ಕನ್ನಡ ಸಾಹಿತ್ಯದಲ್ಲಿ ‘ತಾಯಿ’ ಮಹಾಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿ ಪಡೆದರು. ಹಂಪಿ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ.ಬಿ.ಎಂ.ಪುಟ್ಟಯ್ಯ ಇವರಿಗೆ ಮಾರ್ಗದರ್ಶನ ನೀಡಿದ್ದರು.
Publicstory.in ಜೊತೆ ದೂರವಾಣಿಯಲ್ಲಿ ಮಾತನಾಡಿ ಸಾಹಿತಿ ಎನ್. ನಾಗಪ್ಪ, ಭಾಸ್ಕರಾಚಾರ್ ಉತ್ತಮ ವ್ಯಕ್ತಿತ್ವವುಳ್ಳವರಾಗಿದ್ದರು. ಒಳ್ಳೆಯ ಹಾಸ್ಯ ಪ್ರಜ್ಞೆ ಅವರಲ್ಲಿತ್ತು. ಜನಾನುರಾಗಿಯಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಎಲ್ಲಾ ವರ್ಗದವರಿಗೂ ಅವಕಾಶ ನೀಡಿದ್ದರು. ಹೃದಯವಂತ ವ್ಯಕ್ತಿ. ಎಲ್ಲರನ್ನೂ ಆತ್ಮೀಯತೆಯಿಂದ ಮಾತನಾಡಿಸುತ್ತಿದ್ದರು ಎಂದು ಸ್ಮರಿಸಿದ್ದಾರೆ.
ಭಾಸ್ಕರಾಚಾರ್ ಅವರು ಹೋರಾಟಗಾರ ಕೆ.ಆರ್.ನಾಯಕ್, ಪ್ರಬಂಧಕಾರ ಜಿ.ಎಚ್.ಸಣ್ಣಗುಡ್ಡಯ್ಯ ಅವರು ಸೇರಿದಂತೆ ಹಲವರ ಕುರಿತು ವ್ಯಕ್ತಿಚಿತ್ರಗಳು ಪುಸ್ತಕವನ್ನು ಬರೆದಿದ್ದಾರೆ. ಎರಡು ಕಾದಂಬರಿಗಳು, ಕವನ ಸಂಕಲನಗಳನ್ನು ಬರೆದಿದ್ದಾರೆ.
ಭಾಸ್ಕರಾಚಾರ್ ಇಬ್ಬರು ಮಕ್ಕಳು ಸೇರಿದಂತೆ ಹಲವು ಮಂದಿ ಅಭಿಮಾನಿಗಳು, ಸ್ನೇಹಿತರು, ಆತ್ಮೀಯರನ್ನು ಅಗಲಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.