ತುಮಕೂರು:
ಸಾಧಾರಣ ಪೊಲೀಸ್ ಹುದ್ದೆಯಲ್ಲಿದ್ದ ವ್ಯಕ್ತಿ ರಾಜಕೀಯ ಗೀಳಿನಿಂದ ವೃತ್ತಿಗೆ ರಾಜೀನಾಮೆ ನೀಡಿ ಚುನಾವಣೆ ಸ್ಪರ್ಧೆಗಿಳಿದು ಮೂರು ಭಾರಿ ಶಾಸಕರಾಗಿ, ಸಚಿವರಾಗಿ ಆಯ್ಕೆಯಾಗಿ ಇಡೀ ರಾಜ್ಯದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಹ್ಯಾಟ್ರಿಕ್ ರಾಜಕಾರಣಿ ಸಿ. ಚನ್ನಿಗಪ್ಪ ಇನ್ನು ನೆನಪು ಮಾತ್ರ.
ದೀರ್ಘ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಶಿವರಾತ್ರಿ ಹಬ್ಬದಂದೇ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ.
ತುಮಕೂರು ಜಿಲ್ಲೆಯ ಕೊರಟಗೆರೆ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಮೂರು ಬಾರಿ ಸ್ಪರ್ಧೆ ಮಾಡಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಚನ್ನಿಗಪ್ಪ ಅವರು ಕುಮಾರಸ್ವಾಮಿ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದರು.
ತಮ್ಮ ವಿಶಿಷ್ಟಿವಾದ ಮಾತಿನ ಶೈಲಿಯಿಂದಲೇ ಇಡೀ ರಾಜ್ಯದ ಗಮನ ಸೆಳೆದಿದ್ದ ಅವರು ಕೊರಟಗೆರೆ ಮನೆ ಮಗ ಎಂದೇ ಸದಾ ಹೇಳಿಕೊಳ್ಳುತ್ತಿದ್ದರು. ಅದರಂತೆ ಕೊರಟಗೆರೆ ಕ್ಷೇತ್ರದಿಂದ ಯಾರೇ ಅವರ ಮನೆಗೆ ಹೋದರೂ ಬರಿಗೈಯಿಂದ ಕಳುಹಿಸುತ್ತಿರಲಿಲ್ಲ ಎಂದು ಕ್ಷೇತ್ರದ ಅನೇಕರು ಇಂದಿಗೂ ಅಭಿಪ್ರಾಯ ಪಡುತ್ತಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಬೈರನಾಯಕನಹಳ್ಳಿ ಮಜರೆ ಗ್ರಾಮ ದೊಡ್ಡಹುಚ್ಚಯ್ಯನಪಾಳ್ಯದ ಕೃಷಿಕರಾದ ಚಿನ್ನಮ್ಮ, ಚನ್ನರಾಯಪ್ಪ ಅವರ ಎರಡನೇ ಪುತ್ರರಾಗಿ ಸಿ. ಚನ್ನಿಗಪ್ಪ ಜನಿಸಿದರು.
ಪ್ರಾಥಮಿಕ ಹಾಗೂ ಪ್ರೌಢಶಾಲ ಶಿಕ್ಷಣ ಸ್ವಗ್ರಾಮದಲ್ಲಿ ಮುಗಿಸಿ ಬಿಎ, ಬಿಇಡಿ ಪದವಿಯನ್ನು ಮಾಡಿದರು.
ಆನಂತರ ಉದ್ಯೋಗ ಅರಸಿ ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿ ಕೆಲಸಕ್ಕೆ ಸೇರಿಕೊಂಡು ಬಹಳ ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದರು.
ನಂತರ ಪೊಲೀಸ್ ಪೇದೆ ಕೆಲಸಕ್ಕೆ ರಾಜಿನಾಮೆ ನೀಡಿ ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಸಣ್ಣ ಉದ್ಯಮವೊಂದನ್ನು ಪ್ರಾರಂಭಿಸಿದ ಅವರು ಕೆಲವೇ ವರ್ಷಗಳಲ್ಲಿ ದೊಡ್ಡ ಕೈಗಾರಿಕೋಧ್ಯಮಿಯಾಗಿ ಹೊರಹೊಮ್ಮಿದರು.
ದೊಡ್ಡಗೌಡರ ದತ್ತು ಪುತ್ರನಂತಿದ್ದ ಚನ್ನಿಗಪ್ಪ…
ವಕ್ಕಲಿಗ ಸಮುದಾಯಕ್ಕೆ ಸೇರಿದ ಅವರು ರಾಜಕೀಯದ ಹುಚ್ಚು ಹತ್ತಿಸಿಕೊಂಡು ಜೆಡಿಎಸ್ ವರಿಷ್ಟ ಎಚ್.ಡಿ.ದೇವೇಗೌಡರೊಂದಿಗೆ ನಿಕಟ ಸಂಪರ್ಕ ಬೆಳಿಸಿಕೊಂಡರು.
ದೇವೇಗೌಡ ಕುಟುಂಬದೊಂದಿಗೆ ಕೆಲವೇ ದಿನಗಳಲ್ಲಿ ಆಪ್ತತತೆ ಬೆಳೆಸಿಕೊಂಡು ಮನೆ ಮಗನಂತೆ ಗುರುತಿಸಿಕೊಂಡರು.
ಆನಂತರದ ದಿನಗಳಲ್ಲಿ 1993ರಲ್ಲಿ ಮೊದಲ ಬಾರಿಗೆ ಸಾಮಾನ್ಯ ಕ್ಷೇತ್ರಕ್ಕೆ ಮೀಸಲಿದ್ದ ಕೊರಟಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ತಮ್ಮ ರಾಜಕೀಯ ಭವಿಷ್ಯದ ಪರೀಕ್ಷೆಗೆ ಮುನ್ನುಡಿ ಬರೆದರು.
ಮೊದಲ ಬಾರಿಗೆ ಜೆಡಿಎಸ್ ನಿಂದ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಜಿ.ವೆಂಕಟಾಚಲಯ್ಯ ವಿರುದ್ಧ ಜಯ ಸಾಧಿಸಿ ಮೊದಲ ಭಾರಿಗೆ ಶಾಸಕರಾಗಿ ಆಯ್ಕೆಯಾದರು.
ಆಯ್ಕೆಯಾದ ನಂತರ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಬಲಿಷ್ಟಗೊಳಿಸುವುದರೊಂದಿಗೆ ಜಿಲ್ಲೆಯಾದ್ಯಂತ ಗುರುತಿಸಕೊಳ್ಳತೊಡಗಿದರು. 1998ರಲ್ಲಿ 2ನೇ ಬಾರಿಗೆ ಸ್ಪರ್ಧೆ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಸಿ.ವೀರಭದ್ರಯ್ಯ ಅವರ ವಿರುದ್ಧ ಮತ್ತೆ ಶಾಸಕರಾಗಿ ಆಯ್ಕೆಯಾದರು.
ಹ್ಯಾಟ್ರಿಕ್ ಗೆಲುವು ಸಾಧಿಸಿ ಸಚಿವರಾದರು…
ಮೂರನೇ ಬಾರಿಗೆ 2003ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೀಸೆ ರಂಗಸ್ವಾಮಿ ವಿರುದ್ಧ ಮೂರನೇ ಭಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿದ ಅವರು ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್, ಜೆಡಿಎಸ್ ಸಮಿಶ್ರ ಸರ್ಕಾರದಲ್ಲಿ ಮೊದಲ ಬಾರಿಗೆ ರೇಷ್ಮೆ ಖಾತೆ ಸಚಿವರಾಗಿ ಆಯ್ಕೆಯಾದರು.
ಆನಂತರ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮುರಿದು ಬಿದ್ದು, ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಮೊದಲನೇ ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾದಾಗ ಅರಣ್ಯ, ಅಬಕಾರಿ, ಪರಿಸರ, ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವರಾಗಿಯೂ ಕೆಲಸ ನಿರ್ವಹಿಸಿದರು. ಇದೇ ವೇಳೆ ತಮ್ಮ ಹುಟ್ಟೂರಾದ ಬೈರನಾಯ್ಕನಹಳ್ಳಿ ಬಳಿ ಡಾ. ಶಿವಕುಮಾರ ಮಹಾಸ್ವಾಮಿ ಅವರ ಹೆಸರಿನಲ್ಲಿ ಡಿಪ್ಲೊಮಾ, ಇಂಜಿನಿಯರ್ ಕಾಲೇಜು ಹಾಗೂ ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿಸಿದರು.
2008ರಲ್ಲಿ ಕ್ಷೇತ್ರ ಮರು ವಿಂಗಡೆಯಾಗಿ ಕೊರಟಗೆರೆ ಮೀಸಲು ಕ್ಷೇತ್ರವಾಗಿ ಬದಲಾದಾಗ ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಾಂಗ್ರೆಸ್ ನ ನರಸಿಂಹಸ್ವಾಮಿ ವಿರುದ್ಧ ಪರಾಭವಗೊಂಡರು. ಇದೇ ವೇಳೆ ಮಧುಗಿರಿ ಸಾಮಾನ್ಯ ಕ್ಷೇತ್ರದಲ್ಲಿ ಚನ್ನಿಗಪ್ಪ ಅವರ ಎರಡನೇ ಪುತ್ರ ಡಿ.ಸಿ.ಗೌರಿಶಂಕರ್ ಅವರು ಜೆಡಿಎಸ್ ನಿಂದ ಶಾಸಕರಾಗಿ ಮೊದಲ ಬಾರಿಗೆ ಆಯ್ಕೆಯಾದರು.
ಈ ವೇಳೆ ರಾಜ್ಯದಲ್ಲಿ ಬಿಜೆಪಿ ಬಹುಮತ ಸಾಧಿಸುವ ಮೂಲಕ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಬಹುಮತ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಬಿಜೆಪಿ, ಜೆಡಿಎಸ್ ಸಮಿಶ್ರ ಸರ್ಕಾರ ಇದ್ದ ವೇಳೆ ಸಚಿವರಾಗಿದ್ದ ಸಿ.ಚನ್ನಿಗಪ್ಪ ಅವರು ಮಾಡಿದ್ದರು ಎನ್ನಲಾದ ರೂ. 150 ಕೋಟಿ ಅಕ್ರಮ ಗಣಿ ಹಗರಣ ಬೆನ್ನಿಗಂಟಿಕೊಂಡು ಹೊಗೆಯಾಡತೊಡಗಿತು.
ಈ ವೇಳೆ ಆಪರೇಷನ್ ಕಮಲಕ್ಕೆ ಬಲಿಯಾಗಿ ಚುನಾವಣೆ ನಡೆದ ಆರೇ ತಿಂಗಳಲ್ಲಿ ಮಗ ಶಾಸಕ ಗೌರಿಶಂಕರ್ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಬಿಜೆಪಿ ಸೇರ್ಪಡೆಯಾದಾಗ ಚನ್ನಿಗಪ್ಪ ಕೂಡ ಬಿಜೆಪಿ ಸೇರ್ಪಡೆಯಾದರು.
ಮಧುಗಿರಿಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿ ಸೋಲುಂಡು ಮತ್ತೆ ಜೆಡಿಎಸ್ ಸೇರಿದರು...
ಆ ನಂತರ ನಡೆದ ಉಪಚುನಾವಣೆಯಲ್ಲಿ ಮಧುಗಿರಿ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧೆ ಮಾಡಿ ಜೆಡಿಎಸ್ ನ ಅನಿತಾಕುಮಾರಸ್ವಾಮಿ ವಿರುದ್ಧ ಸೋಲುಂಡರು. 2013 ಚುನಾವಣೆಯಲ್ಲಿ ಮತ್ತೆ ಜೆಡಿಎಸ್ ಸೇರ್ಪಡೆಗೊಂಡ ಚನ್ನಿಗಪ್ಪ ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಮತ್ತೆ ಕಣಕ್ಕಿಳಿದು ಕಾಂಗ್ರೆಸ್ ನ ವೆಂಕಟರಾಮು ವಿರುದ್ಧ ಸೋಲುಂಡರು. ಇದೇ ವೇಳೆ ಜೆಡಿಎಸ್ ತುಮಕೂರು ಜಿಲ್ಲಾ ಅಧ್ಯಕ್ಷರಾಗಿಯೂ ಕೆಲಸ ನಿರ್ವಹಿಸಿದರು.
ಕೊರಟಗೆರೆ ಕ್ಷೇತ್ರದಲ್ಲಿ ಮೂರು ಬಾರಿ ಹ್ಯಾಟ್ರಿಕ್ ಜಯ ಸಾಧಿಸಿ ಶಾಸಕ, ಸಚಿವರಾದ ಚನ್ನಿಗಪ್ಪ ಪಟ್ಟಣ ಸೇರಿದಂತೆ 18 ಹಳ್ಳಿಗಳಿಗೆ ಹೇಮಾವತಿ ಕುಡಿಯುವ ನೀರಿನ ಯೋಜನೆ, ಮಿನಿ ವಿಧಾನಸೌಧ, ನ್ಯಾಯಾಲಯ ಕಟ್ಟಡ ನಿರೀಕ್ಷಣಾ ಮಂದಿರ ಹಾಗೂ ಅನೇಕ ಜಿಲ್ಲಾ ಪಂಚಾಯತ್ ರಸ್ತೆಗಳನ್ನು ಲೋಕೋಪಯೋಗಿ ಇಲಾಖೆಗೆ ಸೇರಿಸುವ ಮೂಲಕ ಮೇಲ್ದರ್ಜೆಗೆ ಏರಿಸಿದರು.
ತಾಲ್ಲೂಕಿನ ಗಡಿಭಾಗದವಾದ ಬೊಮ್ಮಲದೇವಿಪುರ, ಐ.ಕೆ. ಕಾಲೋನಿಯಲ್ಲಿ ಸರ್ಕಾರಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಗೊಡ್ರಹಳ್ಳಿಯ ಬಿಸಿಎಂ ವಿದ್ಯಾರ್ಥಿ ನಿಲಯ, ದಾಸರಹಳ್ಳಿ, ಕೋಡ್ಲಹಳ್ಳಿ ಕಟ್ಟೆಬಾರೆ ಪ್ರೌಢಶಾಲೆ, ಪ್ರಥಮ ದರ್ಜೆ ಕಾಲೇಜು ಕಟ್ಟಡ, ಸಮುದಾಯ ಭವನಗಳು ಅವರ ಆಡಳಿತಾವಧಿಯಲ್ಲಿ ನಿರ್ಮಾಣವಾದವು.
ತಾಲ್ಲೂಕಿನ ಬಹುಬೇಡಿಕೆಯಾಗಿದ್ದ ಹೇಮಾವತಿ ಕುಡಿಯುವ ನೀರು ಯೋಜನೆ ಚನ್ನಿಗಪ್ಪ ಅವರ ಕಾಲದಲ್ಲಿ ಆದ ಮಹತ್ತರ ಯೋಜನೆಯಾಗಿದೆ.
ಪತ್ನಿ ಸಿದ್ದಗಂಗಮ್ಮ, ಶಾಸಕ ಡಿ.ಸಿ.ಗೌರಿಶಂಕರ್, ಕೈಗಾರಿಕೋದ್ಯಮಿ ಡಿ.ಸಿ.ಅರುಣ್ ಕುಮಾರ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಡಾ. ಶಿವಕುಮಾರ ಮಹಾಸ್ವಾಮಿ ವಿದ್ಯಾಲಯದ ಕಾರ್ಯದರ್ಶಿ ಡಿ.ಸಿ.ವೇಣುಗೋಪಾಲ ಸೇರಿದಂತೆ ಮೂರು ಜನ ಗಂಡು ಮಕ್ಕಳು ಹಾಗೂ ನಾಗರತ್ನ ಓರ್ವ ಪುತ್ರಿ ಇದ್ದಾರೆ.
ಕ್ಯಾಮೇನಹಳ್ಳಿ ಆಂಜನೇಯಸ್ವಾಮಿಯ ಪರಮ ಭಕ್ತ…
ಆಂಜನೇಯಸ್ವಾಮಿಯ ಪರಮ ಭಕ್ತರಾಗಿದ್ದ ಚನ್ನಿಗಪ್ಪ ರಥಸಪ್ತಮಿ ದಿನದಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಹಿನ್ನೆಯಲ್ಲಿ ತಾಲ್ಲೂಕಿನ ಕ್ಯಾಮೇನಹಳ್ಳಿ ಆಂಜನೇಯಸ್ವಾಮಿ ರಥೋತ್ಸವದ ದಿನ ವಿಶೇಷ ಪೂಜೆ ಹಾಗೂ ಭಕ್ತರಿಗೆ ಅನ್ನಸಂತರ್ಪಣೆಯನ್ನು ಪ್ರತೀ ವರ್ಷ ಇಂದಿಗೂ ನಡೆಸಿಕೊಂಡು ಬರುತ್ತಿದ್ದಾರೆ.
ತಾಲ್ಲೂಕಿನ ಯಾವುದೇ ಹಳ್ಳಿಯಿಂದ ಬಡಬಗ್ಗರು ಮದುವೆ, ಮುಂಜಿ ಎಂದು ಅವರ ಬಳಿ ಹೋದರೆ ಎಂದಿಗೂ ಯಾರನ್ನೂ ಬರಿಗೈಯಲ್ಲಿ ವಾಪಸ್ ಕಳಿಸಿಲ್ಲ. ಇಂದಿಗೂ ಕ್ಷೇತ್ರದ ಜನ ಯಾರೇ ಅವರ ಮನೆ ಹತ್ತಿರ ಹೋದರ ಊಟ, ತಿಂಡಿ ನೀಡದೆ ಕಳಿಸೋಲ್ಲ ಎಂದು ಕ್ಷೇತ್ರದ ಜನ ಅವರನ್ನು ಕೊಂಡಾಡುವರು.