ತುಮಕೂರು:
ಮಳವಳ್ಳಿ-ಪಾವಗಡ, ರಾಯದುರ್ಗ ರಾಜ್ಯ ಹೆದ್ದಾರಿಗೆ ಸುಂಕ ವಸೂಲಾತಿ ಕೇಂದ್ರ (ಟೋಲ್) ನಿರ್ಮಾಣ ಮಾಡುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಕೊರಟಗೆರೆ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ತುಮಕುರು-ಮಧುಗಿರಿ ರಸ್ತೆಯ ನಡುವೆ ಓಬಳಾಪುರ ಹಾಗೂ ಪೆಮ್ಮೇದೇವರಹಳ್ಳಿ ಬಳಿ ಎರಡು ಕಡೆಗಳಲ್ಲಿ ಸುಂಕ ವಸೂಲಾತಿ ಕೇಂದ್ರ ನಿರ್ಮಾಣಕ್ಕೆ ಸರ್ಕಾರ ಗುತ್ತಿಗೆ ನೀಡಿದೆ.
ಬರಗಾಲದಿಂದ ತತ್ತರಿಸುತ್ತಿರುವ ಈ ಭಾಗದ ಗ್ರಾಮೀಣ ಜನರ ಬದುಕಿಗೆ ಟೋಲ್ ನಿರ್ಮಾಣ ಮತ್ತೊಂದು ಬರೆಯಾಗಿದೆ. ಯಾವುದೇ ಮುನ್ಸೂಚನೆ ಹಾಗೂ ಸರ್ವೀಸ್ ರೋಡ್ ನಿರ್ಮಾಣ ಮಾಡದೇ ಏಕಾಏಕಿ ಟೋಲ್ ನಿರ್ಮಿಸುವ ಮೂಲಕ ಈ ಭಾಗದಲ್ಲಿ ದಿನ ನಿತ್ಯ ಓಡಾಡುವ ಜನರ ಆರ್ಥಿಕ ಬದುಕಿಗೆ ಕತ್ತರಿಯಾಕಲು ಸರ್ಕಾರ ಮುಂದಾಗಿದೆ.
ಟೋಲ್ ನಿರ್ಮಾಣ ರದ್ದು ಪಡಿಸದಿದ್ದರೆ ಕೊರಟಗೆರೆ, ಮಧುಗಿರಿ, ಪಾವಗಡ ತಾಲ್ಲೂಕಿನಾದ್ಯಂತ ಕನ್ನಡ ಪರ ಸಂಘನಟೆಗಳು ಹಾಗೂ ಸಾರ್ವಜನಿಕರಿಂದ ಉಗ್ರ ಹೋರಾಟ ಹಾಗೂ ಬಂದ್ ಮಾಡುವುದಾಗಿ ಪ್ರತಿಭಟನಾ ನಿರತರು ಕಾರ್ಯಕರ್ತರು ಎಚ್ಚರಿಸಿದರು.
ಸಾರ್ವಜನಿಕರು ನ್ಯಾಯ ಕೇಳಲು ಹೋದರೆ ಅವರ ವಿರುದ್ಧವೇ ಅಧಿಕಾರಿಗಳು ದಬ್ಬಾಳಿಕೆ ನಡೆಸುತ್ತಿದ್ದಾರೆ. ಟೋಲ್ ನಿರ್ಮಾಣದ ವಿರುದ್ಧ ಪ್ರತಿಭಟನೆಗೆ ಕನ್ನಡ ಪರ ಸಂಘಟನೆಗಳು ಪೊಲೀಸ್ ಇಲಾಖೆಯ ಅನುಮತಿ ಕೋರಲು ಹೋದರೆ ಅನುಮತಿ ನೀಡುವುದಿಲ್ಲ ಎಂದು ಹೇಳಿ ಕಳಿಸುತ್ತಾರೆ.
ಸಾರ್ವಜನಿಕರಿಗೆ ಆಗುವ ತೊಂದರೆಯನ್ನು ನಾವು ಖಂಡಿಸುವುದೇ ತಪ್ಪಾಗಿದೆ. ಹಾಗಾದರೆ ಜನಸಾಮಾನ್ಯರು ಯಾರ ಬಳಿ ನ್ಯಾಯ ಕೇಳಬೇಕು ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
ಸರ್ಕಾರ ಟೋಲ್ ನಿರ್ಮಾಣ ಕೈಬಿಡದೇ ಇದ್ದರೆ ಉಗ್ರ ಹೋರಾಟದ ಹಾದಿ ಇಡಿಯಬೇಕಾಗುತ್ತದೆ ಎಂದು ಕಾರ್ಯಕರ್ತರು ಎಚ್ಚರಿಸಿದರು.