ತುಮಕೂರು: ತಾಲ್ಲೂಕಿನ ದೇವರಾಯನದುರ್ಗದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮ ರಥೋತ್ಸವವಿಂದು ಸಾವಿರಾರು ಸಂಖ್ಯೆ ಭಕ್ತಾಧಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಬ್ರಹ್ಮರಥೋತ್ಸವಕ್ಕೆ ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್, ಮಾಜಿ ಶಾಸಕ ಸುರೇಶ್ ಗೌಡ, ಮಾಜಿ ಸಚಿವ ಸೊಗಡು ಶಿವಣ್ಣ, ಜಿಲ್ಲಾಧಿಕಾರಿ ಡಾ. ಕೆ.ರಾಕೇಶ್ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾಕಲ್ಯಾಣ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್, ಜಿಲ್ಲಾ ಪಂಚಾಯತ್ ಸದಸ್ಯ ಹುಚ್ಚಯ್ಯ, ತಹಶೀಲ್ದಾರ್ ಮೋಹನ್, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸವಿತಾ ಸೇರಿದಂತೆ ಮತ್ತಿತರ ಗಣ್ಯರು ಚಾಲನೆ ನೀಡಿದರು.
ರಥೋತ್ಸವಕ್ಕೆ ರಾಜ್ಯದ ನಾನಾ ಭಾಗಗಳಿಂದ ಭಕ್ತಗಣ ಸಾವಿರಾರು ಸಂಖ್ಯೆಯಲ್ಲಿ ಹರಿದು ಬಂದಿತ್ತು. ರಥೋತ್ಸವದ ವೇಳೆ ಭಕ್ತರು ರಥಕ್ಕೆ ಬಾಳೆಹಣ್ಣು ಮತ್ತು ಹೂವನ್ನು ಎಸೆಯುವುದು ಕಂಡುಬಂದಿತು. ಭಕ್ತರಿಗೆ ಅನ್ನದಾಸೋಹ, ಮಜ್ಜಿಗೆ, ಪಾನಕದ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾಡಳಿತವು ಜಾತ್ರೆಗೆ ಆಗಮಿಸುವ ಭಕ್ತರಿಗೆ ವಿಶೇಷ ಬಸ್‍ಗಳ ವ್ಯವಸ್ಥೆಯನ್ನು ಕಲ್ಪಿಸಿತ್ತು.