ತುಮಕೂರು ಜಿಲ್ಲೆ ಪಾವಗಡದಲ್ಲಿ ಲಂಚ ಸ್ವೀಕರಿಸಿ ಎಸಿಬಿ ಬಲೆಗೆ ಬಿದ್ದಿದ್ದ ಆರೋಪಿ ಪುರಸಭೆ ಕಿರಿಯ ಎಂಜಿನಿಯರ್ ಪ್ರಕಾಶ್ ಗೆ 5 ವರ್ಷ ಕಠಿಣ ಕಾರಾಗೃಹ ಶಿಕ್ಷೆ, 4 ಲಕ್ಷ ರೂ ದಂಡ ಹಾಗೂ ಎರಡನೇ ಆರೋಪಿ ವಾಟರ್ ಮನ್ ರಿಯಾಜ್ ಗೆ 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ, 5 ಸಾವಿರ ರೂ ದಂಡವನ್ನು 7 ನೇ ಜಿಲ್ಲಾ ಮತ್ತು ಸತ್ರ ನ್ಯಾಯಲಯ ವಿಧಿಸಿದೆ.
ಪಾವಗಡ ಪುರಸಭೆ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಬಿಲ್ ಮಂಜೂರು ಮಾಡಿಕೊಡಲು ಪುರಸಭೆ ಕಿರಿಯ ಎಂಜಿನಿಯರ್ ಪ್ರಕಾಶ್, ವಾಟರ್ ಮನ್ ರಿಯಾಜ್ 7 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ 3 ಲಕ್ಷ ರೂ ಹಣವನ್ನು ಪಡೆದುಕೊಂಡು, ಉಳಿಕೆ 4 ಲಕ್ಷ ರೂ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ಗುತ್ತಿಗೆದಾರ ಲಿಂಗಮಯ್ಯ 8, ಸೆಪ್ಟಂಬರ್- 2016 ರಂದು ಜಿಲ್ಲಾ ಭ್ರಷ್ಟಾಚಾರ ನಿಗ್ರಹ ಧಳಕ್ಕೆ ದೂರು ನೀಡಿದ್ದರು. ಕಿರಿಯ ಎಂಜಿನಿಯರ್ 1 ಲಕ್ಷ ರೂ ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದರು.
ತನಿಖಾಧಿಕಾರಿ ಎಸಿಬಿ ಇನ್ ಸ್ಪೆಕ್ಟರ್ ವಿ.ಎ. ಗುರುಪ್ರಸಾದ್ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಮಾರ್ಚ್-16 ಸೋಮವಾರದಂದು ಜಿಲ್ಲಾ ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ವಿಶೇಷ ವಕೀಲ ಆರ್.ಪಿ ಪ್ರಕಾಶ್ ವಾದ ಮಂಡಿಸಿದ್ದಾರೆ.
ಇದೀಗ ಮತ್ತೆ ಪುರಸಭೆ ಕಛೇರಿಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು, ಭ್ರಷ್ಟ ಅಧಿಕಾರಿಗಳಿಗೆ ಯಾರಾದರೂ ಬುದ್ದಿಕಲಿಸಲಿದ್ದಾರೆಯೇ ಎಂದು ಜನತೆ ಕಾದು ನೋಡುತ್ತಿದ್ದಾರೆ.