ತುಳಸೀತನಯ
ತುಮಕೂರು: ಅಬ್ಬಾ ಎಂತಾ ಕಾಲ ಬಂತಪ್ಪ.. ಒಂದು ವೈರಾಣು ಇಡೀ ಜಗತ್ತನ್ನೆ ನಿಬ್ಬೆರಗಾಗಿಸಿ ಜನರನ್ನ ನಿಶ್ಚಲಗೊಳಿಸಿದೆ.
ಬಹುಶಃ ಪ್ರತಿಯೊಬ್ಬ ಮನುಷ್ಯನಿಗೂ ಈಗ ಜೀವ ಭಯ ಪ್ರಾರಂಭವಾಗಿದೆ. ದೇವರು, ಆಚರಣೆ ಭಯ, ಭಕ್ತಿ ಇವೆಲ್ಲವನ್ನೂ ಮರೆತು ನಾನೇ ಎಲ್ಲ. ನನ್ನಿಂದಲೇ ಎಲ್ಲ ಎಂದು ಬೀಗುತ್ತಿದ್ದ ಹುಲುಮಾನವನಿಗೆ ಪ್ರಕೃತಿ ಉತ್ತರ ಕೊಡಲು ಹೊರಟಿದೆ.
ಈ ಹಿಂದೆ ಯಾವುದೇ ವೈಜ್ಞಾನಿಕತೆ ಇಲ್ಲದ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗ ಹರಡಿದಾಗ ಇಡೀ ಊರೇ ಸ್ಮಶಾನವಾಗಿ ಮಾರ್ಪಡುತ್ತಿತ್ತು. ಇಂದು ಎಲ್ಲ ರೀತಿಯ ವೈಜ್ಞಾನಿಕ ಸವಲತ್ತುಗಳಿದ್ದರೂ ವೈರಾಣು ಹೆಸರು ಕೇಳಿಯೇ ಜನ ಬದುಕ್ಕಿದ್ದೂ ಊರೂರೇ ಸ್ಮಶಾನ ಮೌನವಾಗಿಸಿದೆ.
ಇಂದು ಪ್ರಾಣಿ, ಪಕ್ಷಿಗಳು ನಿಸ್ಸಂದೇಹ, ನಿರ್ಭಯವಾಗಿ ಓಡಾಡ್ತಿದಾವೆ, ಹಾರಾಡ್ತಿದಾವೆ.
ಆದರೆ ಮನುಷ್ಯ ತನಗೆ ತಾನೆ ಬಂಧಿಯಾಗಿದ್ದಾನೆ.
ದಿನ ಜನಜಂಗುಳಿ ಇರುತ್ತಿದ್ದ ರಸ್ತೆಗಳು ಹಾಳು ಹಾದಿಯಂತೆ ಕಾಣುತ್ತಿದೆ. ಶಬ್ಧಮಾಡುತ್ತ ಓಡಾಡುತ್ತಿದ್ದ ವಾಹನಗಳು ಬಾಯಿ ಮುಚ್ಚಿಕೊಂಡು ಮೌನ ವಹಿಸಿ ನಿಂತಿವೆ. ಜನರಿಂದ ಕೂಡಿದ್ದ ಪಟ್ಟಣಗಳು ಪಾಳು ಬಿದ್ದ ಊರಿನಂತೆ ಕಾಣುತ್ತಿವೆ.
ಜನರ ಓಡಾಟವಿಲ್ಲ. ಮನೆಯಿಂದ ಯಾರೂ ಹೊರಬರಲು ಸಿದ್ದರಿಲ್ಲ. ಹೊರಗೆ ಏನಾಗುತ್ತಿದೆ ಎಂಬುದರ ಪರಿವೇ ಜನಕ್ಕಿಲ್ಲ.
ಇಂತ ಪರಿಸ್ಥಿತಿ ಬರಬಹುದು ಎಂದು ಯಾರೂ ನಿರೀಕ್ಷಿಸಿಯೂ ಇರಲಿಲ್ಲ. ಯಾವ ಪೊಲೀಸು, ಕಾನೂನು, ಕಟ್ಲೆ ಮಾಡಲಾಗದ ಸ್ವ-ಬಂಧನ ಇಂದು ಕೊರೊನಾ ವೈರಾಣು ಮಾಡಿದೆ.