ಜಿಲ್ಲೆಯಲ್ಲಿ ಕರೊನಾ ಸಾವು ಸಂಭವಿಸಿದರೂ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಅಧಿಕಾರಿಗಳೊಂದಿಗೆ ಸಭೆ ನಡೆಸಿಲ್ಲ. ಸಿದ್ಧತೆಗಳ ಬಗ್ಗೆ ಪರಿಶೀಲನೆ ಮಾಡಬೇಕು. ಅಧಿಕಾರಿಗಳು, ವೈದ್ಯರಿಗೆ ಸ್ಥೈರ್ಯ, ಅವರ ಕೆಲಸಕ್ಕೆ ಮುಂದಾಳತ್ವ ವಹಿಸಬೇಕು ಎಂದು ಪಬ್ಲಿಕ್ ಸ್ಟೋರಿ.ಇನ್ ವರದಿ ಪ್ರಕಟಿಸಿತ್ತು. ಇಂದು ಸಚಿವರು ಸಭೆ ನಡೆಸಿದ್ದಾರೆ. ಇದರೊಂದಿಗೆ ಕರೊನಾ ವಿರುದ್ಧ ಹೋರಾಟ ಮತ್ತೊಂದು ಮಜಲನ್ನು ಪಡೆದುಕೊಂಡಿದೆ.
Tumkuru: ಸರ್ಕಾರದ ಸೂಚನೆಯಂತೆ ಖಾಸಗಿ ಕ್ಲಿನಿಕ್ ಮತ್ತು ಆಸ್ಪತ್ರೆಗಳನ್ನು ಕಡ್ಡಾಯವಾಗಿ ತೆರೆಯವುದು ಮತ್ತು ಬಾಡಿಗೆ ಮನೆಯಲ್ಲಿರುವ ವೈದ್ಯರನ್ನು ಖಾಲಿ ಮಾಡುವವರ ವಿರುದ್ಧ ಶಿಸ್ತು ಕ್ರಮವಹಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಸಣ್ಣ ನೀರಾವರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಮಧುಗಿರಿ ಪಟ್ಟಣದಲ್ಲಿಂದು ತಾಲ್ಲೂಕಿನಲ್ಲಿ ಕೊರೋನಾ ನಿಯಂತ್ರಣಕ್ಕೆ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಅವರು ಮಾತನಾಡಿದರು.
ಈಗಾಗಲೇ ಕೋವಿಡ್-೧೯ ದೇಶದೆಲ್ಲೆಡೆ ವ್ಯಾಪಕ ಹರಡುತ್ತಿರುವ ಹಿನ್ನೆಲೆಯಲ್ಲಿ ೩ನೇ ಹಂತಕ್ಕೆ ಹೋಗದಂತೆ ತಡೆಗಟ್ಟುವ ನಿಟ್ಟಿನಲ್ಲಿ ಖಾಸಗಿ ವೈದ್ಯರುಗಳು ತಮ್ಮ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳನ್ನು ತೆರೆದು ಸ್ಥಳೀಯರಿಗೆ ಅನುಕೂಲವಾಗುವಂತೆ ಸಹಕರಿಸಬೇಕು ಎಂದರು.
ಜಿಲ್ಲಾಸ್ಪತ್ರೆಯನ್ನು ಕೋವಿಡ್-೧೯ ಆಸ್ಪತ್ರೆಯನ್ನಾಗಿ ಪರಿರ್ವತಿಸಲಾಗಿದ್ದು, ಕೊರೋನಾ ಶಂಕಿತರಿಗೆ ಜಿಲ್ಲಾಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುವುದು. ಜಿಲ್ಲಾಸ್ಪತ್ರೆಗೆ ಬರುವ ಗರ್ಭಿಣಿಯರನ್ನು ಶ್ರೀದೇವಿ ಆಸ್ಪತ್ರೆಗೆ ಶಿಫ್ಟ್ ಮಾಡಿ ಅವರಿಗೆ ಸರ್ಕಾರದ ಸೌಲಭ್ಯಗಳನ್ನು ನೀಡಲಾಗುವುದು. ಸಾರ್ವಜನಿಕರು ಆಂತಕಪಡುವ ಅಗತ್ಯವಿಲ್ಲ ಎಂದರು.
ಜಿಲ್ಲಾಸ್ಪತ್ರೆಗೆ ದೂರ ಇರುವ ತಾಲೂಕುಗಳಲ್ಲಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗುವುದು. ಜಿಲ್ಲೆಯಲ್ಲಿ ೭೦-೮೦ ವೆಂಟಿಲೇಟರ್‌ಗಳು ಲಭ್ಯವಿದ್ದು, ಅಗತ್ಯವಿರುವ ವೆಂಟಿಲೇಟರ್‌ಗಳನ್ನು ರಾಜ್ಯ ಸರ್ಕಾರವು ಖರೀದಿಸಲು ಮುಂದಾಗಿದೆ. ಇದರ ಜೊತೆಗೆ ಯಾವುದೇ ಕೊರತೆಯಾಗದಂತೆ ಮುನ್ನಚ್ಚರಿಕಾ ಕ್ರಮವಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಜನರಿಗೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಯಾವುದೇ ತೊಂದರೆಯಾಗುವುದಿಲ್ಲ. ವೈದ್ಯಕೀಯ ಸೇರಿದಂತೆ ಅಗತ್ಯ ವಸ್ತುಗಳ ಸರಕು ಸಾಗಾಟ ವಾಹನಗಳು ಓಡಾಡುತ್ತವೆ ಎಂದರು.
ಔಷಧಿ, ಕ್ಲಿನಿಕ್ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಮಾತ್ರ ಆಯಾ ತಾಲೂಕು ತಹಶೀಲ್ದಾರ್ ಅನುಮತಿ ಪಡೆದು ಓಡಾಡಬಹುದು. ಅನುಮತಿ ನೀಡಿದ್ದಾರೆಂದು ದುರುಪಯೋಗ ಮಾಡಿಕೊಂಡರೆ ಶಿಸ್ತು ಕ್ರಮವಹಿಸಲಾಗುವುದು. ಅಲ್ಲದೇ ದ್ವಿಚಕ್ರ ವಾಹನಗಳ ಓಡಾಟ ಹೆಚ್ಚಾಗಿದ್ದು, ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್ ಹಾಕುವುದಕ್ಕೂ ಮೊದಲು ಸೂಕ್ತ ಕಾರಣಗಳನ್ನು ನೀಡಿದ ನಂತರ ಪೆಟ್ರೋಲ್ ಹಾಕುವಂತೆ ತಿಳಿಸಬೇಕು. ಸರಕು, ಸಾಗಾಟ ವಾಹನಗಳಿಗೆ ಡೀಸೆಲ್ ಅವಶ್ಯಕತೆಯಿದ್ದು ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದರು.
ಏಪ್ರಿಲ್ ೧೪ರವರೆಗೆ ಶಾಲಾ-ಕಾಲೇಜು, ಹಾಸ್ಟೆಲ್, ಕಲ್ಯಾಣ ಮಂಟಪ ತೆರೆಯುವಂತಿಲ್ಲ. ಅಲ್ಲದೇ ಮದುವೆ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯದಂತೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.