ದೇವರಹಳ್ಳಿ ಧನಂಜಯ
ವಸ್ತಿಲಲಿ ಹೊಂಚಿ ಕುಂತಿದೆ ಅಪಾಯ!
ವಾಸ್ತವ ತಿಳಿಯದ ಮುಗ್ಧ
ಕೊನೇಕಾರ ರಂಗಯ್ಯ ರೋಟಿ ಕಟ್ಟಿದ್ದಾನೆ.
ಅವನ ಮಗ
ನಕ್ಷತ್ರಗಳ ಕೀಳಲು ಜಾವಣಿಗೆ ಎತ್ತಿದ್ದಾನೆ.
“ಮಗನ ಚೆನ್ನಾಗಿ ಓದಿಸಿ ಆಫೀಸರ್ ಮಾಡ್ತೀನಿ
ಎಷ್ಟೇ ಕರ್ಚ್ ಆಗಲಿ”
ಹೇಳಿದ ಮಾತಲ್ಲಿ ವಿಶ್ವಾಸ ಕಾಣಲಿಲ್ಲ
ಎದೆ ಜಾತ್ರೆಯಲಿ
ಕನಸುಗಳು ಮದಾಸಿ ನಿಂತಿಲ್ಲ
ಸಂಕ್ರಾಂತಿ ಬಂತು ಬೆಟ್ಟ ಹತ್ತಬೇಕು
ಹೊನ್ನ ಮರಡಿ ಪರಿಷೆ
ಬಂದೇಬಿಡ್ತು ಹರಕೆ ತೀರಿಸಬೇಕು
ನನ್ನ ಮಗನಿಗೆ
ದೇವರು ಒಳ್ಳೆಯದು ಮಾಡಬೇಕು
ಗೊತ್ತಿಲ್ವಾ ಬಂದೈತೆ ಕೂರೋನ ಶಕ್ತಿ ಎಲ್ಲೈತೆ
ದೇವರಿಗೆ ಅಂದೆ
“ಪಾಪಿಗಳು ಉಲ್ಡೋಗ್ಲಿ, ಪಾಪ ದೇವರು!”
ಜಾವಣಿಗೆ ಎಳೆದ ರಂಗಯ್ಯ
ಚರಕ್!ಗೊನೆ ಬಿತ್ತು.ಪಾಪ-ಪುಣ್ಯದ ಮಾತು.
ಸಂಕ್ರಮಣದ ಸೂರ್ಯನಿಗೆ
ಗ್ರಹಣ ಬಡಿದಿದೆ.
ಬಿಸಿಲ ಚಾಟಿಯ ಸರದಾರನಿಗೆ
ಏನೋ ಅಳುಕು.
ಒಳಒಳಗೆ ಎದೆಯ ಚಳುಕು.
ನೊಗ ಕಳಚಿವೆ ಸಪ್ತಾಶ್ವಗಳು;
ಕಡಗೀಲು ಕಳಚಿ,
ಸಪ್ತಮಿ ರಥ ಮುರಿದುಬಿದ್ದಿದೆ.
ಪಥಭ್ರಾಂತವಾಗಿದೆ
ಹೊತ್ತಿನ ತುತ್ತಿಗೆ ದುಡಿವವರ ಬದುಕು.