ತುಮಕೂರು
ಇತ್ತೀಚೆಗೆ ಎಲ್ಲೆಲ್ಲೂ ನ್ಯೂಟ್ರಿಷನ್ ಪುಡ್ ಗಳದ್ದೆ ಹಾವಳಿ. ಕೆಲವರು ಸಣ್ಣಗಾಗಲು, ಇನ್ನೂ ಕೆಲವರು ದಪ್ಪಗಾಗಲು ಹಾಗೂ ಇನ್ನೂ ಕೆಲವರು ಬೇರೆ ಬೇರೆ ಕಾಯಿಲೆಗಳಿಗೆ ನ್ಯೂಟ್ರಿಷನ್ ಫುಡ್ ನ ಮೊರೆಹೋಗುತ್ತಿದ್ದಾರೆ.
ಇದೇ ರೀತಿ ನ್ಯೂಟ್ರಿಷನ್ ಫುಡ್ ತೆಗೆದುಕೊಂಡ ಹೋಮ್ ಗಾರ್ಡ್ ಒಬ್ಬರು ಅನಾರೋಗ್ಯಕ್ಕೆ ತುತ್ತಾಗಿ ಮಸಣಕ್ಕೆ ಸೇರಿದ್ದಾರೆ.
ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಗೃಹರಕ್ಷಕ ದಳದ ಘಟಕಾಧಿಕಾರಿ ಹನುಮಂತರಾಜು(36) ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.
ಹನುಂತರಾಜು ಅನಾರೋಗ್ಯದಿಂದಾಗಿ ಏ.29ರ ಬುಧವಾರ ತಡರಾತ್ರಿ ತುಮಕೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ತಾಲ್ಲೂಕಿನ ಕಸಬಾ ಹೋಬಳಿ ಹುಲೀಕುಂಟೆ ಗ್ರಾಪಂ ವ್ಯಾಪ್ತಿಯ ಗೌರಗಾನಹಳ್ಳಿ ಗ್ರಾಮದ ರಂಗಯ್ಯನ ಮಗನಾದ ಹನುಮಂತರಾಜು ಸಣ್ಣಗಾಗುವ ಕಾರಣದಿಂದಾಗಿ ಈಚೆಗೆ ಪಟ್ಟಣದಲ್ಲಿ ನ್ಯೂಟ್ರೀಷನ್ ಫುಡ್ ತೆಗೆದುಕೊಳ್ಳುತ್ತಿದ್ದರು ಎನ್ನಲಾಗಿದೆ.
ಇದರಿಂದಾಗಿ ಏ.29ರಂದು ಅನಾರೋಗ್ಯಕ್ಕೆ ಒಳಗಾಗಿದ್ದರಿಂದ ಆಸ್ಪತ್ರೆಗೆ ಸೇರಿದ್ದರು. ಚಿಕಿತ್ಸೆಗೆ ಸ್ಪಂಧಿಸಿದೆ ಶುಕ್ರವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ.
ಸಾವಿಗೆ ನ್ಯೂಟ್ರಿಷನ್ ಫುಡ್ ತೆಗೆದುಕೊಂಡಿರುವುದೇ ಕಾರಣ ಎಂದು ವೈದ್ಯರು ಹೇಳಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಈಚೆಗೆ ಕೊವಿಡ್-19 ಕರ್ತವ್ಯದಲ್ಲಿದ್ದ ಹನುಮಂತರಾಜು ಉತ್ತಮ ಕೆಲಸ ನಿರ್ವಹಣೆ ಮಾಡುವ ಪ್ರಶಂಸೆಗೆ ಒಳಗಾಗಿದ್ದರು.
ತುಮಕೂರು, ಮಧುಗಿರಿ, ಕೊರಟಗೆರೆ, ಕೋಳಾಲ ಮತ್ತು ಹೊಳವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ಮತ್ತು ಅಬಕಾರಿ ಇಲಾಖೆಯಲ್ಲಿ 18ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಕರ್ತವ್ಯದಲ್ಲಿದ್ದ ಅವರ ಸಾವಿನ ಸುದ್ದಿ ತಿಳಿದ ಪೊಲೀಸ್ ಸಿಬ್ಬಂದಿ ತೀವ್ರ ಸಂತಾಪ ಸೂಚಿಸಿದರು.
ಸ್ಥಳಕ್ಕೆ ಕೊರಟಗೆರೆ ಪೊಲೀಸ್ ಠಾಣೆ ಸಿಪಿಐ ಎಫ್.ಕೆ.ನದಾಫ್, ಪಿಎಸ್ಐ ಭೇಟಿ ನೀಡಿದ್ದರು. ಮೃತರಿಗೆ ಪತ್ನಿ ಹಾಗೂ 6 ವರ್ಷದ ಪುತ್ರಿ ಇದ್ದಾರೆ.
ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಉತ್ತಮ ಕರ್ತವ್ಯ ನಿರ್ವಹಿಸುತ್ತಿದ್ದ ಹನುಮಂತರಾಜು ಅವರು ಅಕಾಲಿಕ ಮರಣಕ್ಕೆ ತುತ್ತಾದ ಕಾರಣ ಚಿಕ್ಕ ಮಗು ಇರುವ ಅವರ ಕುಟುಂಬಕ್ಕೆ ಸರ್ಕಾರ ನೆರವಿನ ಹಸ್ತ ಚಾಚಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.