Publicstory. in
Tumkuru: ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಸದ್ದಿಲ್ಲದೇ ರಾಜ್ಯದಲ್ಲಿ ಜಾರಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.
ಇಂದು ಮಧ್ಯಾಹ್ನ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಮಸೂದೆಗೆ ಒಪ್ಪಿಗೆ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಆ ಕಾಯ್ದೆ ಜಾರಿಗೊಳಿಸಲು ವೈಯಕ್ತಿವಾಗಿ ನನಗೂ ಇಷ್ಟ ಇಲ್ಲ. ಆದರೆ ನಮ್ಮದೇ ಸರ್ಕಾರದ ವಿರುದ್ಧ ಮಾತನಾಡಲು ಸಾಧ್ಯವಿಲ್ಲ ಎಂದು ಸಚಿವರೊಬ್ಬರು publicstory.in ಗೆ ತಿಳಿಸಿದರು.
ಮಸೂದೆ ಜಾರಿಯಾದರೆ ಎಪಿಎಂಸಿಗಳು ದುರ್ಬಲವಾಗಲಿದವೆ. ಇದು ರೈತರ ಹಕ್ಕನ್ನು ಮೊಟಕುಗೊಳಿಸಿದೆ ಎಂದು ರೈತ ಸಂಘಟನೆಗಳು ಅಭಿಪ್ರಾಯಪಟ್ಟಿವೆ.
ಎಪಿಎಂಸಿ ಕಾಯಿದೆ ಪ್ರಕಾರ ರೈತರು ತಮ್ಮ ಉತ್ಪನ್ನಗಳ ಎಪಿಎಂಸಿಯ ಮಂಡಿಗಳಲ್ಲಿ ಮಾರಾಟ ಮಾಡಬೇಕು.ಹೊಸ ಮಸೂದೆ ಜಾರಿಯಾದರೆ ಎಪಿಎಂಸಿ ವರೆಗೂ ಕೂಡ ರೈತರ ಉತ್ಪನ್ನಗಳ ಖರೀದಿ ಮಾಡಲು ಅವಕಾಶ ಸಿಗಲಿದೆ. ಅಲ್ಲದೇ ಎಪಿಎಂಸಿಯೊಳಗೆ ಮಾರುಕಟ್ಟೆ ಸೆಸ್ ವಸೂಲಿ ಮಾಡಲು ಅವಕಾಶ ಕೊಟ್ಟರೆ ಹೊರಗಡೆ ಇದಕ್ಕೆ ವಿನಾಯಿತಿ ನೀಡಲಾಗಿದೆ.
ಹೊಸ ಮಸೂದೆ ಜಾರಿಗೆ ಮಹಾರಾಷ್ಟ್ರ ಸರ್ಕಾರ ಮುಂದಾಗಿತ್ತು. ವಿಧಾನಸಭೆಯಲ್ಲೂ ಕೂಡ ಮಸೂದೆಗೆ ಅಂಗೀಕಾರವನ್ನು ನೀಡಲಾಗಿತ್ತು. ಆದರೆ ರೈತರು ಮತ್ತು ವ್ಯಾಪಾರಿಗಳ ವಿರೋಧದ ನಡುವೆ ಮಸೂದೆ ವಾಪಸ್ ಪಡೆಯಲಾಗಿದೆ.
ಕರ್ನಾಟಕದಲ್ಲಿ ಯಾವುದೇ ಚರ್ಚೆ ಇಲ್ಲದೇ ಕೇಂದ್ರ ಸರ್ಕಾರದ ಈ ಕಾಯ್ದೆ ಜಾರಿಗೆ ತರಲು ಹೊರಟಿರುವ ರಾಜ್ಯ ಸರಕಾರ ಕ್ರಮ ಸರಿ ಇಲ್ಲ ಎಂದು ಬೆಲೆ ಕಾವಲು ಸಮಿತಿಯ ರಾಜ್ಯ ಕಾರ್ಯದರ್ಶಿ ಶ್ರೀಕಾಂತ್ ಕೇಳಿ ಹೇಳಿದ್ದಾರೆ.
ಈ ಮಸೂದೆ ಜಾರಿಯಾದರೆ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ರೈತರ ಉತ್ಪನ್ನಗಳ ಬೆಲೆ ಕಳೆದುಕೊಳ್ಳಲಿವೆ ಎಂದು ವಕೀಲ ಸಿ.ಕೆ. ಮಹೇಂದ್ರ ಹೇಳಿದ್ದಾರೆ.
ಎಪಿಎಂಸಿ ಹೊರಭಾಗದಲ್ಲಿ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿರುವುದರಿಂದ ಉತ್ಪನ್ನಗಳ ಅಂಕಿ ಅಂಶಗಳು ಸಿಗಲು ಕೂಡ ಕಷ್ಟವಾಗಲಿದೆ. ಇದು ಬೆಂಬಲ ಬೆಲೆ ನಿರ್ಧರಿಸುವಲ್ಲಿ ತೊಡಕನ್ನುಂಟು ಮಾಡಲಿದೆ ಎಂದು ಮಾರುಕಟ್ಟೆ ತಜ್ಞ ರು ಹೇಳುತ್ತಾರೆ.
ಕಾಯ್ದೆಯು ಮೇಲ್ನೋಟಕ್ಕೆ ಪ್ರಗತಿಪರ ಎಂದು ಕಂಡು ಬಂದರೂ ಆದರೆ ಇಡೀ ಕೃಷಿ ವಲಯವನ್ನು ಕಾರ್ಪೊರೇಟ್ ವಲಯಕ್ಕೆ ಮೀಸಲಿಡುವ ಹುನ್ನಾರ ಇದರ ಹಿಂದೆ ಅಡಗಿದೆ. ಇದರೊಂದಿಗೆ ಇಡೀ ಎಪಿಎಂಸಿಗಳನ್ನು ದುರ್ಬಲಗೊಳಿಸಲಿದೆ ಎಂದು ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಯಾವಾಗಲೂ ರೈತ ಪರವಾಗಿ ಯೋಚನೆ ಮಾಡುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಈ ಕಾಯ್ದೆ ಜಾರಿಗೆ ಅವಕಾಶ ಮಾಡಿಕೊಡಬಾರದು ಹಲವು ವ್ಯಾಪಾರಿಗಳು, ರೈತ ಮುಖಂಡರು ಅಭಿಪ್ರಾಯಪಟ್ಟರು.